Advertisement

ಸ್ವಚ್ಛತೆ ಗುತ್ತಿಗೆ ಸ್ಥಳೀಯರಿಗೆ ಬೇಡ!

10:39 AM Oct 29, 2019 | Suhan S |

ಹುಬ್ಬಳ್ಳಿ: ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್‌)ಯ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ವಚ್ಛತಾ ನಿರ್ವಹಣೆಯನ್ನು ಸ್ಥಳೀಯ ಗುತ್ತಿಗೆದಾರರಿಗೆ ಒದಗಿಸುವ ಬದಲು ರಾಷ್ಟ್ರಮಟ್ಟದ ಗುತ್ತಿಗೆದಾರರನ್ನು ನೇಮಿಸಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಕಿಮ್ಸ್‌ ನಿರ್ದೇಶಕರಿಗೆ ಸೂಚಿಸಿದರು.

Advertisement

ಸೋಮವಾರ ಕಿಮ್ಸ್‌ನ ನಿರ್ದೇಶಕರ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಕಿಮ್ಸ್‌ನಲ್ಲಿ ಸ್ವಚ್ಛತೆಯನ್ನು ಸ್ಥಳೀಯ ಗುತ್ತಿಗೆ ದಾರರಿಗೆ ನೀಡುತ್ತಿರುವುದರಿಂದ ಅವರು ಸ್ವಚ್ಛತೆ ಸರಿಯಾಗಿ ನಿಭಾಯಿಸದಿದ್ದಾಗ ಅವರ ಮೇಲೆ ಸೂಕ್ತ ಕ್ರಮಕೈಗೊಳ್ಳಲು ಸಮಸ್ಯೆ ಆಗುತ್ತಿದೆ. ಅವರೇ 3-4 ಏಜೆನ್ಸಿಗಳ ಮೂಲಕ ಮತ್ತೆ ಗುತ್ತಿಗೆ ಪಡೆದುಕೊಳ್ಳುತ್ತಾರೆ. ಹೀಗಾಗಿ ಕಠಿಣ ನಿರ್ಧಾರ ತೆಗೆದುಕೊಂಡು ಸ್ಥಳೀಯರ ಬದಲು ರಾಷ್ಟ್ರಮಟ್ಟದ ಅತ್ಯುತ್ತಮ ಏಜೆನ್ಸಿಗೆ ಸ್ವಚ್ಛತಾ ನಿರ್ವಹಣೆ ಗುತ್ತಿಗೆ ನೀಡಿ. ಹೈಟ್ಸ್‌ ಏಜೆನ್ಸಿಯವರಿಗೆ ಕೊಟ್ಟರೂ ಪರವಾಗಿಲ್ಲ. ಒಟ್ಟಾರೆ ಕಿಮ್ಸ್‌ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಿ ಎಂದರು.

ಆಯುಷ್ಮಾನ್‌ ಭಾರತದಡಿ ರೋಗಿಗಳಿಗೆ ಚಿಕಿತ್ಸೆ ನೀಡಿದರೆ ಹೆಚ್ಚಿನ ಅನುಕೂಲವಾಗುವುದೇ ಕಿಮ್ಸ್‌ಗೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಬಡರೋಗಿಗಳು ಆಯುಷ್ಮಾನ್‌ ಸೌಲಭ್ಯದಡಿ ಬರುವಂತೆ ನೋಡಿಕೊಳ್ಳಿ. ವೈದ್ಯರಿಗೆ ತರಬೇತಿಯನ್ನು ಖಾಸಗಿ-  ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ)ದಲ್ಲಿ ನೀಡಿ.

ಕ್ಯಾನ್ಸರ್‌ ಆಸ್ಪತ್ರೆ ಉನ್ನತೀಕರಣಕ್ಕೆ ಸಂಬಂಧಿಸಿ ಮತ್ತೂಮ್ಮೆ ಪ್ರಸ್ತಾವನೆ ಸಲ್ಲಿಸಿ. ಅದು ಎಲ್ಲಿಗೆ ಬಂತು ಎಂಬುದನ್ನು ಗಂಭೀರವಾಗಿ ಪರಿಗಣಿಸಿ. ಅದಕ್ಕಾಗಿ ಜವಾಬ್ದಾರಿಯುತ ಓರ್ವರನ್ನು ನೇಮಿಸಿ ಎಂದು ಸೂಚಿಸಿದರು. ಕಿಮ್ಸ್‌ನ ಕಿರಿದಾದ ಜಾಗದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಬಾಲಕರ ಹಾಸ್ಟೆಲ್‌ ಕಾಮಗಾರಿ ಸ್ಥಗಿತ ಗೊಳಿಸಿ. ಹಳೆಯದಾದ ಆನಂದ ಹಾಸ್ಟೆಲ್‌ ಮೇಲೆಯೇ ಲಂಬವಾಗಿ ಕಟ್ಟಡ ನಿರ್ಮಿಸಿದರೆ ಜಾಗ ಉಳಿಯುತ್ತದೆ. ಅದಕ್ಕಾಗಿ ಹೊಸ ನೀಲನಕ್ಷೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಿ ಎಂದರು. ಕಿಮ್ಸ್‌ನಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳಿಗೆ ಅಗತ್ಯವಾದ ಹಣಕಾಸನ್ನು ಶೆಟ್ಟರ ಸಹಕಾರದೊಂದಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ತರಲಾಗುವುದು ಎಂದು ಹೇಳಿದರು.

