Advertisement

ಇನ್ನು ನೋವನ್ನು ಸಹಿಸಲು ಸಾಧ್ಯವಿಲ್ಲ

12:30 AM Mar 11, 2019 | |

ಗಾಜಿಯಾಬಾದ್‌:  “ಸಾಕು, ನಿಲ್ಲಿಸಿ, ನಮಗೆ ಕೊನೆಯ ವರೆಗೂ ನೋವನ್ನು ಸಹಿಸಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ.’

Advertisement

ಹೀಗೆಂದು ಆಕ್ರೋಶಭರಿತರಾಗಿ ಮಾತನಾಡಿದ್ದು ಪ್ರಧಾನಿ ನರೇಂದ್ರ ಮೋದಿ. ಭಾರತವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಉಗ್ರರ ದಾಳಿ ವಿರುದ್ಧ ಕಿಡಿಕಾರಿರುವ ಅವರು, “ಭಯೋತ್ಪಾದನೆ, ನಕ್ಸಲ್‌ವಾದದಿಂದಾಗಿ ಹಲವು ದಶಕಗಳಿಂದ ದೇಶದ ಸಾಕಷ್ಟು ಕುಟುಂಬಗಳು ನೋವುಂಡಿವೆ. ಪುಲ್ವಾಮಾ ಮತ್ತು ಉರಿಯಲ್ಲಿ ನಡೆದಂಥ ಘಟನೆಗಳು ಹೃದಯವಿದ್ರಾವಕ. ಈ ನೋವನ್ನು ನಾವು ಎಲ್ಲಿಯವರೆಗೆ ಸಹಿಸಲು ಸಾಧ್ಯ? ಹೀಗಾಗಿ ಇಂಥ ಶಕ್ತಿಗಳ ವಿರುದ್ಧ ನಮ್ಮ ಸರಕಾರವು ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಯಿತು’ ಎಂದು ಹೇಳಿದ್ದಾರೆ.

ಗಾಜಿಯಾಬಾದ್‌ನಲ್ಲಿ ಇರುವ ಸಿಐಎಸ್‌ಎಫ್ ನೆಲೆಯಲ್ಲಿ ರವಿವಾರ ನಡೆದ 50ನೇ ಸಂಸ್ಥಾಪನಾ ದಿನದ ಕಾರ್ಯಕ್ರಮ ದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಬಳಿಕ ದೇಶದ ಐದು ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ(ಸಿಎಪಿಎಫ್)ಯ ಯಾವುದೇ ಕಾರ್ಯಕ್ರಮದಲ್ಲೂ ಮೋದಿ ಭಾಗವಹಿಸಿರಲಿಲ್ಲ. ಇದೇ ಮೊದಲ ಬಾರಿಗೆ ಅರೆಸೇನಾಪಡೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಭಯೋತ್ಪಾದನಾ ದಾಳಿಯ ವಿರುದ್ಧ ಯಾರಾದರೂ, ಯಾವಾಗಲಾದರೂ ಕಠಿಣ ಕ್ರಮ ಕೈಗೊಳ್ಳಲೇಬೇಕಿತ್ತು. 

ದೇಶದ ಕೋಟ್ಯಂತರ ಜನರ ಬೆಂಬಲದೊಂದಿಗೆ ಅಂಥ ಕಠಿಣ ನಿರ್ಧಾರವನ್ನು ಕೈಗೊಂಡಿರುವುದಕ್ಕೆ ನನಗೆ ಹೆಮ್ಮೆಯಿದೆ. ಸರಕಾರ ಈಗ ಹೊಸ ನೀತಿಯನ್ನು ಪಾಲಿಸುತ್ತಿದೆ. ಉಗ್ರರ ದಾಳಿಯಂಥ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಭದ್ರತಾ ಪಡೆಗಳಿಗೆ ಅಗತ್ಯವಿರುವ ಅತ್ಯಾಧುನಿಕ ಸಲಕರಣೆಗಳನ್ನು ಕೂಡ ಒದಗಿಸಲಾಗುತ್ತಿದೆ’ ಎಂದಿದ್ದಾರೆ. ಅಲ್ಲದೆ, ದೇಶದೊಳಗೇ ಕೆಲವು ಸಂಚುಕೋರರಿದ್ದು, ಅವರಿಗೆ ಗಡಿಯಾಚೆಗಿನ ರಾಷ್ಟ್ರದಿಂದ ಬೆಂಬಲ ಸಿಗುತ್ತಿದೆ ಎಂದೂ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next