Advertisement

Mysore; ಹೊಸ ಬಾರ್ ಲೈಸೆನ್ಸ್ ಕೊಡಲ್ಲ, ಇದರ ಬಗ್ಗೆ ಚರ್ಚೆಯೇ ಬೇಡ: ಸಿಎಂ ಸಿದ್ದರಾಮಯ್ಯ

12:25 PM Oct 07, 2023 | Team Udayavani |

ಮೈಸೂರು: ರಾಜ್ಯದಲ್ಲಿ ಹೊಸ ಮದ್ಯದಂಗಡಿ ತೆರೆಯುವ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಹೊಸ ಬಾರ್ ಲೈಸನ್ಸ್ ಕೊಡುವ ವಿಚಾರ ಸರ್ಕಾರದ ಮುಂದೆ ಇಲ್ಲ. ಡಿ.ಕೆ ಶಿವಕುಮಾರ್ ಎಲ್ಲೂ ಕೂಡ ಹೊಸ ಲೈಸನ್ಸ್ ಕೊಡುತ್ತೇವೆಂದು ಹೇಳಿಲ್ಲ‌. ಸದ್ಯಕ್ಕೆ ಆ ವಿಚಾರದಲ್ಲಿ ಯಾವ ಚರ್ಚೆಗಳು ಬೇಡ ಎಂದು ಹೇಳಿದ್ದಾರೆ.

Advertisement

ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರು ಹೊಸ ಮದ್ಯದಂಗಡಿ ತೆರೆಯುವುದಿಲ್ಲ ಎಂದಿದ್ದರು. ಆದರೆ ಮತ್ತೊಂದೆಡೆ ಡಿಕೆ ಶಿವಕುಮಾರ್ ಅವರು, ಇದು ಹಣಕಾಸು ಇಲಾಖೆಯ ನಿರ್ಧಾರ. ಕಳೆದ ಮೂವತ್ತು ವರ್ಷಗಳಿಂದ ಹೊಸ ಮದ್ಯದಂಗಡಿ ಅನುಮತಿ ನೀಡಿಲ್ಲ. ಉದ್ಯೋಗ ಸೃಷ್ಠಿ ಕಾರಣದಿಂದ ಅನುಮತಿ ನೀಡುತ್ತೇವೆ ಎಂದಿದ್ದರು.

ಇಂದು ಮೈಸೂರಿನಲ್ಲಿ ಮಾತನಾಡಿದ ಸಿಎಂ, “ಜನರ ಭಾವನೆಗಳನ್ನು ಕೇಳಬೇಕು, ಗೌರವಿಸಬೇಕು‌. ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ ಹೊಸ ಲೈಸನ್ಸ್‌ಗಳು ಯಾವುದು ಇಲ್ಲ” ಎಂದರು.

ಮಹಿಷ ದಸರವನ್ನು ಸರ್ಕಾರ ಮಾಡಿಲ್ಲ. ನಾವು ಹಿಂದೆಯೂ ಮಾಡಿಲ್ಲ ಈಗಲೂ ಮಾಡುತ್ತಿಲ್ಲ. ಯಾರೋ ಹಿಂದಿನಿಂದ ಮಹಿಷ ದಸರಾ ಮೈಸೂರಿನಲ್ಲಿ ಮಾಡುತ್ತಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಏನು ಮಾಡಿಲ್ಲ. ಈಗ ಆ ವಿಚಾರದಲ್ಲಿ ಜಿಲ್ಲಾಡಳಿತ ತೀರ್ಮಾನ ಕೈಗೊಳ್ಳುತ್ತದೆ ಎಂದರು.

ಇದನ್ನೂ ಓದಿ:Tollywood: ರಾಮ್ ಪೋತಿನೇನಿ – ಅನುಪಮಾ ಪರಮೇಶ್ವರನ್ ವಿವಾಹ? ನಟಿಯ ತಾಯಿ ಸ್ಪಷ್ಟನೆ

Advertisement

ಶಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ನಾನು ಈ ವಿಚಾರದಲ್ಲಿ ಯಾವ ಪ್ರತಿಕ್ರಿಯೆಯನ್ನು ನೀಡಲ್ಲ ಎಂದರು.

