ಬೆಳಗಾವಿ: ರಾಜ್ಯದಲ್ಲಿ ಸಾಕಷ್ಟು ಚರ್ಚೆ ಹಾಗೂ ವಿವಾದಕ್ಕೆ ಗ್ರಾಸವಾಗಿರುವ ಕೆಎಂಎಫ್ ಮತ್ತು ಅಮುಲ್ ಮಧ್ಯೆ ವಿಲೀನದ ಮಾತೇ ಇಲ್ಲ. ಚುನಾವಣೆ ಸಮಯದಲ್ಲಿ ಅನಗತ್ಯವಾಗಿ ಇದರಲ್ಲಿ ರಾಜಕೀಯ ಮಾಡಬೇಡಿ. ರೈತರಲ್ಲಿ ಗೊಂದಲ ಮೂಡಿಸಬೇಡಿ ಎಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಮತ್ತು ಕೆಎಂಎಫ್ ಮುಂದೆ ಯಾವುದೇ ವಿಲೀನದ ಪ್ರಸ್ತಾಪವೇ ಇಲ್ಲ. ಅಂಥ ಪ್ರಸ್ತಾಪ ಬಂದಿದ್ದೇ ಆದರೆ ಮೊದಲು ನಾನೇ ತಿರಸ್ಕಾರ ಮಾಡುತ್ತೇನೆ. ಈ ವಿಲೀನ ಎಂಬ ವಿವಾದದ ಹಿಂದೆ ರಾಜಕೀಯ ಷಡ್ಯಂತ್ರ ಇದೆ. ಕೆಎಂಎಫ್ ವ್ಯಾಪ್ತಿಯಲ್ಲಿ ರಾಜ್ಯದಲ್ಲಿ ಸುಮಾರು 40ರಿಂದ 50 ಲಕ್ಷ ಮತದಾರರಿದ್ದಾರೆ. ಚುನಾವಣೆ ಸಮಯದಲ್ಲಿ ಅವರನ್ನು ಗುರಿಯಾಗಿಟ್ಟುಕೊಂಡು ಬಿಜೆಪಿಗೆ ಕೆಟ್ಟ ಹೆಸರು ತರಬೇಕು ಎಂಬ ಉದ್ದೇಶದಿಂದ ಕೆಲವರು ಈ ರೀತಿಯ ಕುತಂತ್ರ ನಡೆಸಿದ್ದಾರೆ. ಇದಕ್ಕೆ ರಾಜ್ಯದ ಜನರು ಕಿವಿಗೊಡಬಾರದು ಎಂದರು.
ಕೆಎಂಎಫ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ. ನಂದಿನಿ ಹಾಲಿಗೆ ಅತೀ ಹೆಚ್ಚಿನ ಬೇಡಿಕೆ ಇದೆ. ಏ.1ರಿಂದ ಇವತ್ತಿನವರೆಗೆ ಹಾಲು ಶೇಖರಣೆಯಲ್ಲಿ 2 ಲಕ್ಷ ಲೀಟರ್ ಏರಿಕೆಯಾಗಿದೆ. ಹಾಲಿನ ಉತ್ಪನ್ನಗಳ ಉತ್ಪಾದನೆ ಕೊರತೆ ಕಡಿಮೆಯಾಗುತ್ತಿದೆ. ಅಮುಲ್ ಸಹ ತನ್ನದೇ ಆದ ಮಾರುಕಟ್ಟೆ ವ್ಯವಸ್ಥೆ ಹೊಂದಿದೆ. ಆದರೆ ನಾವು ರೈತರಿಗೆ ಉತ್ತಮವಾದ ದರ ಕೊಡುತ್ತಿದ್ದೇವೆ. ಹೀಗಿರುವಾಗ ನಾವು ನಂದಿನಿಯನ್ನು ವಿಲೀನ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ನಮ್ಮ ಜತೆಗೆ ಸ್ಪರ್ಧೆ ಮಾಡಲು ಅಮುಲ್‌ಗೆ ಸಾಧ್ಯವಿಲ್ಲ. ಇದು ಪ್ರತಿಯೊಬ್ಬರ ಮನೆ ಮಾತಾಗಿದೆ. ಇಂತಹ ಹತ್ತು ಅಮುಲ್ ಬಂದರೂ ನಮಗೆ ಚಿಂತೆ ಇಲ್ಲ. ರಾಜ್ಯದಲ್ಲಿ ಅಮುಲ್ ಬಂದು ಎಷ್ಟೋ ವರ್ಷಗಳಾಗಿದ್ದರೂ ಇನ್ನೂ ತನ್ನ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಆಗುತ್ತಿಲ್ಲ. ಇದಕ್ಕೆ ನಮ್ಮ ರೈತರು, ಗ್ರಾಹಕರು ಕೆಎಂಎಫ್‌ನ ಮೇಲೆ ಇಟ್ಟಿರುವ ವಿಶ್ವಾಸ ಹಾಗೂ ನಂಬಿಕೆಗಳೇ ಕಾರಣ. ಹೀಗಿರುವಾಗ ಇದರಲ್ಲಿ ರಾಜಕೀಯ ಮಾಡದೆ ನಂದಿನಿ ಇನ್ನಷ್ಟು ಬೆಳೆಸಲು ಸಹಕಾರ ನೀಡಬೇಕು. ಯಾವುದೇ ಕಾರಣಕ್ಕೂ ಕೆಎಂಎಫ್ ಖಾಸಗೀಕರಣಕ್ಕೆ ಅವಕಾಶ ಕೊಡುವುದಿಲ್ಲ ಎಂದರು.
