ರಾಂಚಿ: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನ ಮೂರನೇ ದಿನವಾದ ರವಿವಾರ ಸರ್ಫರಾಜ್ ಖಾನ್ ಮೈದಾನದಲ್ಲಿ ಎರಡು ಅತ್ಯತ್ತಮ ಕ್ಯಾಚ್‌ಗಳೊಂದಿಗೆ ಗಮನ ಸೆಳೆದರು ಆದರೆ ಹೆಲ್ಮೆಟ್ ಧರಿಸದೆ ಬ್ಯಾಟ್ಸ್ ಮ್ಯಾನ್ ಗೆ ಅತೀ ಹತ್ತಿರದಲ್ಲಿ ನಿಂತಿದ್ದಕ್ಕಾಗಿ ನಾಯಕ ರೋಹಿತ್ ಶರ್ಮ ಅವರ ಕೋಪಕ್ಕೆ ಸಿಲುಕಬೇಕಾಯಿತು.
ಇಂಗ್ಲೆಂಡ್‌ನ ಎರಡನೇ ಇನ್ನಿಂಗ್ಸ್‌ನ ನಂತರದ ಭಾಗದಲ್ಲಿ ಕುಲದೀಪ್ ಯಾದವ್ ಬೌಲಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿದ್ದು,ಎರಡನೇ ಟೆಸ್ಟ್ ಆಡುತ್ತಿದ್ದ ಸರ್ಫರಾಜ್, ಹೆಲ್ಮೆಟ್ ಧರಿಸದೆ ಕ್ಲೋಸ್-ಇನ್ ಸ್ಥಾನದಲ್ಲಿ ಫೀಲ್ಡಿಂಗ್ ನಿಂತಿದ್ದರು. ಇದು ರೋಹಿತ್ ಎಚ್ಚರಿಕೆ ನೀಡಲು ಕಾರಣವಾಯಿತು. “ಅರೇ ಭಾಯ್, ಹೀರೋ ನಹೀ ಬನ್ನೆ ಕಾ, ಹೆಲ್ಮೆಟ್ ಪೆಹೆನ್ ಲೆ (ಹೀರೋ ಆಗಿ ನಟಿಸುವ ಅಗತ್ಯವಿಲ್ಲ, ಹೆಲ್ಮೆಟ್ ಧರಿಸು )” ಎಂದು ರೋಹಿತ್ ಸರ್ಫರಾಜ್‌ಗೆ ತಮ್ಮದೇ ಶೈಲಿಯಲ್ಲಿ ಹೇಳುವುದು ಕೇಳಿಸಿತು.
ಸರ್ಫರಾಜ್ ತನ್ನ ನಾಯಕನ ಮಾತನ್ನು ಕೇಳಲೇ ಬೇಕಾಯಿತು. ಕೂಡಲೇ ಡ್ರೆಸ್ಸಿಂಗ್ ರೂಮ್ ನಿಂದ ಹೆಲ್ಮೆಟ್ ತರಿಸಿಕೊಂಡು ಸರ್ಫರಾಜ್ ಧರಿಸಿ ಫೀಲ್ಡಿಂಗ್ ಮುಂದುವರಿಸಿದರು.
ಸರಣಿ ಗೆಲುವಿಗೆ 152 ರನ್ ಅಗತ್ಯ
ಭಾರತ ಮೊದಲ ಇನ್ನಿಂಗ್ಸ್ 307 ಮತ್ತು 3 ನೇ ದಿನದಾಟಕ್ಕೆ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿದೆ. ಪಂದ್ಯದ ಮತ್ತು ಸರಣಿ ಗೆಲುವಿಗೆ 152 ರನ್ ಅಗತ್ಯವಾಗಿದೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 353 & ಎರಡನೇ ಇನ್ನಿಂಗ್ಸ್ 145ಕ್ಕೆ ಸರ್ವ ಪತನ ಕಂಡಿದೆ.