Advertisement

ಹೋಟೆಲ್‌ ಊಟ ಅಗ್ಗ: GST ಶೇ.12ರಿಂದ ಶೇ.5ಕ್ಕೆ ಇಳಿಕೆಗೆ ಒಪ್ಪಿಗೆ

07:56 AM Oct 07, 2017 | |

ನವದೆಹಲಿ: ಅಂತೂ ಮೂರು ತಿಂಗಳ ಹಗ್ಗ ಜಗ್ಗಾಟದ ನಂತರ ಕೇಂದ್ರ ಸರ್ಕಾರ ಹೋಟೆಲ್‌ ಸೇರಿದಂತೆ ಕೆಲವು ದಿನನಿತ್ಯದ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯನ್ನು ಕಡಿತಗೊಳಿಸಿದೆ. ಇದರ ಜತೆಯಲ್ಲೇ 50 ಸಾವಿರ ರೂ. ಮೇಲಿನ ಮೌಲ್ಯದ ಚಿನ್ನಾಭರಣ ಖರೀದಿಗೆ ಪ್ಯಾನ್‌ ಕಡ್ಡಾಯ ಮಾಡಿದ್ದ ಕೇಂದ್ರ ಸರ್ಕಾರ, ತನ್ನದೇ ಆದೇಶವನ್ನು ವಾಪಸ್‌ ತೆಗೆದುಕೊಂಡಿದೆ. ನವದೆಹಲಿಯಲ್ಲಿ ಶುಕ್ರವಾರ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ನೇತೃತ್ವದಲ್ಲಿ ನಡೆದ ಜಿಎಸ್‌ಟಿ ಮಂಡಳಿಯ 22ನೇ ಸಭೆಯಲ್ಲಿ ಜನ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಮೇಲಿನ ತೆರಿಗೆಯನ್ನೂ ಇಳಿಕೆ ಮಾಡಿದೆ.

Advertisement

ದಿನ ನಿತ್ಯ ಬಳಕೆ ಮಾಡುವ 27 ವಸ್ತುಗಳ ತೆರಿಗೆ ಇಳಿಕೆ ಮಾಡಿರುವ ಜಿಎಸ್‌ಟಿ ಮಂಡಳಿ, ಎಸಿ ರಹಿತ ರೆಸ್ಟೊರೆಂಟ್‌ಗಳಲ್ಲಿನ ತೆರಿಗೆಯನ್ನೂ ಶೇ.12 ರಿಂದ ಶೇ.5ಕ್ಕೆ ಕಡಿತ ಮಾಡಿದೆ. ಈ ಮೂಲಕ ಹೊಟೇಲ್‌ನಲ್ಲೇ ಊಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿ ದ್ದವರಿಗೆ ಕೊಂಚ ರಿಲೀಫ್ ನೀಡಲಾಗಿದೆ. ಇದರ ಬೆನ್ನಲ್ಲೇ ಹವಾನಿಯಂತ್ರಿತ
ರೆಸ್ಟೊರೆಂಟ್‌ಗಳಲ್ಲಿನ ತೆರಿಗೆ ದರವನ್ನೂ ಶೇ.18 ರಿಂದ ಶೇ.12ಕ್ಕೆ ಇಳಿಸಲು ತಾತ್ವಿಕವಾಗಿ ಒಪ್ಪಿಗೆ ನೀಡಲಾಗಿದೆ. ಆದರೆ ಈ ಬಗ್ಗೆ ಸಚಿವರ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗಿದ್ದು, ಇದು ಎರಡು ವಾರಗಳ ಕಾಲ ಪರಾಮರ್ಶೆ ನಡೆಸಿ ವರದಿ ನೀಡಲಿದೆ. ಈ ಬಳಿಕವಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಸಭೆ ನಂತರ ಸುದ್ದಿಗೋಷ್ಠಿ ನಡೆಸಿದ ಅರುಣ್‌ ಜೇಟ್ಲಿ ಹೇಳಿದ್ದಾರೆ.

