Advertisement

ಗುರುಗಳ ಸಾಮರ್ಥ್ಯ ಯಾರಿಗೂ ಗೊತ್ತಿಲ್ಲ

10:04 AM Dec 31, 2019 | Lakshmi GovindaRaj |

2016ರಲ್ಲಿ ಪೇಜಾವರ ಮಠದ ಪರ್ಯಾಯ ಪೂಜಾವಸರ ಘಟಿಸುವಾಗ ಹಿರಿಯ ಶ್ರೀಗಳಿಗೆ 84 ವರ್ಷ, ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಯವರಿಗೆ 52 ವರ್ಷ. ಈಗ ನಾಲ್ಕು ವರ್ಷ ಹೆಚ್ಚಿಗೆ ಆಗಿದೆ. ವಿಶ್ವೇಶತೀರ್ಥರು 5ನೇ ಬಾರಿಗೆ ಪರ್ಯಾಯ ಪೂಜಾ ದೀಕ್ಷಿತರಾಗುತ್ತಾರೋ ಇಲ್ಲವೋ ಎಂಬ ಗೊಂದಲ ಮೂಡು ತ್ತಿದ್ದ ವೇಳೆ ಕಿರಿಯ ಶ್ರೀಗಳು ಕೊಟ್ಟ ಹೇಳಿಕೆ ಅಚ್ಚರಿಯದ್ದು.

Advertisement

ಐದನೆಯ ಬಾರಿ ಪರ್ಯಾಯ ಪೀಠಾರೋಹಣಕ್ಕೆ ಹಿರಿಯ ಶ್ರೀಗಳವರನ್ನು ಒತ್ತಾಯಿಸಿದ್ದೂ ಕಿರಿಯರೇ. ಈ ದಾಖಲೆಯ ಪೂಜೆಯ ಯಶಸ್ಸಿಗೆ ಒಂದು ರೀತಿಯಲ್ಲಿ ಕಿರಿಯರೇ ಕಾರಣ. ಹಿರಿಯ ಶ್ರೀಗಳಿಗೆ ಪರ್ಯಾಯ ಅವಧಿಯಲ್ಲಿ ಅನಾರೋಗ್ಯ ಉಂಟಾದಾಗ ಮಹಾಪೂಜೆ ಯನ್ನು ಮೊದಲ ಬಾರಿ ನಡೆಸಿದ್ದೂ ಕಿರಿಯ ಶ್ರೀಗಳೇ.

ತಮ್ಮ ಒತ್ತಾಯಕ್ಕೆ ಕಿರಿಯ ಶ್ರೀಗಳು ಕೊಟ್ಟ ಕಾರಣ ಇದು:
* ನಾವು ಪರ್ಯಾಯಕ್ಕೆ ಯಾವಾಗ ಕುಳಿತುಕೊಂಡರೆ ಅದು ಮೊದಲ ಪರ್ಯಾಯವೆನಿಸುತ್ತದೆ. ಗುರುಗಳು ಕುಳಿತುಕೊಂಡರೆ ಐದನೆಯ ಪರ್ಯಾಯವಾಗುತ್ತದೆ. ಇಂತಹ ದಾಖಲೆ ಆಗುವ ಅವಕಾಶವಿರುವಾಗ ಅವರೇ ಮಾಡುವುದು ಉತ್ತಮವೆಂಬ ಕಾರಣಕ್ಕೆ ಅವರನ್ನೇ ಪೀಠಾರೋಹಣ ಮಾಡಲು ಒತ್ತಾಸೆ ನೀಡಿದ್ದೆವು.

* ವಾದಿರಾಜರು ಶಿಷ್ಯರಿಂದ 5ನೇ ಪರ್ಯಾಯವನ್ನು ಮಾಡುವಾಗ ಶ್ರೀ ವಾದಿರಾಜರ ಶಿಷ್ಯರೇ ವೃದ್ಧರಾಗಿದ್ದರು. ನಮ್ಮ ಉದಾಹರಣೆಯಲ್ಲಿ ಹಾಗಿಲ್ಲ. ನಾವು ವೃದ್ಧರಾಗಿಲ್ಲ, ಗುರುಗಳು ಯುವಕರಂತೆ ಇದ್ದಾರೆ.

