Advertisement

ಯಾರೇ ಕೂಗಾಡಲಿ..ಊರೇ ಹೋರಾಡಲಿ..

07:00 AM Oct 27, 2017 | Team Udayavani |

ಬೆಂಗಳೂರು: “ಯಾರೇ ಕೂಗಾಡಲಿ, ಊರೇ ಹೋರಾಡಲಿ, ನಿನ್ನ ನೆಮ್ಮದಿಗೆ ಭಂಗವಿಲ್ಲ’ಇದು, ವಜ್ರ ಮಹೋತ್ಸವಕ್ಕೆ ದುಂದು ವೆಚ್ಚ ಮಾಡಲಾಯಿತೆಂಬ ಟೀಕೆಗಳಿಗೆ ಸ್ಪೀಕರ್‌ ಕೆ.ಬಿ.ಕೋಳಿವಾಡ ಹಾಡಿನ ಮೂಲಕ ನೀಡಿದ ಉತ್ತರ. ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ವಜ್ರ ಮಹೋತ್ಸವದ ವೆಚ್ಚದ ವಿಚಾರದಲ್ಲಿ ಸ್ಪೀಕರ್‌ ಕಚೇರಿ ಶೇ.100ಕ್ಕೆ 100ರಷ್ಟು ಪಾರದರ್ಶಕವಾಗಿದೆ. ಉಳಿದಂತೆ ಟೀಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲವೆಂದು ಹೇಳಿದರು.

Advertisement

ಜತೆಗೆ ಡಾ.ರಾಜ್‌ಕುಮಾರ್‌ ನಟಿಸಿರುವ ಸಂಪತ್ತಿಗೆ ಸವಾಲ್‌ ಚಿತ್ರದ “ಯಾರೇ ಕೂಗಾಡಲಿ  ಹಾಡು ನನಗೆ ನೆನಪಿಗೆ ಬರುತ್ತದೆ ಎಂದು ಕೆಲವು ಸಾಲುಗಳನ್ನು ಸುದ್ದಿಗೋಷ್ಠಿಯಲ್ಲಿ ಉಲ್ಲೇಖೀಸಿದರು. ಬುಧವಾರ ನಡೆದದ್ದು ಜಂಟಿ ಅಧಿವೇಶನವನಲ್ಲ, ಸಭೆಯಷ್ಟೇ ಎಂಬ ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿಕೆ ಅವರ ವೈಯಕ್ತಿಕ. ಈ ಹಿಂದೆ ಯಾವ ರೀತಿ ರಾಷ್ಟ್ರಪತಿಯವರು ಬಂದಾಗ ವಿಶೇಷ ಜಂಟಿ ಅಧಿವೇಶನ ನಡೆದಿತ್ತೋ ಅದೇ ರೀತಿ ನಡೆದಿದೆ ಎಂದು ಸಮರ್ಥಿಸಿಕೊಂಡರು.

