ಹೊಸದಿಲ್ಲಿ: ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಪ್ರತ್ಯೇಕತಾವಾದಿಗಳ ಜತೆ ಮಾತುಕತೆ ನಡೆಸಬಹುದು ಎಂಬ ಊಹಾಪೋಹಗಳಿಗೆ ತೆರೆಬಿದ್ದಿದೆ. ಕಾಶ್ಮೀರವು ಸಹಜ ಸ್ಥಿತಿಗೆ ಬರಲು ಕಾನೂನುಬದ್ಧವಾಗಿ ಗುರುತಿಸಲ್ಪಟ್ಟ ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತೇವೆಯೇ ಹೊರತು, ಪ್ರತ್ಯೇಕತಾವಾದಿಗಳ ಜತೆ ಸಾಧ್ಯವೇ ಇಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ಶುಕ್ರವಾರ ಸ್ಪಷ್ಟಪಡಿಸಿದೆ. ಮಾತುಕತೆಯಲ್ಲಿ ಕಾನೂನುಬದ್ಧ ರಾಜಕೀಯ ಪಕ್ಷಗಳಿದ್ದರಷ್ಟೇ ನಾವು ಪಾಲ್ಗೊಳ್ಳುತ್ತೇವೆ. ಕಾಶ್ಮೀರದ ‘ಆಜಾದಿ’ ಕೇಳುತ್ತಿರುವ ಪ್ರತ್ಯೇಕತಾವಾದಿಗಳನ್ನು ಪಕ್ಕದಲ್ಲಿ ಕೂರಿಸಲು ನಾವು ಇಷ್ಟಪಡುವುದಿಲ್ಲ ಎಂದು ಅಟಾರ್ನಿ ಜನರಲ್ ಮುಕುಲ್ ರೋಹ್ಟಾಗಿ ಹೇಳಿದ್ದಾರೆ. ಇದಕ್ಕೆ ಸುಪ್ರೀಂ ನ್ಯಾಯಪೀಠವೂ ಧ್ವನಿಗೂಡಿ ಸಿದ್ದು, ‘ಸರಕಾರ ಹೇಳುತ್ತಿರುವಂಥ ವ್ಯಕ್ತಿಗಳು ಬಂದು ಮಾತುಕತೆ ನಡೆಸಿ, ಸಮಸ್ಯೆ ಪರಿಹಾರಕ್ಕೆ ಸಲಹೆ ನೀಡಲಿ’ ಎಂದಿದೆ.
ಅಲ್ಲದೆ, ಕಲ್ಲುತೂರಾಟ ಮತ್ತು ಹಿಂಸಾತ್ಮಕ ಬೀದಿ ಜಗಳವನ್ನು ಪರಿಹರಿಸಲು ನೀವೂ ಸೂಕ್ತ ಸಲಹೆ ನೀಡಿ ಎಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಬಾರ್ ಅಸೋಸಿಯೇಷನ್‌ಗೂ ಸುಪ್ರೀಂ ಸೂಚಿಸಿದೆ. ಪ್ರತಿಭಟನಕಾರರ ಮೇಲೆ ಪೆಲ್ಲೆಟ್ ಗನ್ ಬಳಕೆಗೆ ನಿರ್ಬಂಧ ಹೇರುವಂತೆ ಇದೇ ವಕೀಲರ ಸಂಘ ಕೋರಿತ್ತು. ಅದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಖೇಹರ್ ನೇತೃತ್ವದ ನ್ಯಾಯಪೀಠ, ‘ಸಮಸ್ಯೆ ಪರಿಹಾರಕ್ಕೆ ನೀವೇ ಮೊದಲ ಹೆಜ್ಜೆಯಿಡಿ. ಸಂಬಂಧಪಟ್ಟ ಎಲ್ಲರ ಮಾತುಕತೆಗೆ ವೇದಿಕೆ ಸಿದ್ಧಪಡಿಸಿ’ ಎಂದು ಹೇಳಿ ವಿಚಾರಣೆಯನ್ನು ಮೇ 9ಕ್ಕೆ ಮುಂದೂಡಿದೆ.
