ವಿಜಯಪುರ: ಮುಳುಗುವ ಹಡಗಿನಂತಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಪಕ್ಷ ಬಿಟ್ಟು ಯಾರೂ ಹೋಗುವುದಿಲ್ಲ. ನಾಶವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಪಕ್ಷದ 40 ಶಾಸಕರು ಹೋಗುತ್ತಾರೆ ಎಂದರೆ ಶಾಸಕರೇನು ಹೋಲ್‍ಸೇಲ್ ಎಪಿಎಂಸಿ ಮಾರುಕಟ್ಟೆಯೇ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತಿಕ್ರಿಯಿಸಿದ್ದಾರೆ.
ಸೋಮವಾರ ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎರಡೂ ಪಕ್ಷಗಳಲ್ಲಿ ಆರಪೇಷನ್ ಮಾಡ್ತಾರೆ, ಹುಷಾರಾಗಿರಿ ಅಂತ ನಮ್ಮಲ್ಲೂ ಕೆಲವರು ಹೇಳುತ್ತಿದ್ದಾರೆ. ಇದೆಲ್ಲ ಬೆದರಿಸುವ ತಂತ್ರವಷ್ಟೇ, ಪ್ರಸ್ತುತ ಸಂದರ್ಭದಲ್ಲಿ ಬಿಜೆಪಿ ಬಿಟ್ಟು ಹೋಗುವ ಸ್ಥಿತಿಯಲ್ಲಿ ಯಾವ ಶಾಸಕರೂ ಇಲ್ಲ. ಪಂಜಾಬ್ ರಾಜ್ಯದಲ್ಲಿ ಕಾಂಗ್ರೆಸ್ ಕಥೆ ಮುಗಿದ್ದು, ಛತ್ತೀಸ್‍ಘಡ ರಾಜ್ಯದಲ್ಲಿ ಕಾಂಗ್ರೆಸ್ ಅವನತಿ ಆರಂಭವಾಗಿದೆ. ಇಂಥ ಮುಳುಗುವ ಸ್ಥಿತಿಯಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಯಾರಾದರೂ ಹೋಗಲು ಸಾಧ್ಯವೆ ಎಂದು ಕುಟುಕಿದರು.
ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆಗೆ ಮುನ್ನವೇ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷದ ನಾಯಕ ಸಿದ್ಧರಾಮಯ್ಯ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಎಲ್ಲ ಪಕ್ಷಗಳಲ್ಲೂ ಅಸಮಾಧಾನಿತರು ಇದ್ದೇ ಇರುತ್ತಾರೆ. ಜೆಡಿಎಸ್, ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಬಂದಿದ್ದ 17 ಶಾಸಕರೆಲ್ಲರೂ ಅಸಮಾಧಾನಿತರೇ ಆಗಿದ್ದರು. ಈಗ ಎಲ್ಲ ಅವರಿಗೆ ಅನುಕೂಲವಾಗಿದೆ ಎಂದರು.
ಇದನ್ನೂ ಓದಿ:ನರೇಂದ್ರ ಮೋದಿ ಅಲೆ ಸದಾ ಇದ್ದೆ ಇರುತ್ತದೆ: ಡಾ.ಅಶ್ವಥ್ ನಾರಾಯಣ್
ವಿಜಯಪುರ ಜಿಲ್ಲೆಗೆ ಮಂತ್ರಿ ಸ್ಥಾನ ಸಿಗದೇ ಇದ್ರೂ ನಾವು ಸುಮ್ಮನೆ ಕುಳಿತಿದ್ದೇವೆ, ಯಾಕಂದ್ರೆ ನಮ್ಮ ಸರ್ಕಾರ ಬರಲಿ ಅಂತ. ಬೇರೆಯವರನ್ನು ಸೇರಿಸಿಕೊಳ್ಳುವ ಸಂಸ್ಕೃತಿಯನ್ನು ನಮ್ಮ ಪಕ್ಷಕ್ಕೂ ಮುಂದುವರೆಸಬಾರದು. ವಿಜಯಪುರ ಜಿಲ್ಲೆಗೆ ಮಂತ್ರಿ ಸ್ಥಾನ ಕೊಡಿ ಅಂದರೂ ಕೊಡ್ತಿಲ್ಲ, ವಿಜಯಪುರಕ್ಕೆ ಮುಖ್ಯಮಂತ್ರಿ ಸ್ಥಾನ ಒಲಿಯುವುದು ಇರಬೇಕು, ಅದಕ್ಕೆ ಮಂತ್ರಿ ಸ್ಥಾನ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿ ಸ್ಥಾನದ ಮೇಲೆ ತಾವು ಆಕಾಕ್ಷಿ ಎಂದು ಪರೋಕ್ಷ ಅಭಿಲಾಷೆ ವ್ಯಕ್ತಪಡಿಸಿದರು