Advertisement

ನೋವಿನಿಂದ ಚೀರಿದರೂ ಯಾರೂ ಬರಲಿಲ್ಲ

12:30 AM Mar 12, 2019 | |

ಬೇಗ ದೊಡ್ಡಪ್ಪನ ಮನೆ ತಲುಪಿ ಅಲ್ಲಿಂದ ಚಾರ್ಜರ್‌ ತರಬೇಕು. ಲ್ಯಾಪ್‌ಟಾಪನ್ನು ಚಾರ್ಜ್‌ ಮಾಡಿ ರಾತ್ರಿಯಿಡೀ ಸಿನಿಮಾ ನೋಡಬೇಕು ಎಂಬುದಷ್ಟೇ ನನ್ನ ಯೋಚನೆಯಾಗಿತ್ತು. ಈ ಹುಮ್ಮಸ್ಸಿನಲ್ಲಿಯೇ ಬೈಕ್‌ ಓಡಿಸುತ್ತಿದ್ದವನು, ಏನಾಯಿತು ಎಂದು ಅರಿವಾಗುವ ಮೊದಲೇ ರಸ್ತೆಯಂಚಿನ ಗುಂಡಿಗೆ ಬಿದ್ದಿದ್ದೆ. ಬೈಕ್‌ನ ಸಮೇತ!

Advertisement

 ಡಿಪ್ಲೊಮಾ ಮೂರನೇ ಸೆಮಿಸ್ಟರ್‌ ಮುಗಿಸಿ ರಜೆಯಲ್ಲಿ ನನ್ನ ಊರಿಗೆ ವಾಪಸಾಗಿದ್ದೆ. ನನ್ನ ಹತ್ತಿರ ಒಂದು ಲ್ಯಾಪ್‌ಟಾಪ್‌ ಇತ್ತು. ಲ್ಯಾಬ್‌ ಪ್ರಾಜೆಕ್ಟ್ಗಳಿಗೆ ಉಪಯೋಗಿಸಿದ್ದಕ್ಕಿಂತ ಹೆಚ್ಚಾಗಿ, ಫಿಲ್ಮ್ ನೋಡಲು ಲ್ಯಾಪ್‌ಟ್ಯಾಪ್‌ ಬಳಕೆಯಾಗುತ್ತಿತ್ತು. ನನಗಿಂತ, ನನ್ನ ಸ್ನೇಹಿತರೇ ಅದನ್ನು ಹೆಚ್ಚು ಬಳಸುತ್ತಿದ್ದರು. ಪರೀಕ್ಷೆಯೆಲ್ಲಾ ಮುಗಿಯಿತು, ಹೇಗಿದ್ರೂ ರಜೆ ಇದೆ. ಆರಾಮಾಗಿ ಮನೆಯಲ್ಲಿ ಕುಳಿತು ಫಿಲ್ಮ್ ನೋಡೋಣ ಅಂದುಕೊಂಡು, ಬ್ಯಾಗ್‌ನಿಂದ ಲ್ಯಾಪ್‌ಟಾಪ್‌ ಹೊರಕ್ಕೆ ತೆಗೆದೆ. ದುರದೃಷ್ಟಕ್ಕೆ, ಅದರ ಚಾರ್ಜರ್‌ ಕೆಟ್ಟು ಹೋಗಿತ್ತು. ನನ್ನ ಆಸೆಗೆ ನೀರು ಬಿದ್ದಿತ್ತು. ಅರ್ಜೆಂಟ್‌ ಆಗಿ ಲ್ಯಾಪ್‌ಟಾಪ್‌ ಚಾರ್ಜರ್‌ ಬೇಕಾಗಿತ್ತು. ಆಗ ನೆನಪಾಯ್ತು, ದೊಡ್ಡಪ್ಪನ ಮಗನ ಹತ್ತಿರ, ಇದೇ ಕಂಪನಿಯ ಲ್ಯಾಪ್‌ಟಾಪ್‌ ಇದೆ ಅಂತ. ತಕ್ಷಣ ಅವನಿಗೆ ಕಾಲ್‌ ಮಾಡಿ, “ಲ್ಯಾಪ್‌ಟಾಪ್‌ ಚಾರ್ಜರ್‌ ಬೇಕಿತ್ತು. ಕೊಡ್ತೀಯಾ?’ ಅಂದೆ. ಅದಕ್ಕವನು, “ಸರಿ, ಬಾ ಮನೆಗೆ’ ಅಂದ. ನಮ್ಮ ಮನೆಯಿಂದ ದೊಡ್ಡಪ್ಪನ ಮನೆಗೆ ನಾಲ್ಕು ಕಿ.ಮೀ. ದೂರ ಅಷ್ಟೇ. ಆದರೆ, ಆಗಲೇ ಸಂಜೆಯಾಗಿದ್ದರಿಂದ, ನಡೆದು ಹೋಗಿ ವಾಪಸ್‌ ಬರಲು ಕಷ್ಟವಾಗುತ್ತಿತ್ತು. ಬಸ್‌ನಲ್ಲೇ ಹೋಗಿ ಬಿಡೋಣ ಅಂದರೆ, ಮಾರನೆದಿನ ಬೆಳಗ್ಗೆ ಆರೂವರೆಗೆ ಇದ್ದ ಮೊದಲ ಬಸ್‌ ಬರುವವರೆಗೆ ಕಾಯಬೇಕಿತ್ತು. ಅದಂತೂ ಸಾಧ್ಯವಿರಲಿಲ್ಲ. ಛೇ, ಇವತ್ತು ರಾತ್ರಿಯೆಲ್ಲಾ ಫಿಲ್ಮ್ ನೋಡುವುದು ಮಿಸ್ಸಾಗುತ್ತಲ್ಲ ಅಂತನ್ನಿಸಿ, ಬೈಕ್‌ನಲ್ಲಿ ಹೋಗಿ ಚಾರ್ಜರ್‌ ತಂದುಬಿಡೋಣ ಅಂತ ನಿರ್ಧರಿಸಿದೆ.