ಬಿಜೆಪಿಗೆ ಪರೋಕ್ಷ ತರಾಟೆ: ರಾಷ್ಟ್ರಪತಿ ಅವರ ಭಾಷಣದ ಬಗ್ಗೆ ಟೀಕೆ ಮಾಡುತ್ತಿರುವುದು ದುರಂತ. ದೇಶದ ಪ್ರಥಮ ಪ್ರಜೆ ಸ್ಥಾನಕ್ಕೆ ಗೌರವ ನೀಡುವುದು ಎಲ್ಲರ ಕರ್ತವ್ಯ. ರಾಷ್ಟ್ರಪತಿಯವರು ಯಾವುದೇ ವಿವಾದಾತ್ಮಕ ವಿಚಾರ ಪ್ರಸ್ತಾಪಿಸಿಲ್ಲ, ವಿವಾದ ಅಂದುಕೊಂಡವರಿಗೆ ಏನೂ ಮಾಡಲಾಗದು ಎಂದು ಪರೋಕ್ಷವಾಗಿ ಬಿಜೆಪಿ ನಾಯಕರನ್ನು ಸ್ಪೀಕರ್‌ ತರಾಟೆಗೆ ತೆಗೆದುಕೊಂಡರು. ರಾಷ್ಟ್ರಪತಿಯವರ ಕಾರ್ಯಾಲಯ ಮನವಿ ಮೇರೆಗೆ ನಮ್ಮ ಕಚೇರಿಯಿಂದ ಕೆಲವೊಂದು ಮಾಹಿತಿ ಕಳುಹಿಸಲಾಗಿತ್ತು. ಆದರೆ, ನಾವು ಕಳುಹಿಸಿದ ಮಾಹಿತಿಯನ್ನು ಶೇ.5ರಷ್ಟು ಭಾಷಣದಲ್ಲಿ ಸೇರಿಸಿಲ್ಲ.ರಾಷ್ಟ್ರಪತಿ ಕಾರ್ಯಾಲಯ ತಮ್ಮದೇ ಆದ ಮಾಹಿತಿ ಆಧಾರದ ಮೇಲೆ ಭಾಷಣ ಸಿದಟಛಿಪಡಿಸಿದೆ ಎಂದು ಹೇಳಿದರು.

ವಜ್ರಮಹೋತ್ಸವ ಸಮಾರಂಭ ಅರ್ಥಪೂರ್ಣವಾಗಿ ನಡೆದಿದೆ. ನನ್ನ ಅವಧಿಯಲ್ಲಿ ವಜ್ರ ಮಹೋತ್ಸವ ನಡೆದಿದ್ದು ಸಂತಸ ತಂದಿದೆ ಎಂದು ತಿಳಿಸಿದರು.

ವಜ್ರ ಮಹೋತ್ಸವ ಸಮಾರಂಭದ ವೆಚ್ಚದ ಬಗ್ಗೆ ಲೆಕ್ಕಪತ್ರದ ಮಾಹಿತಿ ನೀಡಿಲ್ಲವೆಂಬ ಆರೋಪದ ಬಗ್ಗೆ, ಇನ್ನೂ ಸಂಪೂರ್ಣ ಲೆಕ್ಕಾಚಾರ ನಡೆದಿಲ್ಲ. ಎಲ್ಲ ಬಂದ ಮೇಲೆ ನಾನೇ ದಾಖಲೆ ಬಿಡುಗಡೆ ಮಾಡುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನಮ್ಮ ವೆಚ್ಚಗಳ ಬಗ್ಗೆಯೂ ಲೆಕ್ಕ ಪರಿಶೋಧನೆ ನಡೆಯುತ್ತದೆ ಎಂದು ಹೇಳಿದರು.

Advertisement

ಬೆಳಗಾವಿಯ ಸುವರ್ಣಸೌಧ ಆವರಣದಲ್ಲಿ ಶಾಸಕರ ಭವನ ನಿರ್ಮಿಸುವ ಚಿಂತನೆಯಿದೆ. ಜತೆಗೆ ವರ್ಷದಲ್ಲಿ 30 ದಿನಗಳ ಕಾಲ ಅಲ್ಲಿ ಅಧಿವೇಶನ ನಡೆಯಬೇಕೆಂಬ ಉದ್ದೇಶವೂ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎಚ್‌ಡಿಕೆಗೆ ಕ್ಷಮೆ ಕೋರಿದ್ದೇನೆ: ವಿಧಾನಸೌಧ ವಜ್ರ ಮಹೋತ್ಸವ ಸಂದರ್ಭದಲ್ಲಿ ನಡೆದ ಫೋಟೋಸೆಷನ್‌ ವೇಳೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿಗೆ ಆಸನ ವ್ಯವಸ್ಥೆ ಕಲ್ಪಿಸದ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮಿಂದ ಲೋಪವಾಗಿದೆ. ಇದಕ್ಕಾಗಿ ಕುಮಾರಸ್ವಾಮಿಯವರಲ್ಲೂ ದೂರವಾಣಿ ಕರೆ ಮಾಡಿ ಕ್ಷಮೆ ಕೋರಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೂ ಸೂಚಿಸಲಾಗಿದೆ. ಕುಮಾರಸ್ವಾಮಿ ಹೆಸರು ಬರೆದು ಹಾಕಿದ್ದ ಆಸನದಲ್ಲಿ ಬೇರೊಬ್ಬರು ಕುಳಿತಿದ್ದು ಸಮಸ್ಯೆಗೆ ಕಾರಣವಾಗಿದೆ ಎಂದು ಸ್ಪೀಕರ್‌ ಹೇಳಿದರು.

