Advertisement

ಹೊಸ ರೈಲು ಬಂದಿಲ್ಲ ; ಕಸಿದುಕೊಂಡ ರೈಲುಗಳನ್ನಾದರೂ ಮರಳಿಸಲಿ

04:12 PM Jun 10, 2018 | |

ಹೊಸ ರೈಲುಗಳು, ಸವಲತ್ತುಗಳು ಮಂಗಳೂರು ಭಾಗದ ಜನರಿಗೆ ಮರೀಚಿಕೆಯಾಗಿವೆ. ಆದರೆ ಕನಿಷ್ಠ ಮಂಗಳೂರಿನಿಂದ ರದ್ದುಪಡಿಸಿದ ರೈಲುಗಳನ್ನಾದರೂ ಕೊಡಿ ಎಂಬ ಬೇಡಿಕೆಗೂ ರೈಲು ಇಲಾಖೆ ಸ್ಪಂದಿಸುತ್ತಿಲ್ಲ. ಮಂಗಳೂರು ಭಾಗ ದಕ್ಷಿಣ ರೈಲ್ವೇ, ಕೊಂಕಣ ರೈಲ್ವೇ, ನೈಋತ್ಯ ರೈಲ್ವೇ ವ್ಯಾಪ್ತಿಯನ್ನು ಒಳಗೊಂಡಿದ್ದರೂ ಕೊಂಕಣ ರೈಲ್ವೇ ಹೊರತು ಪಡಿಸಿ ಉಳಿದಂತೆ ಇತರ ಎರಡೂ ವಲಯಗಳಿಂದ ಕರಾವಳಿ ಭಾಗದ ಜನರಿಗೆ ಹೆಚ್ಚಿನ ಪ್ರಯೋಜನ ಲಭಿಸಿಲ್ಲ.

Advertisement

‘ಮಹಾಲಕ್ಷ್ಮೀ  ಎಕ್ಸ್‌ಪ್ರೆಸ್‌’ ಮತ್ತೆ ಓಡಲೇ ಇಲ್ಲ
ಹಳಿ ಪರಿವರ್ತನೆಯ ಸಂದರ್ಭದಲ್ಲಿ ಸ್ಥಗಿತಗೊಳಿಸಿದ್ದ ಮಹಾಲಕ್ಷ್ಮೀ ರೈಲು ಗಾಡಿ ಇಲ್ಲಿಂದ ಶಾಶ್ವತವಾಗಿ ಮರೆಯಾಗಿದೆ. ಮಂಗಳೂರು- ಹಾಸನ ನಡುವೆ ಮೀಟರ್‌ ಗೇಜ್‌ ರೈಲು ಮಾರ್ಗವಿದ್ದ ವೇಳೆ 1994ರವರೆಗೆ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ ಮಂಗಳೂರಿಗೆ ಸಕಲೇಶಪುರ, ಅರಸಿಕೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮಾರ್ಗವಾಗಿ ಸಂಚಾರ ನಡೆಸುತ್ತಿತ್ತು. ಈ ರೈಲು ಮಂಗಳೂರು ಸೆಂಟ್ರಲ್‌ನಿಂದ ಪ್ರತಿದಿನ ರಾತ್ರಿ 11 ಗಂಟೆಗೆ ಹಾಸನ ಮಾರ್ಗವಾಗಿ ಮೀರಜ್‌ ಗೆ ಹೋಗುತ್ತಿತ್ತು. ಮೀರಜ್‌ ಪ್ರಯಾಣಕ್ಕೆ ಒಟ್ಟು 19 ತಾಸು ತಗಲುತ್ತಿತ್ತು. ಮಂಗಳೂರು- ಹಾಸನ ಮಾರ್ಗದ ಬ್ರಾಡ್‌ಗೆàಜ್‌ ಪರಿವರ್ತನೆ ಕಾಮಗಾರಿ ವೇಳೆ ಈ ರೈಲ್‌ ಅನ್ನು ರದ್ದುಪಡಿಸಲಾಗಿತ್ತು. ಅನಂತರ ಮುಂದೆ ಮಹಾಲಕ್ಷ್ಮೀ  ಎಕ್ಸ್‌ಪ್ರೆಸ್‌ ಅನ್ನು ಮುಂಬಯಿಗೆ ವರ್ಗಾಯಿಸಲಾಯಿತು. ಈಗ ಈ ರೈಲು ಮುಂಬಯಿ ಸಿಎಸ್‌ಟಿ ನಿಲ್ದಾಣದಿಂದ ಕರ್ಜತ್‌, ಲೋನಾವಾಲ, ಪುಣೆ ಜಂಕ್ಷನ್‌, ಸಾಂಗ್ಲಿ, ಮೀರಜ್‌ ಜಂಕ್ಷನ್‌ ಮೂಲಕ ಕೊಲ್ಲಾಪುರಕ್ಕೆ ಸಂಚರಿಸುತ್ತಿದೆ.