ವಿಶ್ವಾಸಾರ್ಹತೆ ಹೆಚ್ಚಿಸಿ: ಬೃಹತ್‌, ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಮಾತನಾಡಿ, ಕಿಮ್ಸ್‌ ಸ್ವಾಯತ್ತ ಸಂಸ್ಥೆಯಾಗಿದ್ದು, ಆಸ್ಪತ್ರೆ ಆವರಣದಲ್ಲಿ ನೈರ್ಮಲ್ಯತೆ, ಸಾರ್ವಜನಿಕರೊಂದಿಗೆ ಸೌಜನ್ಯಯುತ ನಡವಳಿಕೆಯಿಂದ ವಿಶ್ವಾಸಾರ್ಹತೆ ಹೆಚ್ಚಿಸಬೇಕು. ವೆಚ್ಚ ನಿಯಂತ್ರಣ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ಸರಕಾರದ ನೆರವಿನೊಂದಿಗೆ ದಾನಿಗಳ ಸಹಾಯ ಪಡೆದು ಕಿಮ್ಸ್‌ ಅಭಿವೃದ್ಧಿ ಪಡಿಸಬೇಕು. ಹೊಸ ಯೋಜನೆಗಳನ್ನು ಕೈಗೊಳ್ಳುವಾಗ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರುವುದನ್ನು ಮರೆಯಬೇಡಿ ಎಂದರು.

Advertisement

ಕಿಮ್ಸ್‌ನಲ್ಲಿ ಆರಂಭಿಸಲಾದ ಹೃದ್ರೋಗ ಘಟಕಕ್ಕೆ ಬೆಂಗಳೂರಿನ ಜಯದೇವ ಆಸ್ಪತ್ರೆ ಬರಲು ಹಿಂದೇಟು ಹಾಕಲು ಏನು ಕಾರಣವೆಂದು ತಿಳಿದು ಅದಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾಗಿ. ಇದನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಯ ಸಹಯೋಗದಲ್ಲಿ ಪ್ರಾರಂಭಿಸಲು ಸರಕಾರ ತೀರ್ಮಾನಿಸಿದ್ದು, ಶೀಘ್ರದಲ್ಲೇ ಜಯದೇವ ಆಸ್ಪತ್ರೆಯ ನಿರ್ದೇಶಕರ ನೇತೃತ್ವದ ತಂಡ ಭೇಟಿ ನೀಡಿ, ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದರು.

ಕಿಮ್ಸ್‌ ಸಂಸ್ಥೆಯ ವಿವಿಧ ವಿಭಾಗಗಳನ್ನು ಉನ್ನತೀಕರಣಗೊಳಿಸುವುದಕ್ಕಾಗಿ ಸಲ್ಲಿಸಿರುವ 150 ಕೋಟಿ ರೂ. ಪ್ರಸ್ತಾವನೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಬರುವ ಬಜೆಟ್‌ದಲ್ಲಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಕಿಮ್ಸ್‌ನ ನಿರ್ದೇಶಕ ಡಾ| ರಾಮಲಿಂಗಪ್ಪ ಅಂತರತಾನಿ ಅವರು ಕಿಮ್ಸ್‌ನಲ್ಲಿ ಕಳೆದ 9 ತಿಂಗಳಿನಿಂದ ಆದ ಪ್ರಗತಿಗಳ ಕುರಿತು ವಿವರಿಸಿದರು.

ಕಿಮ್ಸ್‌ನ ಪ್ರಭಾರಿ ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ಡಾ| ಕೆ.ಎಫ್‌. ಕಮ್ಮಾರ, ಪಿಡಬ್ಲ್ಯೂಡಿ ಎಡಬ್ಲ್ಯೂ ಇ ತುಂಬರಮಠ, ಕಿಮ್ಸ್‌ ವಿವಿಧ ವಿಭಾಗದ ಮುಖ್ಯಸ್ಥರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next