Advertisement

ಕೋವಿಡ್‌ ನಿಯಂತ್ರಣದಲ್ಲಿ ನಿರ್ಲಕ್ಷ್ಯ ಸಲ್ಲ: ಡಿಸಿ

02:55 PM Aug 14, 2020 | Suhan S |

ಸುರಪುರ: ಕೊವೀಡ್‌ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಸರಿಯಾಗಿ ಪತ್ತೆ ಹಚ್ಚುತ್ತಿಲ್ಲ. ಇದರಿಂದ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇದು ಸರಿಯಲ್ಲ ಜವಾಬ್ದಾರಿಯಿಂದ ಕೆಲಸ ಮಾಡಿ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಇಲ್ಲಿನ ತಹಶೀಲ್ದಾರ್‌ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಹುಣಸಗಿ ಹಾಗೂ ಸುರಪುರ ತಾಲೂಕು ಅನುಷ್ಠಾನ ಅಧಿಕಾರಿ ಮತ್ತು ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಕೋವಿಡ್ ನಿಯಂತ್ರಣದಲ್ಲಿ ಎಲ್ಲರಿಗಿಂತಲೂ ಆರೋಗ್ಯ ಇಲಾಖೆಯವರ ಪಾತ್ರ ಅತ್ಯಂತ ಪ್ರಮುಖವಾಗಿದೆ. ದೇವರನ್ನು ನಾವ್ಯಾರು ಕಂಡಿಲ್ಲ. ಜನರ ಪಾಲಿಗೆ ವೈದ್ಯರೇ ನಿಜವಾದ ದೇವರು. ಹಾಗಾಗಿ ಜನ ನಿಮ್ಮ ಮೇಲೆ ತುಂಬಾ ಭರವಸೆ ಇಟ್ಟಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು. ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕವನ್ನು ತ್ವರಿತವಾಗಿ ಪತ್ತೆ ಹಚ್ಚಿ ಅವರನ್ನೂ ತಪಾಸಣೆ ಮಾಡಿಸಿ. ಸೋಂಕು ಕಂಡುಬರದೆ ಇದ್ದಲ್ಲಿ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚಿಸಬೇಕು. ಆಶಾ ಮತ್ತು ಆರೋಗ್ಯ ಕಾರ್ಯಕರ್ತರ ಮೂಲಕ ಪ್ರತಿದಿನ ಅವರ ಆರೋಗ್ಯ ಕುರಿತು ವರದಿ ಸಂಗ್ರಹಿಸಿಕೊಳ್ಳಬೇಕು ಎಂದು ತಿಳಿಸಿದರು.

ನಗರದಲ್ಲಿ ಏಳು ಕಂಟೈನ್ಮೆಂಟ್‌ ವಲಯಗಳನ್ನಾಗಿ ಗುರುತಿಸಲಾಗಿದೆ. ಆ ವಲಯಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಿಸಬೇಕು. ಯಾರಲ್ಲಾದರು ಜ್ವರ, ನೆಗಡಿ, ಕೆಮ್ಮು ಕಂಡುಬಂದಲ್ಲಿ ತಕ್ಷಣವೇ ಕೋವಿಡ್‌ ತಪಾಸಣೆ ಮಾಡಿಸಬೇಕು. ಹೊರ ರಾಜ್ಯ ಮತ್ತು ಜಿಲ್ಲೆಯಿಂದ ಬಂದವರನ್ನು ಕಡ್ಡಾಯವಾಗಿ ಕೋವಿಡ್‌ ತಪಾಸಣೆಗೆ ಒಳಪಡಿಸಬೇಕು. ಇದರಿಂದ ಸೋಂಕು ನಿಯಂತ್ರಣ ಮಾಡಲು ಸಾಧ್ಯ ಎಂದರು.

ಪ್ರೊಬೇಷನರಿ ಐಎಎಸ್‌ ಅಧಿಕಾರಿ ಬಿ.ವಿ. ಅಶ್ವಿ‌ಜ, ಜಿಲ್ಲಾ ಆರೋಗ್ಯಾಧಿಕಾರಿ ಎಂ.ಎಸ್‌. ಪಾಟೀಲ, ತಹಶೀಲ್ದಾರ್‌ ನಿಂಗಣ್ಣ ಬಿರಾದಾರ, ಹುಣಸಗಿ ತಹಶೀಲ್ದಾರ ವಿನಯಕುಮಾರ ಪಾಟೀಲ, ತಾಲೂಕು ಆರೋಗ್ಯಾಧಿಕಾರಿ ಡಾ| ಆರ್‌.ವಿ. ನಾಯಕ, ತಾಪಂ ಇಒ ಅಮರೇಶ, ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ಕಕ್ಕೇರಾ ಪುರಸಭೆ ಮುಖ್ಯಾಧಿಕಾರಿ ಆದಪ್ಪ ಕೆಂಭಾವಿ ಸೇರಿ ವಿವಿಧ ಗ್ರಾಮಗಳ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ವೈದ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next