ಬಾಗಲಕೋಟೆ: “ನಿಮ್ಮ ದಮ್ಮಯ್ಯ ಅಂತೀನಿ. ಈಗ ನನಗೇನೂ ಕೇಳಬೇಡಿ. ಏನಾದರೂ ಹೇಳಬೇಕಿದ್ದರೆ ನಾನೇ ನಿಮ್ಮನ್ನು ಕರೆದು ಮಾತನಾಡುತ್ತೇನೆ. ಈಗ ಹೊರಡಿ…’ ಹೀಗೆ ಮಾಧ್ಯಮಗಳಿಗೆ ಹೇಳಿದವರು ಮಾಜಿ ಸಿಎಂ ಸಿದ್ದರಾಮಯ್ಯ.
ಬಾದಾಮಿ ತಾಲೂಕಿನ ಬೇಲೂರಿನಲ್ಲಿ ಮಾಧ್ಯಮಗಳ ಮೇಲೆ ಸಿಡಿಮಿಡಿಗೊಂಡ ಅವರು, ಸಚಿವ ಸ್ಥಾನ ಸಿಗದೆ ಕೆಲವು ಅತೃಪ್ತರು ಬಂಡಾಯವೆದ್ದಿರುವ ವಿಷಯದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. “ನೋ ರಿಯಾಕ್ಷನ್’ ಎಂದು ಮಾಧ್ಯಮಗಳಿಗೆ ಕೈ ಮುಗಿದು ಹೊರಟರು.
“ನನ್ನನ್ನು ದೆಹಲಿಗೆ ಬರಲು ಯಾರೂ ಕರೆದಿಲ್ಲ. ನಾನು ಎಲ್ಲಿಯೂ ಹೋಗಲ್ಲ. ಇನ್ನೆರಡು ದಿನ ಬೆಂಗಳೂರಿಗೂ ಹೋಗಲ್ಲ. ಬಾದಾಮಿಯಲ್ಲೇ ಇದ್ದು, ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ. ಈಗ ಮಾತನಾಡೋಕೆ ಎಲ್ಲವೂ ಹಳೆಯ ವಿಷಯ. ಯಾವುದೂ ಹೊಸ ವಿಷಯ ಇಲ್ಲ. ಹೊರಟು ಹೋಗಿ’ ಎಂದು ಗರಂ ಆದರು.
ಯಾವ ಯೋಜನೆ ನಿಲ್ಲಲ್ಲ: ರಾಜ್ಯದಲ್ಲಿ ಈ ಬಾರಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದರಿಂದ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಕಾಂಗ್ರೆಸ್ ಸರ್ಕಾರದ ಅವಧಿಯ ಯಾವ ಯೋಜನೆಗಳೂ ನಿಲ್ಲುವುದಿಲ್ಲ. ನಾನುಚಿಕ್ಕವನಿದ್ದಾಗ ಹಸಿವಿನಿಂದ ಬಡವರು ನರಳುವುದನ್ನು ಕಂಡಿದ್ದೇನೆ. ಮನೆಯಲ್ಲಿ ಕೇವಲ ಮುದ್ದೆ ಮಾಡುತ್ತಿದ್ದರು. ಯಾರೋ ಬೀಗರು ಬಂದಾಗ ಮಾತ್ರ ಅನ್ನ ಮಾಡುತ್ತಿದ್ದರು. ಹೀಗಾಗಿಯೇ, ನಾನು ಸಿಎಂ ಆಗಿದ್ದಾಗ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಆರಂಭಿಸಿದೆ ಎಂದರು.
“ನಾನು ದೂರದ ಊರಿನವನು ಎಂದು ಯಾರೂ ಭಾವಿಸಿಕೊಳ್ಳಬೇಡಿ. ಬಾದಾಮಿಯಲ್ಲೇ ಮನೆ, ಕಚೇರಿ
ಮಾಡುತ್ತೇನೆ. ಯಾರೂ ಸಂಕೋಚ ಪಟ್ಟುಕೊಳ್ಳಬೇಡಿ. ಚಡ್ಡಿ (ಮಕ್ಕಳಿಂದ ಹಿಡಿದು) ಹಾಕಿಕೊಳ್ಳುವವರಿಂದ ಹಿಡಿದು ಪ್ಯಾಂಟ್, ಕಚ್ಚೆ ಹಾಕೋರೂ ನನ್ನ ಬಳಿ ಬರಬಹುದು. ಚುನಾವಣೆ ಬಳಿಕ ನಾನು ರಾಜಕೀಯ ಮಾಡಲ್ಲ. ಮತ ಹಾಕಿದವರು,ಹಾಕದಿರುವವರು ನನ್ನ ಬಳಿ ಕೆಲಸಕ್ಕೆ ಬರಬಹುದು’ ಎಂದರು.