Advertisement

ಯಾರಿಂದಲೂ ಕನಡ ಭಾಷೆ ಅಳಿಸಲು ಸಾಧ್ಯವಿಲ್ಲ; ಬೊಮ್ಮಾಯಿ

06:46 PM Dec 28, 2022 | Team Udayavani |

ಬೆಳಗಾವಿ: ಕನ್ನಡ ಭಾಷೆ ಅಂತರ್ಗತ ಶಕ್ತಿಯನ್ನು ಹೊಂದಿದ್ದು, ಜಗತ್ತಿನಲ್ಲಿ ಯಾರಿಂದಲೂ ಕನ್ನಡ ಭಾಷೆಯನ್ನು ಅಳಿಸಲು ಸಾಧ್ಯವಿಲ್ಲ. ಕನ್ನಡ ಭಾಷೆಯ ಶಕ್ತಿಯನ್ನು ಸಕಾರಾತ್ಮಕವಾಗಿ ಬಳಿಸಿ ಮುಂದೆ ಕೊಂಡೊಯ್ಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ನಗರದ ಕನ್ನಡ ಭವನದಲ್ಲಿ ನೂತನವಾಗಿ ನಿರ್ಮಿಸಿಲಾದ ರಂಗಮಂದಿರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಯಾವುದೇ ಆತಂಕವಿಲ್ಲ. ಜಗತ್ತಿನಲ್ಲಿ ಯಾವುದೇ ದೇಶಕ್ಕೆ ಹೋಗಿ ಸಾಧನೆ ಮಾಡಿದರೂ ಕೂಡ ಕನ್ನಡತನವನ್ನು ಕನ್ನಡಿಗರು ಮರೆಯಬಾರದು ಎಂದರು.

ಭಾಷೆ ನಾಡಿಗೆ ಬಹಳ ಮುಖ್ಯ. ಸಂಸ್ಕೃತಿ ಇಲ್ಲದೆ ಮನುಷ್ಯ ಸಮಾಜವಿಲ್ಲ. ಮನುಷ್ಯರ ಹಾಗೂ ಪ್ರಾಣಿಗಳಿಗೆ ಇರುವ ವ್ಯತ್ಯಾಸವೆಂದರೆ ಅಭಿವ್ಯಕ್ತಿ. ಮನುಷ್ಯರು ಮನದಾಳದ ಭಾವನೆಯನ್ನು ಭಾಷೆಯ ಮೂಲಕ ಅಭಿವ್ಯಕ್ತಿ ಮಾಡುತ್ತಾರೆ. ಅಭಿವ್ಯಕ್ತಿ ಮೂಲಕ ಮನುಷ್ಯ ಸಮಾಜದ ಒಡನಾಟವಿದ್ದು ಭಾಷೆಯು ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಕನ್ನಡ ಅತ್ಯಂತ ಪ್ರಾಚೀನ ಭಾಷೆಯಾಗಿದೆ. ಹಳೆಗನ್ನಡ, ನುಡಿ ಕನ್ನಡ, ಜನಪದ ಕನ್ನಡ ಹೀಗೆ ಕನ್ನಡ ಭಾಷೆ ವೈವಿಧ್ಯತೆಯಿದೆ. ವಚನ ಹಾಗೂ ದಾಸ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿವೆ. ವಚನ ಹಾಗೂ ದಾಸ ಸಾಹಿತ್ಯವನ್ನು ಬೆಳೆಸಬೇಕು. ಇದನ್ನು ನಾಡು ಹಾಗೂ ಪ್ರಪಂಚಕ್ಕೆ ಪಸರಿಸುವ ಕೆಲಸವಾಗಬೇಕಾಗಿದೆ. ಭಾಷೆ ನಮ್ಮ ಅಸ್ಮಿತೆಯಾಗಿದ್ದು ಅದನ್ನು ಮರೆಯಬಾರದು. ಸಮಾಜಕ್ಕೆ ಭಾಷಾ ಅಸ್ಮಿತೆ ಬಗ್ಗೆ ಸ್ವಾಭಿಮಾನ ಇರಬೇಕು ಎಂದರು.

ನಾಗರಿಕತೆ ಹಾಗೂ ಸಂಸ್ಕೃತಿ ಬೇರೆ ಬೇರೆ. ನಾಗರೀಕತೆ ಭೌತಿಕವಾದುದು. ಸಂಸ್ಕೃತಿ ಎಂದರೆ ನಮ್ಮ ನಡೆ ನುಡಿ. ಕನ್ನಡ ಭಾಷೆಯಲ್ಲಿ ಪ್ರಾಮಾಣಿಕತೆ ಹಾಗೂ ಒಳ್ಳೆಯತನವಿದೆ. ಕನ್ನಡ ಸಾಕ್ಷಿ ಪ್ರಜ್ಞೆ ಮಾನವೀಯ ನೆಲೆ ಹೊಂದಿದೆ. ಈ ಮಾನವೀಯ ನೆಲೆ ಬಸವಣ್ಣ, ಅಲ್ಲಮಪ್ರಭು, ದಾಸ ಸಾಹಿತ್ಯದಲ್ಲಿ ಕಾಣಬಹುದು ಎಂದು ಮುಖ್ಯಮಂತ್ರಿಗಳು ಹೇಳಿದರು. ಗಡಿ ಭಾಗದಲ್ಲಿ ಇಲ್ಲದ ಸಮಸ್ಯೆ ಹುಟ್ಟಿಸಲಾಗಿದೆ.