ರಾಜಕೀಯಕ್ಕೆ ಅವಕಾಶವಿಲ್ಲ: ಇದೇ ವೇಳೆ, ಕೆಲವು ಪ್ರತ್ಯೇಕತಾವಾದಿ ನಾಯಕರ ಹೆಸರನ್ನೆತ್ತಿ ಅವರ ಬಿಡುಗಡೆಗೆ ಆಗ್ರಹಿಸಿರುವ ವಕೀಲರ ಸಂಘದ ವಿರುದ್ಧ ಕಿಡಿಕಾರಿದ ರೋಹ್ಟಾಗಿ, ‘ಮಾತುಕತೆಗಳೆಲ್ಲ ನಿಯಮದ ಪ್ರಕಾರವೇ ನಡೆಯಬೇಕು. ನಿಯಮಗಳನ್ನು ಒಪ್ಪಿದರೆ, ಪ್ರತ್ಯೇಕತಾವಾದಿಗಳನ್ನು ಬಿಡುಗಡೆ ಮಾಡಬಹುದು. ಇಲ್ಲದಿದ್ದರೆ ಇಲ್ಲ. ಉನ್ನತ ಮಟ್ಟದಲ್ಲಿ ಅಂದರೆ, ಸಿಎಂ ಮೆಹಬೂಬಾ ಮುಫ್ತಿ ಹಾಗೂ ಪ್ರಧಾನಿ ಮೋದಿ ನಡುವೆ ಮಾತುಕತೆ ನಡೆಯುತ್ತಿದೆ. ಇಲ್ಲಿ ರಾಜಕೀಯಕ್ಕೆ, ಷರತ್ತುಗಳಿಗೆ ಅವಕಾಶವಿಲ್ಲ’ ಎಂದರು. ರೋಹ್ಟಾಗಿ ಅವರ ಖಾರ ಮಾತು ಕೇಳು ತ್ತಲೇ ಮಧ್ಯಪ್ರವೇಶಿಸಿದ ನ್ಯಾಯಪೀಠ, ‘ನಾವು ಮಾತುಕತೆ ಪ್ರಕ್ರಿಯೆ ನಡೆಯಲಿ ಎಂದು ಬಯಸುತ್ತೇವೆ. ಕೋರ್ಟ್‌ಗೆ ಯಾವುದೇ ಹಕ್ಕಿಲ್ಲ ಎಂದು ನೀವು ಭಾವಿಸುತ್ತಿದ್ದರೆ, ನಾವು ಈ ಕ್ಷಣವೇ ಈ ಫೈಲ್ ಅನ್ನು ಕ್ಲೋಸ್ ಮಾಡುತ್ತೇವೆ’ ಎಂದಿತು.
ವಕೀಲರ ಸಂಘಕ್ಕೆ ತರಾಟೆ: ಇನ್ನೊಂದೆಡೆ, ವಕೀಲರ ಸಂಘವನ್ನೂ ತರಾಟೆಗೆ ತೆಗೆದು ಕೊಂಡ ಕೋರ್ಟ್, ‘ಮೊದಲು ನೀವು 2 ವಾರ ಯಾವುದೇ ಪ್ರತಿಭಟನೆ, ಕಲ್ಲು ತೂರಾಟ ನಡೆಯದಂತೆ ನೋಡಿಕೊಳ್ಳಿ. ಅದು ಸಾಧ್ಯವಾದರೆ ನಾವು ಕೂಡ ಪೆಲ್ಲೆಟ್ ಬಳಸದಂತೆ ಭದ್ರತಾ ಪಡೆಗಳಿಗೆ ಸೂಚಿಸುತ್ತೇವೆ’ ಎಂದಿತು. ಮೊದಲ ಸಕಾರಾತ್ಮಕ ಹೆಜ್ಜೆ ನಿಮ್ಮಿಂದಲೇ ಆರಂಭವಾಗಲಿ ಎಂದೂ ಹೇಳಿತು.