* ಪರ್ಯಾಯ ಅವಧಿಯಲ್ಲಿ ಸುದೀರ್ಘ‌ ಕಾಲ ಪೂಜೆ ಮಾಡುವುದು ಕಷ್ಟ ಎಂದು ಕೆಲವರು ಹೇಳುತ್ತಾರೆ. ದೂರದಿಂದ ಕಂಡವರಿಗೆ ಗುರುಗಳ ಸಾಮರ್ಥ್ಯ ಗೊತ್ತೇ ಇಲ್ಲ ಎಂದು ಹೇಳಬೇಕಾಗುತ್ತದೆ. ಅವರ ಜತೆ ಒಂದು ದಿನವಿದ್ದರೆ ತಿಳಿದೀತು. ಪರ್ಯಾಯ ಪೂರ್ವಭಾವಿ ಸಂಚಾರದಲ್ಲಿ ಮುಂಬೈನಂತಹ ಪ್ರದೇಶಗಳಲ್ಲಿ ಲಿಫ್ಟ್ ಇಲ್ಲದ ಮೂರ್‍ನಾಲ್ಕು ಅಂತಸ್ತಿನ ಮನೆಗಳಿದ್ದರೂ ಸಹಜವಾಗಿ ಹತ್ತಿ ಇಳಿಯುತ್ತಾರೆ.

Advertisement

ಹೀಗೆ ದಿನಕ್ಕೆ 30-40 ಕಟ್ಟಡಗಳಿಗೆ ಹತ್ತಿ ಇಳಿಯುವುದುಂಟು. ಇದೆಲ್ಲಾ ಖಾಲಿ ಹೊಟ್ಟೆಯಲ್ಲಿ. ಮಧ್ಯಾಹ್ನದ ಆಹಾರ ಸ್ವೀಕಾರವಾಗುವಾಗ 3 ಗಂಟೆ ಆಗುವುದಿದೆ. ಇದು ಇತರರು ಬೆಳಗ್ಗೆ ಮಾಡುವ ಉಪಾಹಾರಕ್ಕೆ ಸಮ. ಇದಕ್ಕೂ ಮುನ್ನ ಬೆಳಗ್ಗೆಯಿಂದ ಜಪ, ಅನುಷ್ಠಾನ, ಪಾಠ. ಮಧ್ಯಾಹ್ನ ಪೂಜೆ ಬಳಿಕ ಬಂದವರನ್ನು ಮಾತನಾಡಿಸುವುದು, ಉಪನ್ಯಾಸ-ಗೋಷ್ಠಿಗಳಲ್ಲಿ ಪಾಲ್ಗೊಳ್ಳುವುದು,

ಸಂಜೆ ಪೂಜೆ, ಮಠ-ಸಂಸ್ಥೆಗಳ ಆಡಳಿತದ ವಿಚಾರ ವಿಮರ್ಶೆ ನಡೆಯಬೇಕು. ಇದು ಒಂದು ದಿನದ ಚಟುವಟಿಕೆಯಲ್ಲ, ನಿತ್ಯವೂ. ಆದ್ದರಿಂದಲೇ ಅವರನ್ನು ಹತ್ತಿರದಿಂದ ಕಂಡರೆ ಮಾತ್ರ ಅವರ ಸಾಮರ್ಥ್ಯ ಅರ್ಥವಾಗುತ್ತದೆ ಎಂದದ್ದು. ಶ್ರೀಕೃಷ್ಣ ಪೂಜೆಯನ್ನು ಸಲೀಸಾಗಿ ಮಾಡುವ ಸಾಮರ್ಥ್ಯ ಅವರಿಗೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next