ಈ ಮಧ್ಯೆ, ಜಿಎಸ್‌ಟಿ ಮಂಡಳಿಯ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಗತಿಸಿದ್ದಾರೆ. ಜನರ ಕಷ್ಟ ಕೋಟಲೆಗಳನ್ನು ಗಮನದಲ್ಲಿರಿಸಿಕೊಂಡು ಜಿಎಸ್‌ಟಿ ಮಂಡಳಿ ತೆರಿಗೆ ಇಳಿಕೆ ಮಾಡುವ ನಿರ್ಧಾರ ತೆಗೆದುಕೊಂಡಿದೆ ಎಂದು ಅರುಣ್‌ ಜೇಟ್ಲಿ ಅವರನ್ನು ಶ್ಲಾಘಿಸಿದ್ದಾರೆ.  ಆದರೆ ಮೋದಿ ಅವರ ಈ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು, ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುವ ಬದಲು, ಜನರ ಹಿತವನ್ನು ಪರಿಗಣಿಸಿ “ಒಂದು ದೇಶ, ಒಂದು ತೆರಿಗೆ’ಯನ್ನು ಸುಧಾರಣೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಅಲ್ಲದೆ ಇದೆಲ್ಲದಕ್ಕಿಂತ ಮುಖ್ಯವಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಯೊಳಗೆ ತನ್ನಿ. ಪೆಟ್ರೋಲಿಯಂ ವಸ್ತುಗಳಿಂದ ಭಾರಿ ಲಾಭ ಮಾಡಿಕೊಳ್ಳಲಾಗುತ್ತಿದೆ. ಲಾಭದ ವಿಚಾರವನ್ನು ಬದಿಗಿಟ್ಟು ಉತ್ತಮ ತೆರಿಗೆ ನೀತಿ ಜಾರಿಗೆ ತನ್ನಿ ಎಂದು ಆಗ್ರಹಿಸಿದ್ದಾರೆ.

ಡೀಸೆಲ್‌ ಎಂಜಿನ್‌ ಪಂಪ್‌ಸೆಟ್‌ನ ಬಿಡಿ ಭಾಗಗಳು, ಬ್ರಾಂಡ್‌ ರಹಿತ ಆಯುರ್ವೇದ ಔಷಧ, ಬ್ರಾಂಡ್‌ ರಹಿತ ನಮ್‌ಕಿನ್‌ 
ಸೇರಿದಂತೆ ಒಟ್ಟು 27 ಉತ್ಪನ್ನಗಳ ಮೇಲಿನ ತೆರಿಗೆ ಪ್ರಮಾಣ ಇಳಿಕೆ ಮಾಡಲಾಗಿದೆ. ಆದರೆ ಭಾರಿ ಚರ್ಚೆಯಲ್ಲಿರುವ
ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ಅಡಿ ಸೇರಿಸಲು ಸಭೆ ಒಪ್ಪಿಲ್ಲ. 

ಆಭರಣ ಕೊಳ್ಳಲು ಅಡ್ಡಿ ಇಲ್ಲ: 50 ಸಾವಿರ ರೂ.ಗಳಿಗಿಂತ ಹೆಚ್ಚಿನ ಮೌಲ್ಯದ ಚಿನ್ನಾಭರಣ ಖರೀದಿ ವೇಳೆ  ಕಡ್ಡಾಯವಾಗಿ ಪ್ಯಾನ್‌ ಸಂಖ್ಯೆ ಕೊಡಬೇಕು ಎಂಬ ನಿಯಮವನ್ನೇ ತೆಗೆದುಹಾಕಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರ ತಾನೇ ಹೊರಡಿಸಿದ್ದ ಅಧಿಸೂಚನೆಯನ್ನೇ ವಾಪಸ್‌ ತೆಗೆದುಕೊಂಡಿದೆ. ಈ ವರ್ಷಾಂತ್ಯಕ್ಕೆ ಗುಜರಾತ್‌ ಚುನಾವಣೆ ನಡೆಯಲಿದ್ದು, ಅಲ್ಲಿನ ವ್ಯಾಪಾರಿಗಳನ್ನು ಸಮಾಧಾನ ಮಾಡುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಜತೆಗೆ ವರ್ಷಕ್ಕೆ 2 ಕೋಟಿ ರೂ. ಗಿಂತ ಹೆಚ್ಚು ಚಿನ್ನವೂ ಸೇರಿದಂತೆ ಭಾರಿ ಮೌಲ್ಯದ ಆಭರಣಗಳ ವಹಿವಾಟು ಮಾಡಿದಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸುವ ನಿಯಮವನ್ನೂ ಕೈಬಿಡಲಾಗಿದೆ.