ಸ್ಪೀಕರ್‌ ಗರಂ: ರಾಷ್ಟ್ರಪತಿಯವರು ವಜ್ರ ಮಹೋತ್ಸವ ಸಂದರ್ಭದಲ್ಲಿ ಮಾಡಿದ ಭಾಷಣದ ಪ್ರತಿ ಹಾಗೂ ಸ್ಪೀಕರ್‌ ಕಚೇರಿಯಿಂದ ಕಳುಹಿಸಲಾಗಿದ್ದ ಮಾಹಿತಿಯ ಪ್ರತಿಯನ್ನು ಮಾಧ್ಯಮದವರಿಗೆ ಸ್ಪೀಕರ್‌ ಕಚೇರಿಯ ಸಿಬ್ಬಂದಿ ವಿತರಿಸುತ್ತಿದ್ದಾಗ ಸ್ವಲ್ಪ ಶಬಟಛಿ ಉಂಟಾಗಿದ್ದರಿಂದ ಗರಂ ಆದ ಸ್ಪೀಕರ್‌, “ದನ ಕಾಯೋ…..’ ಎಂದು ಸಿಟ್ಟಾದರು. ನಂತರ ಸಾವರಿಸಿಕೊಂಡು ಪ್ರತಿ ಮಾತ್ರ ಕೊಡು, ನೀನು ಏನೂ ಮಾತನಾಡಬೇಡ ಎಂದು ತಾಕೀತು ಮಾಡಿದರು. ಕಚೇರಿ ಸಿಬ್ಬಂದಿ “ನನ್ನಿಂದ ಗಲಾಟೆ ಆಗಲಿಲ್ಲ’ ಎಂದು ಮಾಧ್ಯಮದವರ ಎದುರೇ ಸ್ಪಷ್ಟನೆ ನೀಡಿದ ಪ್ರಸಂಗವೂ ನಡೆಯಿತು.

ವಾಸಿಸುವವನೇ ಮನೆಯೊಡೆಯ’ ಕಾಯ್ದೆಗೆ ರಾಷ್ಟ್ರಪತಿ ಅಂಕಿತ: ಸಂತಸ
ಬೆಂಗಳೂರು:
“ವಾಸಿಸುವವನೇ ಮನೆಯೊಡೆಯ’ ಉದ್ದೇಶದ ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿ ಅವರ
ಅಂಕಿತ ದೊರೆತಿದೆ. ಇದು ನಿಜಕ್ಕೂ ಸಂತೋಷದ ವಿಷಯ ಎಂದು ಸ್ಪೀಕರ್‌ ಕೆ.ಬಿ.ಕೋಳಿವಾಡ ತಿಳಿಸಿದ್ದಾರೆ. 

ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಯ್ದೆಗೆ ರಾಷ್ಟ್ರಪತಿ ಅವರು ಅಂಕಿತ ಹಾಕಿರುವುದರಿಂದ ರಾಜ್ಯದ 58 ಸಾವಿರ ಜನವಸತಿ ಪ್ರದೇಶಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾಗಿ ಹಟ್ಟಿ, ಲಂಬಾಣಿ ತಾಂಡ, ಕ್ಯಾಂಪ್‌, ಮಜರೆ ಗ್ರಾಮಗಳಲ್ಲಿ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವ ಲಕ್ಷಾಂತರ ಕುಟುಂಬಗಳಿಗೆ ತಾವು ವಾಸಿಸುತ್ತಿರುವ ಜಾಗದ ಹಕ್ಕು ಪತ್ರ ದೊರೆಯಲಿದೆ ಎಂದು
ಹೇಳಿದರು. ಮಾರ್ಚ್‌ 25ರಂದು ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರವಾಗಿತ್ತು. ಜಂಟಿ ಸದನ ಸಮಿತಿ ರಚಿಸಿ ಪರಿಶೀಲನೆಗೆ ಒಪ್ಪಿಸಬೇಕೆಂಬ ಬೇಡಿಕೆಯೂ ಆಗ ಬಂದಿತ್ತು. ಆದರೆ, ನಾನು ಯಾವುದೇ ಕಾರಣಕ್ಕೂ ಅದು ಸಾಧ್ಯವಿಲ್ಲ, ಏನೇ ಇದ್ದರೂ ಚರ್ಚಿಸಿ ಒಪ್ಪಿಗೆ ಕೊಡಿ ಎಂದು ಹಠ ಹಿಡಿದು ಅಂಗೀಕಾರವಾಗುವಂತೆ ಮಾಡಿದ್ದೆ ಎಂದರು. ಲಕ್ಷಾಂತರ ಕುಟುಂಬಗಳಿಗೆ ಸೂರು ಕಲ್ಪಿಸಿದ ತೃಪ್ತಿ ನನಗಿದೆ. ರಾಷ್ಟ್ರಪತಿಯವರ ಅಂಕಿತ ದೊರೆತಿದ್ದು ನಮಗಿನ್ನೂ ಪ್ರತಿ ತಲುಪಿಲ್ಲ. ಬಂದ ತಕ್ಷಣ ಮುಂದಿನ ಪ್ರಕ್ರಿಯೆ ಸರ್ಕಾರಿ ಆದೇಶ ಹೊರಡಲಿದೆ ಎಂದು ಕೋಳಿವಾಡ ತಿಳಿಸಿದರು.

ವಾರಕ್ಕೆರಡು ದಿನ ವಿಧಾನಸೌಧಕ್ಕೆ ದೀಪಾಲಂಕಾರ
ಪ್ರತಿ ಶನಿವಾರ ಮತ್ತು ಭಾನುವಾರ ವಿಧಾನಸೌಧಕ್ಕೆ ದೀಪಾಲಂಕಾರ ಮಾಡಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡುವ ಬಗ್ಗೆ ಚಿಂತನೆ ನಡೆದಿದೆ. ಮುಖ್ಯಮಂತ್ರಿ ಬಳಿಯೂ ವಿಚಾರ ಪ್ರಸ್ತಾಪಿಸಿದ್ದೇನೆ. ಸೋಲಾರ್‌ ವಿದ್ಯುತ್‌ ದೀಪಗಳನ್ನು ಅಳವಡಿಸಬಹುದಾಗಿದ್ದು ಸಾಧ್ಯಾಸಾಧ್ಯತೆ ಚರ್ಚಿಸಲಾಗುತ್ತಿದೆ ಎಂದು ಕೋಳಿವಾಡ ತಿಳಿಸಿದರು. ವಜ್ರ ಮಹೋತ್ಸವ ಅಂಗವಾಗಿ ನಿರ್ಮಿಸಿರುವ ಸಾಕ್ಷ್ಯಚಿತ್ರ ಬೆಳಗಾವಿ ಅಧಿವೇಶನದಲ್ಲೂ ಶಾಸಕರಿಗೆ ಪ್ರದರ್ಶಿಸಲಾಗುವುದು. ಜತೆಗೆ ಸ್ಪೀಕರ್‌ ಕಚೇರಿ ವೆಬ್‌ಸೈಟ್‌ನಲ್ಲೂ ಯೂ ಟ್ಯೂಬ್‌ ಮೂಲಕ ಸಾರ್ವಜನಿಕರು ನೋಡಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next