Advertisement

ಇಲ್ಲಿ ವಾಸಿಸುವ ಬಹಳ ಜನರು ಸಾಮರಸ್ಯದಿಂದ ಬದುಕಿದ್ದಾರೆ. ನಾವೆಲ್ಲರು ಕನ್ನಡ ರಕ್ಷಣೆಗೆ ಸದಾ ನಿಲ್ಲಬೇಕು. ಕನ್ನಡ ನಾಡಿನಲ್ಲಿ ಹುಟ್ಟಿದವರು ಕನ್ನಡಿಗರು ಎಂಬುದನ್ನು ಮರೆಯಬಾರದು ಎಂದರು.

ವಿಶ್ವ ಕನ್ನಡ ಸಮ್ಮೇಳನ: ಗಡಿಭಾಗ ಹಾಗೂ ಗಡಿಭಾಗದ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಸಿದ್ದವಿದೆ. ಗಡಿಭಾಗದಾಚೆಯ ಶಾಲೆಗಳ ಬಗ್ಗೆ ಕಾಳಜಿ ವಹಿಸಲಾಗುವುದು. ಈ ಹಿನ್ನೆಲೆಯಲ್ಲಿ 100 ಕೋಟಿ ರೂಗಳನ್ನು ಗಡಿ ಭಾಗದ ಅಭಿವೃದ್ಧಿಗೆ ನೀಡಲಾಗಿದೆ ಎಂದ ಅವರು ಗಡಿ ಪ್ರಾಧಿಕಾರದ ಅಧ್ಯಕ್ಷರ ಮೂಲಕ ಗಡಿ ಭಾಗದಲ್ಲಿ ಪ್ರವಾಸ ನಡೆಸಿ ಇಲ್ಲಿನ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಲಾಗುವುದು. ನಂತರ ಅವರೊಂದಿಗೆ ಚರ್ಚಿಸಿ ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಇದೇ ವೇಳೆ ಈ ಹಿಂದೆ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ನೆನಪು ಮಾಡಿಕೊಂಡ ಮುಖ್ಯಮಂತ್ರಿಗಳು ರಾಜ್ಯದ ಬೇರೆ ನಗರದಲ್ಲಿ ಎರಡನೇ ವಿಶ್ವ ಕನ್ನಡ ಸಮ್ಮೇಳನ ಆಯೋಜನೆ ಮಾಡುವ ಇಂಗಿತ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೆ.ಎಲ್‌.ಇ ಸಂಸ್ಥೆ ಹಾಗೂ ಕನ್ನಡ ಭವನ ಆಡಳಿತ ಮಂಡಳಿ ಅಧ್ಯಕ್ಷ ಡಾ| ಪ್ರಭಾಕರ ಕೋರೆ ಮಾತನಾಡಿ, ಕಲೆ-ಸಾಂಸ್ಕೃತಿಕ ಕಾರ್ಯಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕನ್ನಡ ಭವನ ನಿರ್ಮಿಸಲಾಗಿದೆ. ಪುಣೆಯ ಬಾಲಗಂಧರ್ವ ಹಾಲ್‌ ಮಾದರಿಯಲ್ಲಿ ರಂಗಮಂದಿರ ಕಾರ್ಯನಿರ್ವಹಿಸಲಿದೆ ಎಂದರು.

ಬೆಳಗಾವಿಯಲ್ಲಿ ಭಾಷಾತೀತವಾಗಿ ಕನ್ನಡ, ಮರಾಠಿ, ಹಿಂದಿ ಹಾಗೂ ಇಂಗ್ಲೀಷ್‌ ನಾಟಕಗಳು ನಡೆಯಬೇಕು. ನಶಿಸಿಹೋಗುತ್ತಿರುವ ಗ್ರಾಮೀಣ ಭಾಗದ ಪಾರಿಜಾತ ಕಲೆ ಉಳಿಯವ ನಿಟ್ಟಿನಲ್ಲಿ ರಂಗಮಂದಿರ ಬಳಕೆಗೆ ಬರಲಿದೆ. ಅದೇ ರೀತಿ ಚಿಕ್ಕೋಡಿಯಲ್ಲಿ ಕನ್ನಡ ಭವನ, ಗಡಿ ಭಾಗದ ಹಳ್ಳಿಗಳಲ್ಲಿ ಶಾಲೆಗಳು ತೆರೆಯಬೇಕು ಎಂದರು. ಜಗದ್ಗುರು ತೋಂಟದ ಸಿದ್ಧರಾಮ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಂಸದೆ ಮಂಗಲಾ ಅಂಗಡಿ, ಶಾಸಕರಾದ ಅನಿಲ್‌ ಬೆನಕೆ, ಅಭಯ ಪಾಟೀಲ, ಕಸಪಾ ಅಧ್ಯಕ್ಷ ಮಹೇಶ ಜೋಶಿ, ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ್‌, ಖ್ಯಾತ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆ ಗಿರಿಜಾ ಲೊಕೇಶ್‌, ಕನ್ನಡ ಭವನ ಆಡಳಿತ ಮಂಡಳಿ ಗೌರವ ಅಧ್ಯಕ್ಷ ಅಲ್ಲಮಪ್ರಭು ಸ್ವಾಮೀಜಿ, ಎಂ.ಸಿ.ಎ ಅಧ್ಯಕ್ಷ ಎಂ.ಎಸ್‌.ಕರಿಗೌಡರ್‌ ಉಪಸ್ಥಿತರಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಸ್ವಾಗತಿಸಿದರು. ಸಾಹಿತಿ ಬಸವರಾಜ ಜಗಜಂಪಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next