ಈ ಹಸಿ ಹಸಿ ರೋಮ್ಯಾಂಟಿಕ್ ಎನ್ನುವುದು ಅಸಲು ನಿನಗೆ ಗೊತ್ತೇ ಇಲ್ಲ ನೋಡು.. ಸಿನಿಮಾ ಥಿಯೇಟರಿನ ಕೊನೆಯ ಸಾಲಿನ ಮೂಲೆ ಸೀಟು ಸಿಕ್ಕು, ಎಲ್ಲರೂ ಮುಳುಗಿ ಹೋದಾಗ.. ನಾನು ನಿನ್ನ ಭುಜಕ್ಕೊರಗಿದರೆ, ತುಂಟತನದಿಂದ ಸೊಂಟ ಚಿವುಟುತ್ತೀಯೇನೋ ಅಂದುಕೊಂಡಿದ್ದೆ! ಆದರೆ ನೀನೋ, ನಾನು ಮಗುವೆಂಬಂತೆ ತಲೆ ಸವರುತ್ತಿದ್ದೆ! ಆಗ ಎಷ್ಟು ಸಿಟ್ಟು ಬಂದಿತ್ತು ಗೊತ್ತಾ?
ಡಿಯರ್ ಗೆಳೆಯ,
ನಿನಗೊಂದು ಪ್ರೇಮ ಪತ್ರ ಬರೆಯದೇ ಅದೆಷ್ಟು ಕಾಲವಾಯ್ತಲ್ಲ? ಈ ವಾಟ್ಸಪ್ಪು, ಫೇಸ್ಬುಕ್, ಮೆಸೆಂಜರ್ ಕೈಯಲ್ಲಿ ಕುಣಿಯುವ ಕಾಲಕ್ಕೂ ನಿನಗೆ ಅದೆಂತಹ ಅಕ್ಷರದ ಮೋಹವೇ ಹುಡುಗಿ? ಎಂದು ಗೊಣಗುತ್ತೀಯೇನೋ. ಆದರೂ, ಕೊಟ್ಟದ್ದನ್ನು ಅಷ್ಟೇ ಮುಚ್ಚಟೆಯಾಗಿ ಕಾಪಿಟ್ಟುಕೊಳ್ಳುತ್ತೀ ನೋಡು? ಆ ನಿನ್ನ ಕಲೆಕ್ಟೀವ್ ಬುದ್ಧಿ ನನಗಿಷ್ಟ. ಅದ್ಯಾಕೋ ನೀನು ಮೊನ್ನೆ ನನ್ನ ನೋಟಕ್ಕೆ ಸಿಕ್ಕರೂ ನೋಡದಂತೆ ನಡೆದುಬಿಟ್ಟೆ? ಅದ್ಯಾವ ಸುಂದರಿ ಮುಂದಿನ ತಿರುವಿನಲ್ಲಿ ಉಸಿರು ಬಿಗಿ ಹಿಡಿದು ನಿನ್ನ ಬೆವರ ಘಮಕ್ಕೆ ಕಾಯುತ್ತಿದ್ದಳ್ಳೋ… ಹೇಳು, ಏನಾದ್ರೂ ಹೊಸ ಹೂವಿನ ಹಿಂದೆ ಬಿದ್ದಿದ್ದೀಯೋ ಹೇಗೆ?
ಅಷ್ಟು ಸುಲಭವಲ್ಲ ಮಾರಾಯ ನೀನು ನನ್ನನ್ನು ದಾಟಿ ಹೋಗುವುದು! ಒಮ್ಮೆ ನಿನ್ನಂಥ ಮುದ್ದು ಹುಡುಗನನ್ನ ಸ್ವಂತವಾಗಿಸಿಕೊಂಡ ಅದ್ಯಾವ ಹುಡುಗಿ ಕಿರುಬೆರಳಿನ ತುದಿಯಿಂದಾದರೂ ಮನಸ್ಸಿಂದ ಆಚೆ ನೂಕಿಯಾಳು ಹೇಳು? ನಿನ್ನಂತವನಿಗಾಗಿ ಜಿದ್ದಾಜಿದ್ದಿಗೆ ಬಿದ್ದಾದರೂ ಎಳೆದಿಟ್ಟುಕೊಳ್ಳಬಯಸುವ ಹುಚ್ಚು ಹುಡುಗಿಯರ ಪ್ರೇಮಕ್ಕಿಂತ, ನನ್ನದು ತುಸು ಬೇರೆಯದೇ ರೀತಿ!