ಈ ರೈಲು ಸಂಪರ್ಕವನ್ನು ಮರು ಆರಂಭಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ ರೈಲುಗಾಡಿಯನ್ನು ಮರು ಆರಂಭಿಸುವಂತೆ ಚೆನ್ನೈಯಲ್ಲಿ ಜರಗಿದ್ದ ದಕ್ಷಿಣ ವಲಯ ರೈಲ್ವೇ ಬಳಕೆದಾರರ ಸಲಹಾ ಸಮಿತಿ ಸಭೆಗೆ ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿಕರ ಅಭಿವೃದ್ಧಿ ಸಂಘ ಬೇಡಿಕೆ ಮಂಡಿಸಿ ಆಗ್ರಹಿಸಿತ್ತು.

ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ ರೈಲುಗಾಡಿಯನ್ನು ಮಂಗಳೂರು ಮೀರಜ್‌ ನಡುವೆ ಮರು ಆರಂಭಿಸುವುದರಿಂದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಸಾಂಗ್ಲಿ ಹಾಗೂ ಮೀರಜ್‌ ನಡುವೆ ನೇರ ರೈಲು ಸಂಪರ್ಕ ಸಾಧ್ಯವಾಗುತ್ತದೆ. ಜತೆಗೆ, ಮಂಗಳೂರು- ಧಾರವಾಡ ನಡುವೆಯೂ ರೈಲು ಪ್ರಯಾಣ ಜಾಲವೇರ್ಪಡುತ್ತದೆ. ಸಾಂಗ್ಲಿ, ಮೀರಜ್‌ ನಡುವೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯವರು ಸಹಿತ ಅನೇಕ ಕನ್ನಡಿಗ ಪ್ರಯಾಣಿಕರಿದ್ದಾರೆ. ಅಲ್ಲದೆ, ಮಂಗಳೂರು- ಹಾಸನ ಮಾರ್ಗ ಬ್ರಾಡ್‌ಗೇಜ್‌ ಆಗಿರುವುದರಿಂದ ಸುಮಾರು 14 ತಾಸಿನಲ್ಲಿ ಮಂಗಳೂರಿನಿಂದ ಮೀರಜ್‌ಗೆ ಪ್ರಯಾಣಿಸಬಹುದು.