Advertisement

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾಗಿರುವುದರಿಂದಲಾಗಿ ಉದ್ದಿಮೆ ಕ್ಷೇತ್ರಕ್ಕೆ  ತೊಂದರೆಯಾಗಿದೆ ಎಂಬ ಸಾರ್ವತ್ರಿಕ ಟೀಕೆಗೆ ಮಣಿದಿರುವ ಕೇಂದ್ರ ಸರ್ಕಾರ ತೆರಿಗೆ ಸಲ್ಲಿಕೆ ಅವಧಿಯ ನಿಯಮದಲ್ಲಿ ತಿದ್ದುಪಡಿ ಮಾಡಿದೆ. ಇದುವರೆಗೆ 1.5 ಕೋಟಿ ರೂ. ವಹಿವಾಟು ಹೊಂದಿರುವ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಪ್ರತಿ ತಿಂಗಳು ತೆರಿಗೆ ವಿವರ ಸಲ್ಲಿಸುವುದರ ಬದಲಾಗಿ 3 ತಿಂಗಳಿಗೊಮ್ಮೆ ಸಲ್ಲಿಸಲು ಅವಕಾಶ ನೀಡ ಲಾಗಿದೆ ಎಂದು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. ಇಷ್ಟು ಮಾತ್ರವಲ್ಲ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆದಾರರಿಗೆ ಪರಿಹಾರ ಕೋರಲು ಇರುವ ಮಿತಿಯನ್ನು ವಾರ್ಷಿಕ 75 ಲಕ್ಷ ರೂ.ಗಳಿಂದ 1 ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದು ಜೇಟ್ಲಿ ಮಾಹಿತಿ ನೀಡಿದ್ದಾರೆ. ಇದರ ಜತೆಗೆ 1ಕೋಟಿ ವರೆಗೆ ವಹಿವಾಟು ಇರುವ ಉದ್ದಿಮೆಗಳು ಶೇ.1ರಷ್ಟು, ಉತ್ಪಾದಕರು ಶೇ.2ರಷ್ಟು ಮತ್ತು ರೆಸ್ಟಾರೆಂಟ್‌ಗಳು ಶೇ.5ರಷ್ಟು ತೆರಿಗೆ ಪಾವತಿ ಮಾಡಬೇಕು. ಅಂತಾರಾಜ್ಯ ಸೇವೆ ನೀಡುವ ಸಂಸ್ಥೆಗಳ ವಾರ್ಷಿಕ ವಹಿವಾಟು 20 ಲಕ್ಷ ರೂ.ಗಳಿಗಿಂತ ಕಡಿಮೆ ಇದ್ದರೆ ಅವರಿಗೆ ಅಂತಾರಾಜ್ಯ ಸರಕು ಸೇವಾ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ ಎಂದಿದ್ದಾರೆ.

ರಫ್ತುದಾರರಿಗೆ ಬಾಕಿ ನೀಡಲು ಕ್ರಮ:
ರಫ್ತುದಾರರಿಗೆ ಬಾಕಿ ಇರುವ ತೆರಿಗೆ ಮೊತ್ತವನ್ನು ಹಿಂತಿರುಗಿಸಲು ಸರ್ಕಾರ ಮುಂದಾಗಿದೆ ಎಂದಿದ್ದಾರೆ ಜೇಟ್ಲಿ. ಜುಲೈ ತಿಂಗಳಿಗೆ ಸಂಬಂಧಿಸಿದ ತೆರಿಗೆ ಹಿಂಬಾಕಿಯನ್ನು ಅ.10ರ ಒಳಗಗಾಗಿ ಮತ್ತು ಆಗಸ್ಟ್‌ನ ಬಾಕಿಯನ್ನು ಅ.18ರ
ಒಳಗಾಗಿ ಚೆಕ್‌ ಮೂಲಕ ನೀಡಲಾಗುತ್ತದೆ. 

ಇ-ವ್ಯಾಲೆಟ್‌ ಜಾರಿ: ಜಿಎಸ್‌ಟಿ ಜಾರಿಯಾದ ಮೇಲೆ ರಫ್ತುದಾರರಿಗೆ ಯಾವುದೇ ರೀತಿಯ ವಿನಾಯಿತಿಗಳಿರಲಿಲ್ಲ.
ಇದನ್ನು ಮನಗಂಡು ರಫ್ತುದಾರರಿಗೆ ಇ-ವ್ಯಾಲೆಟ್‌ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.
ಅಂದರೆ ಇದರಲ್ಲಿ ರಫ್ತುದಾರರ ಅನುಕೂಲಕ್ಕಾಗಿ ಮುಂಗಡವಾಗಿಯೇ ರೀಫ‌ಂಡ್‌ ರೂಪದಲ್ಲಿ ನಾಮಾಂಕಿತ ಹಣ ಹಾಕಿ ನೀಡಲಾಗುತ್ತದೆ. ಇದು ಮುಂದಿನ ವರ್ಷದ ಏಪ್ರಿಲ್‌ 1 ರಿಂದ ಜಾರಿಗೆ ಬರಲಿದೆ.

