ಬೆಂಗಳೂರು: “ರಾಜ್ಯ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ನಿಲುವಳಿ ಮಂಡಿಸುವುದಿಲ್ಲ. ಆದರೆ ವಿಧಾನಮಂಡಲ ಅಧಿವೇಶನ ನಡೆಯುವುದೇ ಎಂದು ಕಾದು ನೋಡೋಣ’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ವಿಧಾನಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,” ಸರ್ಕಾರದ ವಿರುದ್ಧ ಅವಿಶ್ವಾಸ ನಿಲುವಳಿ ಸೂಚನೆ ಮಂಡಿಸುವ ಉದ್ದೇಶವಿಲ್ಲ. ವಿಧಾನಸಭೆಯ ಪ್ರತಿ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡು ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂಬುದು ನಮ್ಮ ಅಭಿಲಾಷೆ’ ಎಂದು ತಿಳಿಸಿದರು.
ತಂತ್ರ- ಕುತಂತ್ರ ನಡೆಸಿಲ್ಲ: ಸರ್ಕಾರವನ್ನು ಪತನಗೊಳಿಸುವ, ಯಾವ ಶಾಸಕರನ್ನೂ ಸೆಳೆಯುವ ಪ್ರಯತ್ನ ನಡೆಸಿಲ್ಲ. ಆಡಳಿತ ಪಕ್ಷಗಳ ಶಾಸಕರೇ ರಾಜೀನಾಮೆ ನೀಡಿ ಸರ್ಕಾರ ಪತನವಾದರೆ ಆಗ ಸರ್ಕಾರ ರಚನೆಗೆ ಪ್ರಯತ್ನಿಸಲಾಗುವುದು ಎಂಬ ಮಾತಿಗೆ ಈಗಲೂ ಬದ್ಧ. ಅದನ್ನು ಹೊರತುಪಡಿಸಿ ಯಾವ ತಂತ್ರ, ಕುತಂತ್ರವನ್ನೂ ನಡೆಸಿಲ್ಲ ಎಂದು ಹೇಳಿದರು.
ಮಧ್ಯಂತರ ಚುನಾವಣೆಗೆ ಅವಕಾಶ ನೀಡಲ್ಲ: ನನ್ನ ಪ್ರಕಾರ ಆಡಳಿತ ಪಕ್ಷದಲ್ಲಿ 20ಕ್ಕೂ ಹೆಚ್ಚು ಅತೃಪ್ತ ಶಾಸಕರಿದ್ದು, ಅವರ ಮುಂದಿನ ನಿಲುವಿನ ಮೇಲೆ ಮೈತ್ರಿ ಸರ್ಕಾರದ ಭವಿಷ್ಯ ಅವಲಂಬಿತವಾಗಿದೆ. ಅವಕಾಶ ಸಿಕ್ಕರೆ ಸರ್ಕಾರ ರಚಿಸಲಾಗುವುದು. ನಾವೇನೂ ಸನ್ಯಾಸಿಗಳಲ್ಲ. ಮಧ್ಯಂತರ ಚುನಾವಣೆಗೆ ಅವಕಾಶ ನೀಡುವುದಿಲ್ಲ. ಸರ್ಕಾರ ಪತನವಾದರೆ ಸರ್ಕಾರ ರಚನೆ ಪ್ರಯತ್ನ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶಾಸಕ ಸ್ಥಾನಕ್ಕೆ ಕಾಂಗ್ರೆಸ್‌ನ ಆನಂದ್ ಸಿಂಗ್ ರಾಜೀನಾಮೆ ನೀಡಿರುವ ವಿಚಾರವನ್ನು ಮಾಧ್ಯಮದಲ್ಲಿ ನೋಡಿದ್ದೇನೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಮುಂದೆ ಏನಾಗುವುದೋ ಕಾದು ನೋಡೋಣ ಎಂದು ಪ್ರತಿಕ್ರಿಯಿಸಿದರು.