ಕಣ್ಣೂರು- ಬೈಂದೂರು- ಕಣ್ಣೂರು
ಕಣ್ಣೂರು- ಬೈಂದೂರು- ಕಣ್ಣೂರು (56665/56666) ಪ್ಯಾಸೆಂಜರ್‌ ರೈಲಿನ ಸಂಚಾರವನ್ನು ಕಳೆದ ವರ್ಷದ ಮೇ 12ರಿಂದ ತಾತ್ಕಾಲಿಕವಾಗಿ ರದ್ದು ಪಡಿಸಲಾಗಿತ್ತು. ಈ ರೈಲಿಗೆ ಪ್ರಯಾಣಿಕರಿಂದ ಉತ್ತಮ ಬೆಂಬಲ ಸಿಗುತ್ತಿಲ್ಲ ಎಂಬ ತೀರ್ಮಾನಕ್ಕೆ ಬಂದ ರೈಲ್ವೇ ಇಲಾಖೆ, ಇದೇ ವೇಳೆ ನಿರ್ವಹಣಾ ಕಾಮಗಾರಿಗೆ ಸಾಕಷ್ಟು ಕಾಲಾವಕಾಶ ಒದಗಿಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ರೈಲಿನ ಓಡಾಟವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗುತ್ತಿದೆ ಎಂದು ಕಾರಣ ನೀಡಲಾಗಿತ್ತು. ಈ ರೈಲು ಬೆಳಗ್ಗೆ ಕಣ್ಣೂರಿನಿಂದ ಬೈಂದೂರಿಗೆ ಹೋಗಿ ಮಧ್ಯಾಹ್ನ ಬಳಿಕ ಹಿಂದಿರುಗುತ್ತಿತ್ತು. ರೈಲು ಸಂಚಾರವನ್ನು ಮರುಆರಂಭಿಸಬೇಕು ಹಾಗೂ ಇದು ಮಂಗಳೂರು ಸೆಂಟ್ರಲ್‌ ನಿಲ್ದಾಣ ಮೂಲಕ ಸಂಚರಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದ್ದರೂ, ಈವರೆಗೆ ಈ ರೈಲು ಸಂಚಾರ ಮರು ಪ್ರಾರಂಭವಾಗಿಲ್ಲ.

Advertisement

ಗುಲ್ಬರ್ಗಾ- ಮಂಗಳೂರು
ಮಂಗಳೂರಿನಿಂದ ಗುಲ್ಬರ್ಗಾಕ್ಕೆ ರೈಲು ಸಂಚಾರದ ಸಲಹೆ ಪ್ರಯಾಣಿಕರ ಕಡೆಯಿಂದ ವ್ಯಕ್ತವಾಗಿದೆ. ಇದರ ಸಂಚಾರ ಮಾರ್ಗದ ಸಾಧ್ಯತೆಗಳನ್ನು ಕೂಡ ಅವರು ಸಲಹೆ ಮಾಡಿದ್ದಾರೆ. ಇದರ ಪ್ರಕಾರ ಗುಲ್ಬರ್ಗಾದಿಂದ ವಾಡಿ- ಯಾದಗಿರಿ- ರಾಯಚೂರು-ಗುಂಟಕಲ್‌, ಬಳ್ಳಾರಿ, ಚಿಕ್ಕಮಗಳೂರು- ಬೀರೂರ, ಕಡೂರು, ಅರಸೀಕೆರೆ, ಹಾಸನ- ಸಕಲೇಶಪುರ- ಸುಬ್ರಹ್ಮಣ್ಯ ರಸ್ತೆ, ಪುತ್ತೂರು, ಬಂಟ್ವಾಳ ಮೂಲಕ ಮಂಗಳೂರಿಗೆ ಸಂಚಾರ ನಡೆಸಬಹುದಾಗಿದೆ. ರೈಲ್ವೇ ಇಲಾಖೆ ಈ ಸಲಹೆಯನ್ನು ಪರಿಶೀಲಿಸಿ ಸಾಧ್ಯತೆಯ ನಿಟ್ಟಿನಲ್ಲಿ ಕಾರ್ಯೋನ್ಮುಖವಾದರೆ ಉತ್ತರ ಕರ್ನಾಟಕದ ನಗರಗಳಿಗೆ ಮಂಗಳೂರಿನಿಂದ ರೈಲ್ವೇ ಸಂಪರ್ಕಜಾಲ ವಿಸ್ತರಣೆಗೊಳ್ಳುತ್ತದೆ.

