ನವದೆಹಲಿ: ಉತ್ತರಪ್ರದೇಶದ ಕಾನ್ಪುರದಲ್ಲಿ ಝೀಕಾ ವೈರಸ್ ಪ್ರಕರಣ ಹೆಚ್ಚಳವಾಗುತ್ತಿದ್ದು, ಜನರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ(ನವೆಂಬರ್ 10) ತಿಳಿಸಿದ್ದಾರೆ.
ಇದನ್ನೂ ಓದಿ:ಪ್ರೀತಿಗೆ ವಿರೋಧ;ಪ್ರಿಯತಮೆ ಮನೆಯಲ್ಲೇ ಆಕೆಯ ಹತ್ಯೆಗೆ ಯತ್ನ, ಪ್ರಿಯತಮನೂ ಆಸ್ಪತ್ರೆಗೆ ದಾಖಲು
ಕಳೆದ ಅಕ್ಟೋಬರ್ ನಲ್ಲಿ ಮೊದಲ ಪ್ರಕರಣ ಪತ್ತೆಯಾದ ನಂತರ ಇದೀಗ ಕಾನ್ಪುರದಲ್ಲಿ ನೂರಕ್ಕೂ ಅಧಿಕ ಝೀಕಾ ವೈರಸ್ ಪ್ರಕರಣಗಳು ವರದಿಯಾಗಿವೆ. ಐಎಎನ್ ಎಸ್ ವರದಿ ಪ್ರಕಾರ, ಬುಧವಾರ 16ಕ್ಕೂ ಅಧಿಕ ಝೀಕಾ ವೈರಸ್ ಪ್ರಕರಣ ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 106ಕ್ಕೆ ತಲುಪಿದೆ.
ಹರಿಜಿಂದರ್ ನಗರ್, ಪೋಖ್ರಾಪುರ್, ತಿವಾರಿಪುರ್ ಬಾಗಿಯಾ ಮತ್ತು ಖ್ವಾಝಿ ಖೇರ್ ಪ್ರದೇಶಗಳಲ್ಲಿನ ಸುಮಾರು 16 ಮಂದಿಯಲ್ಲಿ ಝೀಕಾ ವೈರಸ್ ಪತ್ತೆಯಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ನೇಪಾಲ್ ಸಿಂಗ್ ಮಾಹಿತಿ ನಿಡಿದ್ದಾರೆ.
ಝೀಕಾ ವೈರಸ್ ನಿಂದ ಈವರೆಗೆ 17 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ ಒಟ್ಟಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.