ಕೇಂದ್ರದಿಂದ ಬರ ಅಧ್ಯಯನ ವಿಚಾರಕ್ಕೆ ಮಾತನಾಡಿ, ಎಲ್ಲಾ ಹಳ್ಳಿಯ ಜನರನ್ನು ಖುದ್ದಾಗಿ ಭೇಟಿ ಮಾಡಿ ಸಮಸ್ಯೆ ಆಲಿಸಿ ಎಂದು ಕೇಂದ್ರದ ತಂಡಕ್ಕೆ ಕೇಳಿಕೊಂಡಿದ್ದೇನೆ. ಬರ ಪ್ರವಾಸದ ಯೋಜನೆ ಅವರೇ ಮಾಡಿಕೊಂಡಿದ್ದಾರೆ. ಆ ಕಡೆ ಹೋಗಿ ಈ ಕಡೆ ಬನ್ನಿಯೆಂದು ನಾವು ನಿರ್ಧರಿಸಲು ಸಾಧ್ಯವಿಲ್ಲ. ಹೊಲದಲ್ಲಿ ಹಸಿರು ಇದ್ದ ಕಾರಣಕ್ಕೆ ಅದು ಫಲ ಎಂಬ ಅರ್ಥವಲ್ಲ. ಬೆಳೆ ಬರಬೇಕು ಹೀಗಾಗಿ ಹಸಿರನ್ನು ನೋಡಿ ತೀರ್ಮಾನವಾಗಬಾರದು. ನಾವು 4500 ಕೋಟಿ ಬರ ಪರಿಹಾರ ಕೇಳಿದ್ದೇವೆ. ಕೇಂದ್ರ ತಂಡ ಇಲ್ಲಿಂದ ಹೋಗಿ ವರದಿ ಕೊಡುತ್ತದೆ. ಆನಂತರ ಅಧ್ಯಯನದ ವರದಿ ಬರುತ್ತದೆ. ಬರಕ್ಕೂ ಗ್ಯಾರಂಟಿ ಯೋಜನೆಗಳಿಗೂ ಸಂಬಂಧ ಇಲ್ಲ. ಬರದ ಪರಿಸ್ಥಿತಿ ಇದ್ದರೂ ಗ್ಯಾರಂಟಿಗಳು ಎಂದಿನಂತೆ ನಡೆಯುತ್ತವೆ ಎಂದರು.

ಜಾತಿ ಗಣತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನವೆಂಬರ್‌ ನಲ್ಲಿ ಕರ್ನಾಟಕದ ಜಾತಿಗಣತಿ ವರದಿ ನನ್ನ ಕೈ ಸೇರಬಹುದು, ಆನಂತರ ಪರಿಶೀಲಿಸಿ ತೀರ್ಮಾನ ಮಾಡುತ್ತೇವೆ. ಜಾತಿಗಣತಿ ಸಮಾಜವನ್ನು ವಿಂಗಡಿಸುವುದಿಲ್ಲ. ಯಾವ ಸಮುದಾಯ ಎಷ್ಟಿದೆ ಎಂಬುದು ಅಂಕಿ ಅಂಶಗಳು ಸರ್ಕಾರಕ್ಕೆ ಬೇಕು. ಯೋಜನೆಗಳ ಸಿದ್ಧಪಡಿಸಲು ಈ ಯೋಜನೆಗಳು ಅವಶ್ಯ ಎಂದರು.

ಪ್ರಧಾನಿ ಬಾಯಲ್ಲಿ ಮಾತ್ರ ಸಬ್‌ ಕಾ ಸಾಥ್ ಸಬ್ ಕಾ ವಿಕಾಸ್ ಅನ್ನುತ್ತಾರೆ. ಆದರೆ ಅವರ ನಡೆನುಡಿಗೆ ಬಹಳ ವ್ಯತ್ಯಾಸಗಳಿವೆ. ಹೀಗಾಗಿ ಜಾತಿ ಗಣತಿ ವಿರೋಧಿಸುತ್ತಾರೆ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next