Advertisement

ರಫೇಲ್‌ ತನಿಖೆ ಅನಗತ್ಯ: ಸುಪ್ರೀಂ

05:55 AM Dec 15, 2018 | Team Udayavani |

ಹೊಸದಿಲ್ಲಿ: ರಫೇಲ್‌ ಯುದ್ಧ ವಿಮಾನ ಖರೀದಿ ಅವ್ಯವಹಾರ ಆರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ ಸುಪ್ರೀಂಕೋರ್ಟ್‌ ಕ್ಲೀನ್‌ಚಿಟ್‌ ನೀಡಿದೆ. ಇದು ಪ್ರಧಾನಿ ಮೋದಿ ಹಾಗೂ ಸರಕಾರಕ್ಕೆ ಮಹತ್ವದ ಮೈಲುಗಲ್ಲಾಗಿದ್ದರೆ, ಕಾಂಗ್ರೆಸ್‌ಗೆ ಮುಖಭಂಗ ಉಂಟು ಮಾಡಿದೆ.

Advertisement

ಬಹುಕೋಟಿ ರಫೇಲ್‌ ಡೀಲ್‌ನ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನುಮಾನ ವ್ಯಕ್ತಪಡಿಸುವ ಯಾವುದೇ ಅಂಶವಿಲ್ಲ. ಹೀಗಾಗಿ ಇದರ ಖರೀದಿ ಪ್ರಕ್ರಿಯೆಯಲ್ಲಿ ಕೋರ್ಟ್‌ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ. ಖರೀದಿ ಪ್ರಕ್ರಿಯೆ, ಬೆಲೆ ನಿಗದಿ ಮತ್ತು ಬಿಡಿಭಾಗಗಳ ಖರೀದಿ ಪಾಲುದಾರರ ವಿಚಾರದಲ್ಲಿ ಯಾವುದೇ ಅನುಮಾನಾಸ್ಪದ ಅಂಶಗಳಿಲ್ಲ ಎಂದು ನ್ಯಾಯಪೀಠ ಹೇಳಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಅರ್ಜಿಗಳನ್ನೂ ಕೋರ್ಟ್‌ ತಳ್ಳಿಹಾಕಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ ವಕ್ತಾರ ಶಹನವಾಜ್‌ ಹುಸೇನ್‌, ಮೋದಿ ವಿರುದ್ಧ ಹುಸಿ ಆರೋಪ ಮಾಡುತ್ತಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕ್ಷಮೆ ಕೇಳಬೇಕು ಎಂದಿದ್ದಾರೆ. ಅಷ್ಟೇ ಅಲ್ಲ, ಸಂಸತ್ತಿನಲ್ಲೇ ರಾಹುಲ್‌ ಕ್ಷಮೆ ಕೇಳಬೇಕು ಎಂದು ರಾಜನಾಥ್‌ ಸಿಂಗ್‌ ಆಗ್ರಹಿಸಿದ್ದಾರೆ.

ಜೆಪಿಸಿ ತನಿಖೆಯಾಗಲಿ
ಸು.ಕೋರ್ಟ್‌ ತೀರ್ಮಾನದಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಿಲ್ಲ. ಈಗಲೂ ಈ ವಿಚಾರ ಜನತಾ ನ್ಯಾಯಾಲಯದಲ್ಲಿದೆ. ಇದಕ್ಕೆ ಸಂಬಂಧಿಸಿ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

ಕಾಲ್ಪನಿಕ ಆರೋಪ: ಜೇಟ್ಲಿ
ರಫೇಲ್‌ ಡೀಲ್‌ ವಿಚಾರದಲ್ಲಿ ವಿಪಕ್ಷಗಳ ಆರೋಪವು ಕಾಲ್ಪನಿಕ ಕಥಾನಕದಂತಿದೆ. ಇದು ರಾಷ್ಟ್ರೀಯ ಭದ್ರತೆಯನ್ನು ಆತಂಕಕ್ಕೆ ಸಿಲುಕಿಸಿದೆ ಎಂದು  ವಿತ್ತ ಸಚಿವ ಅರುಣ್‌ ಜೇಟ್ಲಿ ಆರೋಪಿಸಿದ್ದಾರೆ. ಸುಪ್ರೀಂ ಕೋರ್ಟ್‌ ತೀರ್ಪಿನಿಂದಾಗಿ ವಿಪಕ್ಷಗಳ ಆರೋಪ ಸುಳ್ಳು ಎಂಬುದು ಗೊತ್ತಾಗಿದೆ. ಪ್ರಾಮಾಣಿಕ ಒಪ್ಪಂದಗಳನ್ನೇ ಪ್ರಶ್ನಿಸಿದರೆ ಪ್ರಾಮಾಣಿಕ ಅಧಿಕಾರಿಗಳು ಮತ್ತು ಸೇನೆಯು ಇಂಥ ಪ್ರಕ್ರಿಯೆಯನ್ನು ಮುಂದಿನ ದಿನಗಳಲ್ಲಿ ನಡೆಸುವುದಕ್ಕೆ ಹಿಂಜರಿಯುತ್ತದೆ ಎಂದು ಜೇಟ್ಲಿ ಹೇಳಿದ್ದಾರೆ.

