Advertisement

ನನ್ನ ವಿರುದ್ಧ ತನಿಖೆಗೆ ಅಭ್ಯಂತರ ಇಲ್ಲ: ಸಿದ್ದರಾಮಯ್ಯ

09:46 PM Oct 23, 2022 | Team Udayavani |

ದಾವಣಗೆರೆ: ಸಿದ್ದರಾಮಯ್ಯ ಸರ್ಕಾರದಲ್ಲಿ ಹಗರಣ ನಡೆದಿದೆ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ತನಿಖೆ ಮಾಡಲು ನನಗೆ ಯಾವುದೇ ಅಭ್ಯಂತರ ಇಲ್ಲ. ಅಧಿಕಾರಕ್ಕೆ ಬಂದು ಇಷ್ಟು ವರ್ಷ ಏನು ಮಾಡಿದರು, ಬಾಯಲ್ಲಿ ಕಡುಬು ತಿನ್ನುತ್ತಿದ್ದರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬಿಜೆಪಿಯಲ್ಲಿ ಶೇ.40 ಕಮಿಷನ್‌ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳುತ್ತಿರುವುದಕ್ಕೆ ಈಗ ಸಿದ್ದರಾಮಯ್ಯ ಸರ್ಕಾರದಲ್ಲೂ ಭ್ರಷ್ಟಾಚಾರ ನಡೆದಿತ್ತು ಎಂದು ಹೇಳುತ್ತಿದ್ದಾರೆ. ಬಿಜೆಪಿಯವರು ಐದು ವರ್ಷ ವಿಪಕ್ಷದಲ್ಲಿರುವಾಗ ಬಾಯಿಗೆ ಬೀಗ ಹಾಕಿಕೊಂಡಿದ್ದರಾ? ಈಗ ಮುಖ್ಯಮಂತ್ರಿ ಆಗಿರುವ ಬಸವರಾಜ ಬೊಮ್ಮಾಯಿ ಅವರೇ ವಿಪಕ್ಷದಲ್ಲಿದ್ದರು. ಮೂರು ವರ್ಷ ಸುಮ್ಮನಿದ್ದು. ಈಗ ತನಿಖೆ ಮಾಡುತ್ತಾರಂತೆ. ನಮ್ಮದರ ಜತೆಗೆ ಶೇ.40 ಕಮಿಷನ್‌ ಆರೋಪದ ಬಗ್ಗೆಯೂ ತನಿಖೆ ನಡೆಸಲಿ ಎಂದರು.

ಸರ್ಕಾರಿ ಶಾಲೆಯಲ್ಲಿ 100 ರೂ. ದೇಣಿಗೆ ಪಡೆಯಲು ಅನುಮತಿ ನೀಡಿದ್ದರ ವಿರುದ್ಧ ಕಾಂಗ್ರೆಸ್‌ ಧ್ವನಿ ಎತ್ತಿತ್ತು. ಸರ್ಕಾರಿ ಶಾಲೆಯಲ್ಲಿ ಓದುವವರು ಬಡವರ ಮಕ್ಕಳು. ಅಂತಹವರಿಂದ ತಿಂಗಳಿಗೆ ನೂರು ರೂ. ದೇಣಿಗೆ ವಸೂಲಿ ಮಾಡುವುದು ಎಂದರೆ ಏನರ್ಥ. ನಾವು ಕಾಂಗ್ರೆಸ್‌ನವರು ಉಚಿತವಾಗಿ ಹಾಲು, ಬಿಸಿಯೂಟ, ಶೂ ಇತರೆ ಸೌಲಭ್ಯ ಕೊಟ್ಟಿದ್ದೇವೆ. ಬಿಜೆಪಿ ಸರ್ಕಾರದವರು ಬಡ ಮಕ್ಕಳ ಬಳಿ ವಸೂಲಿ ಮಾಡುವುದಕ್ಕೆ ಮುಂದಾಗಿದ್ದರು. ನಾವು, ಪೋಷಕರು ಒತ್ತಾಯ ಮಾಡಿದ ಮೇಲೆ ಸುತ್ತೋಲೆ ವಾಪಸ್‌ ಪಡೆದಿದ್ದಾರೆ. ಪಿಎಸ್‌ಐ ನೇಮಕಾತಿ ಹಗರಣ ಸಿಐಡಿಗೆ ತನಿಖೆ ಮಾಡಲು ಆಗುತ್ತಾ. ಅದರಲ್ಲೂ ಎಡಿಜಿಪಿ ವಿರುದ್ಧ ತನಿಖೆ ಮಾಡಲು ಆಗುತ್ತಾ. ಹಾಗಾಗಿ ಕೂಡಲೇ ಉನ್ನತ ಹಂತದ ತನಿಖೆ ನಡೆಸಬೇಕು ಎಂದರು.

ಸೋಮಣ್ಣ ನಾಲಾಯಕ್‌
ವಿ. ಸೋಮಣ್ಣ ಸಚಿವನಾಗಲು ನಾಲಾಯಕ್‌. ಹಕ್ಕುಪತ್ರ ಕೇಳುವುದಕ್ಕೆ ಬಂದಿದ್ದ ಮಹಿಳೆ ಮೇಲೆ ಕೈ ಮಾಡಿದ್ದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಭರ್ಜರಿ ಸ್ಪಂದನೆ:
ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಯಾತ್ರೆ ರಾಜ್ಯದಲ್ಲಿ 20 ದಿನ ಗುಂಡ್ಲುಪೇಟೆಯಿಂದ ರಾಯಚೂರುವರೆಗೂ ಯಶಸ್ವಿಯಾಗಿ ನಡೆದಿದೆ. ಲಕ್ಷಾಂತರ ಜನರು ಸೇರಿದ್ದರು. ಪಾದಯಾತ್ರೆಗೆ ಭಾರೀ ಜನಸ್ಪಂದನೆ ಇದೆ. ಜನರಿಗೆ ಬಿಜೆಪಿ ಬೇಡವಾಗಿದೆ. ಹಾಗಾಗಿಯೇ ಪಾದಯಾತ್ರೆಗೆ ಎಲ್ಲ ಕಡೆ ಭರ್ಜರಿ ಸ್ಪಂದನೆ ಸಿಗುತ್ತಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next