ಘೋಷಣೆಯಾಗಿ ಸಾಕಾರಕ್ಕೆ ಬಾರದ ಪ್ರಸ್ತಾವನೆಗಳು
ಬಜೆಟ್‌ಗಳಲ್ಲಿ ಕರಾವಳಿ ಕರ್ನಾಟಕ ಭಾಗಕ್ಕೆ ಘೋಷಣೆ ಮಾಡಿದ ಹಲವಾರು ಯೋಜನೆಗಳು ಹಲವು ವರ್ಷ ಕಳೆದರೂ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಇದರಲ್ಲಿ ಪ್ರಾಮುಖ್ಯವಾದುದು ಪಡುಬಿದ್ರಿ- ಕಾರ್ಕಳ- ಬೆಳ್ತಂಗಡಿ- ಉಜಿರೆ- ಧರ್ಮಸ್ಥಳ-ನೆಟ್ಟಣ ಮಧ್ಯೆ 120 ಕಿ.ಮೀ. ಹೊಸ ಮಾರ್ಗ. ಬೈಂದೂರು – ಕೊಲ್ಲೂರು- ಹಾಲಾಡಿ- ಹೆಬ್ರಿ- ಕಾರ್ಕಳ- ಮೂಡಬಿದಿರೆ- ವೇಣೂರು- ಬೆಳ್ತಂಗಡಿ-ಧರ್ಮಸ್ಥಳ- ನೆಟ್ಟಣ ಮಧ್ಯೆ ಹೊಸ ಮಾರ್ಗ. ಮೈಸೂರು- ಮಂಗಳೂರು ಮಡಿಕೇರಿ ಮೂಲಕ 272 ಕಿ.ಮೀ. ಹೊಸ ಮಾರ್ಗ ಯೋಜನೆಗಳಿಗೆ ಪ್ರಾಥಮಿಕ ತಾಂತ್ರಿಕ ಮತ್ತು ಸಂಚಾರ ಸರ್ವೆ ( ಪ್ರಿಲಿಮಿನರಿ ಎಂಜಿನಿಯರಿಂಗ್‌ ಕಮ್‌ ಟ್ರಾಫಿಕ್‌ ಸರ್ವೆ) ಕಾರ್ಯವನ್ನು ಪ್ರಕಟಿಸಿತ್ತು.

ಮಂಗಳೂರು- ಬೆಂಗಳೂರು ರೈಲು ಮಾರ್ಗದ ಸಕಲೇಶಪುರ ಭಾಗದಲ್ಲಿ ರೈಲು ಸಂಚಾರ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರವಾಗಿ ನಂದಿಕೂರು ಮೂಲಕ ಸುಮಾರು 135 ಕಿ.ಮೀ. ಪರ್ಯಾಯ ಮಾರ್ಗದ ಪ್ರಸ್ತಾವವನ್ನು ರೈಲ್ವೇ ಯಾತ್ರಿಕರ ಸಂಘ ಮಂಡಿಸಿತ್ತು. ನಂದಿಕೂರು, ಕಾರ್ಕಳ, ಬಜಗೋಳಿ, ಉಜಿರೆ, ಚಾರ್ಮಾಡಿ ಮೂಲಕ ಸಾಗಿ ಸೋಮನಕಾಡು ಸೇತುವೆಯ ಭಾಗದಲ್ಲಿ ಸುರಂಗದ ಮೂಲಕ ಸಾಗಿ ಕೊಟ್ಟಿಗೆಹಾರದಿಂದ ಮೂಡಿಗೆರೆಯಲ್ಲಿ ರೈಲು ಮಾರ್ಗಕ್ಕೆ ಜೋಡಣೆಯಾಗಿ ಅಲ್ಲಿಂದ ಮುಂದೆ ಬೆಂಗಳೂರಿಗೆ ಸಾಗುವುದು ಮತ್ತು ನಂದಿಕೂರು ಜಂಕ್ಷನ್‌ ಆಗಿ ರೂಪುಗೊಳ್ಳುವುದು ಈ ಪ್ರಸ್ತಾವನೆಯಲ್ಲಿ ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next