ಇ-ವೇಗೆ ಕರ್ನಾಟಕದ ಮಾದರಿ: ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಸರಕು ಸಾಗಿಸಲು ಸುಲಭ ವ್ಯವಸ್ಥೆ ಇ-ವೇ ಬಿಲ್‌ ಅನ್ನು ಪ್ರಾಯೋಗಿಕವಾಗಿ ಕರ್ನಾಟಕದಲ್ಲಿ ಜಾರಿ ಮಾಡಲಾಗಿದೆ. 2018ರ ಜನವರಿಯಿಂದ ಇದನ್ನು ದೇಶಾದ್ಯಂತ ಜಾರಿ ಮಾಡಲಾಗುತ್ತದೆ ಎಂದು ಅರುಣ್‌ ಜೇಟ್ಲಿ ಹೇಳಿದ್ದಾರೆ. 

ಹವಾನಿಯಂತ್ರಿತ ರೆಸ್ಟೋರೆಂಟ್‌ಗಳಿಗೆ ಶೇ.18ರಷ್ಟು ತೆರಿಗೆ ವಿಧಿಸಲಾಗುತ್ತಿದ್ದು, ಈ ಬಗ್ಗೆ ಪರಿಶೀಲಿಸಲು ಸಚಿವರ ತಂಡ ರಚಿಸಿ ವರದಿ ನೀಡಲು ಸೂಚಿಸಿರುವುದರಿಂದ ತೆರಿಗೆ ಇಳಿಕೆ ನಿರೀಕ್ಷೆ ಮೂಡಿದೆ. 
●ಬಿ.ಟಿ.ಮನೋಹರ್‌, ರಾಜ್ಯ ಸರ್ಕಾರದ ಜಿಎಸ್‌ಟಿ ಸಮಿತಿ ಸದಸ್ಯ

ಹುಟ್ಟುವಳಿ ತೆರಿಗೆ ರದ್ದುಪಡಿಸಿ ತೆರಿಗೆ ಪ್ರಮಾಣವನ್ನು ಶೇ.12ಕ್ಕೆ ಇಳಿಕೆ ಮಾಡಿದರೆ ಪ್ರಯೋಜನವಾಗುವುದಿಲ್ಲ. ಹುಟ್ಟುವಳಿ ತೆರಿಗೆ ಮುಂದುವರಿಸಿ ತೆರಿಗೆ ಇಳಿಕೆ ಮಾಡಿದರೆ ಅನುಕೂಲವಾಗಲಿದೆ. 
●ಚಂದ್ರಶೇಖರ್‌ ಹೆಬ್ಟಾರ್‌, ಬೃಹತ್‌ ಬೆಂಗಳೂರು ಹೋಟೆಲ್‌ ಸಂಘದ ಅಧ್ಯಕ್ಷ

ಜನರ ಹಿತಾಸಕ್ತಿಗೆ ತಕ್ಕಂತೆ ಜಿಎಸ್‌ಟಿ ಮಂಡಳಿಯು ನಿರ್ಧಾರ ತೆಗೆದು ಕೊಂಡಿದೆ. ಇಂದು ಮಾಡಿರುವ ಬದಲಾವಣೆ ಗಳು ಉತ್ತಮವಾದದ್ದು. ಇದಕ್ಕಾಗಿ ಅರುಣ್‌ ಜೇಟ್ಲಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
●ನರೇಂದ್ರ ಮೋದಿ, ಪ್ರಧಾನಿ

ಇಷ್ಟೇ ಅಲ್ಲ, ಪೆಟ್ರೋಲ್‌, ಡೀಸೆಲ್‌ ಅನ್ನೂ ಜಿಎಸ್‌ಟಿಯ ಅಡಿಯಲ್ಲಿ ತನ್ನಿ. ಇದರಿಂದ ಸರ್ಕಾರಗಳು ಹೆಚ್ಚು ಲಾಭ ಗಳಿಸುತ್ತಿವೆ. ಈ ಮೂಲಕವಾದರೂ ಒಂದು ದೇಶ ಒಂದು ತೆರಿಗೆಯ ಆಶಯ ಈಡೇರಲಿ.
 ●ರಾಹುಲ್‌ ಗಾಂಧಿ, ಕಾಂಗ್ರೆಸ್‌ ಉಪಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next