ನಾವು ಅಧಿಕಾರಕ್ಕೆ ಬಂದ ನಂತರ ಅನುಕಂಪದ ಆಧಾರದ ಮೇಲೆ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗಿದೆ. ಈ ಹಿಂದೆ ಯಾರೂ ಮಾಡದ ನೌಕರರ ನಿವೃತ್ತಿ ವೇತನವನ್ನು ಜಾರಿಗೆ ತರಲಾಗಿದೆ. ಪ್ರತಿ ವರ್ಷ ಇಂಧನ ಇಲಾಖೆಗೆ ವಿದ್ಯುತ್ ಬಿಲ್‌ಗಾಗಿಯೇ 120 ಕೋಟಿ ರೂ. ಸಂದಾಯ ಮಾಡಲಾಗುತ್ತಿದೆ. ಸೋಲಾರ ಪ್ಲಾಂಟ್ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. ಇದು ಜಾರಿಯಾದರೆ ವಾರ್ಷಿಕವಾಗಿ 40 ಕೋಟಿ ರೂ.ಗಳ ಉಳಿತಾಯವಾಗಲಿದೆ ಎಂದರು.
ಕೆಎಂಎಫ್ ಸಲಹೆಗಾರರಾದ ಡಿ.ಎನ್.ಹೆಗಡೆ ಮಾತನಾಡಿ, ಹಾಲಿನ ಮಾರುಕಟ್ಟೆ ಶೇ.16ರಷ್ಟು ಹೆಚ್ಚಾಗಿದೆ. ಜಾನುವಾರುಗಳಿಗೆ ಅಂಟಿದ ಚರ್ಮರೋಗದ ಕಾರಣ ಹಾಲಿನ ಶೇಖರಣೆ ಕಡಿಮೆಯಾಗಿತ್ತು. ಆದರೆ ಕಳೆದ ಏ.1ರಿಂದ ಹಾಲಿನ ಸಂಗ್ರಹ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ ಎಂದರು.
ವಾರ್ಷಿಕ 22 ಸಾವಿರ ಕೋಟಿ ವಹಿವಾಟು
ಈ ಹಿಂದೆ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಕೆಎಂಎಫ್ ಬಲವರ್ಧನೆಗಾಗಿ ಅಮುಲ್ ಮಾದರಿಯಂತೆ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸಲು ಸಲಹೆ ನೀಡಿದ್ದಾರೆ. ಆದರೆ ಇದನ್ನೇ ಕೆಲವರು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನೀಯ. ಕೆಎಂಎಫ್ ವಾರ್ಷಿಕವಾಗಿ 22,000 ಕೋಟಿ ರೂ.ಗಳ ವಹಿವಾಟು ನಡೆಸಿದ್ದು ಇದರಿಂದ ಕೆಎಂಎಫ್ ಮತ್ತು 15 ಜಿಲ್ಲಾ ಹಾಲು ಒಕ್ಕೂಟಗಳು ಸೇರಿ ವಾರ್ಷಿಕವಾಗಿ ಅಂದಾಜು 200 ಕೋಟಿ ರೂ.ಗಳ ಲಾಭ ನಿರೀಕ್ಷೆ ಮಾಡಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ರೈತರಿಗೆ ನೆರವಾಗಬೇಕು. ಅದನ್ನು ಬಿಟ್ಟು ನಂದಿನಿ-ಅಮುಲ್ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಬಾರದು ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.