ವರ್ಷದ ಹಿಂದಷ್ಟೇ ಮನೆಗೆ ಹೊಸ ಬೈಕ್‌ ತಂದಿದ್ದರು. “ತುಂಬಾ ಸ್ಪೀಡಾಗಿ ಗಾಡಿ ಓಡಿಸ್ತಾನೆ’ ಅನ್ನೋ ಸರ್ಟಿಫಿಕೇಟ್‌ ಹಿರಿಯರಿಂದ ಸಿಕ್ಕಿತ್ತು. ನನ್ನ ಜೊತೆ ಬೈಕ್‌ನಲ್ಲಿ ಕೂರಲು ಬಹಳಷ್ಟು ಮಂದಿ ಹೆದರುತ್ತಿದ್ದರು. ಅದೊಂಥರಾ ಹೆಮ್ಮೆಯ ವಿಷಯ ಅಂದುಕೊಂಡಿದ್ದೆ. ಅವತ್ತೂ ಹಾಗೇ, ಬೈಕೇರಿ ಭರ್ರಂತ ಹೊರಟೆ. ತುಂಬಾ ದಿನಗಳ ನಂತರ ನಾನು ಊರಿಗೆ ಬಂದಿದ್ದರಿಂದ, ಊರ ಮುಂದಿನ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರೋ ವಿಷಯ ಗೊತ್ತಿರಲಿಲ್ಲ. ರಸ್ತೆಯನ್ನೇ ಒಡೆದು ಗುಂಡಿಯ ರೀತಿ ಮಾಡಿದ್ದರು. ಬೇಗ ಹೋಗಿ, ಬೇಗ ವಾಪಸ್‌ ಬರಬೇಕು ಎಂದಷ್ಟೇ ಲೆಕ್ಕ ಹಾಕಿದ್ದ ನಾನು ಉಳಿದ ಯಾವ ಸಂಗತಿಯ ಬಗ್ಗೆಯೂ ಯೋಚಿಸಲೇ ಇಲ್ಲ. ಪರಿಣಾಮ, ಸ್ಪೀಡಾಗಿ ಹೋಗುತ್ತಿದ್ದ ನನ್ನ ಬೈಕ್‌ ಸ್ಕಿಡ್‌ ಆಗಿ ಗುಂಡಿಯೊಳಗೆ ಉರುಳಿ ಬಿತ್ತು. ಬೈಕ್‌ನ ಜೊತೆಗೆ ನಾನೂ ಬಿದ್ದೆ. ಮೈ, ಕೈ, ಕಾಲು, ಹೊಟ್ಟೆ, ಮುಖ ತರಚಿ ನೆತ್ತರು ಸುರಿಯತೊಡಗಿತು. ಸಂಜೆಯಾಗಿದ್ದರಿಂದ ಆ ದಾರಿಯಲ್ಲಿ ಯಾರೂ ಬರಲಿಲ್ಲ. ಸಹಾಯಕ್ಕೆ ಕೂಗಿಕೊಂಡರೂ, ನನ್ನನ್ನು ಯಾರೂ ಗುಂಡಿಯಿಂದ ಮೇಲಕ್ಕೆ ಎತ್ತುವುದಿಲ್ಲ ಅಂತ ಅರಿವಾಗಿ, ನಾನೇ ನಿಧಾನವಾಗಿ ಎದ್ದು ಮನೆ ಕಡೆಗೆ ಹೋದೆ. ಆ ಘಟನೆಯ ನಂತರ “ಅವಸರವೇ ಅಪಘಾತಕ್ಕೆ ಕಾರಣ’ ಎಂಬ ಮಾತಿನ ಅರ್ಥವೇನೆಂದು ಬಹಳ ಚೆನ್ನಾಗಿ ಗೊತ್ತಾಯ್ತು… 

ರವಿ ಶಿವರಾಯಗೊಳ

Advertisement

Udayavani is now on Telegram. Click here to join our channel and stay updated with the latest news.

Next