ಈ ಹಸಿ ಹಸಿ ರೋಮ್ಯಾಂಟಿಕ್ ಎನ್ನುವುದು ಅಸಲು ನಿನಗೆ ಗೊತ್ತೇ ಇಲ್ಲ ನೋಡು.. ವಾರದ ಹಿಂದೆ, ಸಿನಿಮಾ ಥಿಯೇಟರಿನ ಕೊನೆಯ ಸಾಲಿನ ಮೂಲೆ ಸೀಟು ಸಿಕ್ಕು, ಎಲ್ಲರೂ ಮುಳುಗಿ ಹೋದಾಗ.. ನಾನು ನಿನ್ನ ಭುಜಕ್ಕೊರಗಿದರೆ, ತುಂಟತನದಿಂದ ಸೊಂಟ ಚಿವುಟುತ್ತೀಯೇನೋ ಅಂದುಕೊಂಡಿದ್ದೆ! ಆದರೆ ನೀನೋ, ನಾನು ಮಗುವೆಂಬಂತೆ ತಲೆ ಸವರುತ್ತಿದ್ದೆ! ಆಗ ಎಷ್ಟು ಸಿಟ್ಟು ಬಂದಿತ್ತು ಗೊತ್ತಾ?
ನಾವು, ಹುಡುಗಿಯರ ಮನಸ್ಸೇ ಇಂಥದ್ದೋ ಅಕ್ಷರಶಃ ಹುಚ್ಚುಕೋಡಿಯಂಥದ್ದು. ನೀನು ಪ್ರತಿ ಜನ್ಮ ಹುಟ್ಟಿ ಬಂದು, ಆಗಲೂ ಈ ಎಡಬಿಡಂಗಿಯಂಥ ನಾನೇ ಸಿಕ್ಕರೂ ಏನೇನೂ ಅರ್ಥವಾಗಲಿಕ್ಕಿಲ್ಲ ನಿನಗೆ!
ಅರ್ಧ ಚಂದ್ರ ತೂಗುಬಿದ್ದ ಆ ಕತ್ತಲೆಯಲ್ಲಿ, ಬೆತ್ತಲಾದ ಒಂಟಿ ರಸ್ತೆಯ ಬೆನ್ನಿನ ಮೇಲೆ ಗೋಲ್ಗುಪ್ಪಾ ತಿನ್ನುವಾಗ ಅಸ್ಪಷ್ಟವಾಗಿ ಕಂಡ ನನ್ನ ಕುತ್ತಿಗೆಯ ಇಳಿಜಾರು ನೋಡಿಯೇ ಬೆಚ್ಚಿಬಿದ್ದೆ. ಮರು ದಿನ ನನ್ನ ಮುಖ ನೋಡಲೂ ನಾಚಿಕೆ ನಿನಗೆ! ಒಳ್ಳೇ ಹುಡುಗ ಎಂದು ತುಟಿಯಂಚಲ್ಲೇ ನಸುನಕ್ಕೆ..
ಆದರೂ, ನೀನೆಂದರೆ ಬಿಸಿ ಬಿಸಿ ಚಾಕ್ಲೇಟ್, ಲಾವಾ ಕೇಕಿನಷ್ಟೇ ಇಷ್ಟ.. ಕಣ್ಣಲ್ಲಿ ನೀರು ಬಂದರೂ ಆಸೆಯಿಂದ ತಿನ್ನುವ ಗೋಲ್ಗಪ್ಪಾದಷ್ಟೇ ಇಷ್ಟ. ಧೋ.. ಎಂದು ಸುರಿದು ನಿನ್ನ ನೆನಪಿನ ವಾಸನೆ ಹಬ್ಬಿಸುವ ಮಳೆಯಷ್ಟೇ ಇಷ್ಟ.. ಚುಮುಚುಮು ಚಳಿಯಲ್ಲಿ ಬೇಕೆನ್ನಿಸುವ ನೊರೆ ಕಾಫಿಯಷ್ಟೇ ಇಷ್ಟ.. ಎಲ್ಲಿ ಹೋದರೂ ಚಿತ್ತ ಕೆದಕುವ ಸಂಗೀತದಷ್ಟೇ ಇಷ್ಟ. ಬೇಸರದ ಸಂಜೆಯಲ್ಲಿ ಜೊತೆಯಾಗುವ ಪುಸ್ತಕಗಳಷ್ಟೇ ಇಷ್ಟ… ನನ್ನೆಲ್ಲ ಇಷ್ಟಗಳಿಗೆ ಮಿಗಿಲಾಗಿಯೂ ನೀನಿಷ್ಟ ಕಣೋ..
-ವೀಚೀ