ಬಿಜೆಪಿಗೆ ದೊಡ್ಡ ಜಯ
ಈಗಾಗಲೇ ಪಂಚರಾಜ್ಯ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ಪಾಲಿಗೆ ಈ ತೀರ್ಪು ಅನುಕೂಲಕರವಾಗಿ ಪರಿಣಮಿಸುವ ಸಾಧ್ಯತೆ ಇದೆ. ಕಾಂಗ್ರೆಸ್‌ ನಾಯಕರು ಆಗಾಗ ಈ ಒಪ್ಪಂದವನ್ನೇ ಪ್ರಚಾರದ ವೇಳೆ ಅಸ್ತ್ರವನ್ನಾಗಿ ಬಳಸಿಕೊಂಡಿದ್ದರು. ಈಗ ಸುಪ್ರೀಂ ಕೋರ್ಟ್‌ ಈ ಒಪ್ಪಂದದಲ್ಲಿ ಯಾವುದೇ ಹಗರಣ ನಡೆದಿಲ್ಲ ಎಂದಿರುವುದರಿಂದ 2019ರ ಲೋಕಸಭೆ ಚುನಾವಣೆಯಲ್ಲಿ ನಮ್ಮ ಸರಕಾರ ಹಗರಣಗಳೇ ಇಲ್ಲದ್ದು ಎಂದು ಹೇಳಿಕೊಳ್ಳಬಹುದಾಗಿದೆ.

Advertisement

ಕೋರ್ಟ್‌ ಹೇಳಿದ್ದೇನು?
– ಯಾವುದೇ ಖಾಸಗಿ ಸಂಸ್ಥೆಗೆ ವಾಣಿಜ್ಯಿಕ ಅನುಕೂಲ ಮಾಡಿಕೊಟ್ಟ ಅನುಮಾನವಿಲ್ಲ
– ಇತರ ದೇಶಗಳು ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಹೊಂದಿರುವಾಗ ಭಾರತ ಹಿಂದುಳಿಯಲಾಗದು
– ಖರೀದಿ ಪ್ರಕ್ರಿಯೆಯಲ್ಲಿ ಮಧ್ಯ ಪ್ರವೇಶಿಸುವುದಕ್ಕೆ ಯಾವುದೇ ಕಾರಣ ಕಂಡುಬಂದಿಲ್ಲ
– ಬೆಲೆಯನ್ನು ಹೋಲಿಕೆ ಮಾಡುವುದು ಕೋರ್ಟ್‌ನ ಕೆಲಸವಲ್ಲ
– ಖರೀದಿ ಪ್ರಕ್ರಿಯೆ, ಬೆಲೆ ಮತ್ತು ಆಫ್ಸೆಟ್‌ ಪಾಲುದಾರರ ವಿಚಾರದಲ್ಲಿ ಮಧ್ಯಪ್ರವೇಶಿಸಲು ಕಾರಣಗಳಿಲ್ಲ 

ಕಾಂಗ್ರೆಸ್‌ ಆರೋಪಗಳೇನು?
– ಪ್ರತಿ ಯುದ್ಧ ವಿಮಾನಕ್ಕೂ 526 ಕೋಟಿ ರೂ. ನೀಡಲು ಯುಪಿಎ ಕಾಲದಲ್ಲಿ ನಿಗದಿಯಾಗಿತ್ತು. ಆದರೆ ಈಗ 1,670 ಕೋಟಿ ರೂ.ಗಳಿಗೆ ನಿಗದಿ ಮಾಡಲಾಗಿದೆ. ಈ ಪ್ರಮಾಣದ ಹೆಚ್ಚಳ ಏಕೆ?
– ಡೀಲ್‌ನಿಂದ ಎಚ್‌ಎಎಲ್‌ ಅನ್ನು ಹೊರಗಿಟ್ಟಿದ್ದು ಏಕೆ? ಖಾಸಗಿ ಸಂಸ್ಥೆಗೆ ಡೀಲ್‌ ಸಿಕ್ಕಿದ್ದು ಹೇಗೆ?
– 2008ರಲ್ಲಿ ಫ್ರಾನ್ಸ್‌ ಜತೆಗೆ ಒಪ್ಪಂದ ಮಾಡಿಕೊಂಡಾಗ ದರದ ಮಾಹಿತಿ ಬಹಿರಂಗ ಮಾಡಲು ಅಡ್ಡಿ ಇರಲಿಲ್ಲ. ಈಗ ‘ರಹಸ್ಯ’ದ ಅಡ್ಡಿ ಬಂದಿದ್ದು ಏಕೆ?
– 2017ರ ನವೆಂಬರ್‌ನಲ್ಲಿ ಕತಾರ್‌ ದೇಶ ಫ್ರಾನ್ಸ್‌ನಿಂದ ಇದೇ ಯುದ್ಧ ವಿಮಾನಗಳನ್ನು 694 ಕೋಟಿ ರೂ.ಗಳಿಗೆ ಖರೀದಿ ಮಾಡಿದೆ. ಭಾರತಕ್ಕೆ ಏಕೆ ದುಬಾರಿ?
– ಕೇಂದ್ರ ಸರಕಾರ ರಿಲಯೆನ್ಸ್‌ ಏವಿಯೇಶನ್‌ಗೆ ಅನುಕೂಲ ಮಾಡಿಕೊಡಲು ಈ ಒಪ್ಪಂದ ಮಾಡಿಕೊಂಡಿದೆ.

ಸತ್ಯ ಎಂದಿಗೂ ಗೆಲ್ಲುತ್ತದೆ. ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್‌ ಅಧ್ಯಕ್ಷರು ಮಾಡುತ್ತಿದ್ದ ತಪ್ಪು ಮಾಹಿತಿ ಕ್ಯಾಂಪೇನ್‌ ಅನ್ನು ಸುಪ್ರೀಂ ಕೋರ್ಟ್‌ ತೀರ್ಪು ಬಹಿರಂಗಗೊಳಿಸಿದೆ. ಚೌಕಿದಾರ ಯಾವತ್ತೂ ಚೋರ್‌ ಆಗಿರಲು ಸಾಧ್ಯವಿಲ್ಲ. 
– ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next