Advertisement

ಕಿದು ಸಿಪಿಸಿಆರ್‌ಐ ಸ್ಥಳಾಂತರ ಬೇಡ: ಕೇಂದ್ರ ಸಚಿವ ಜಾಬ್ಡೇಕರ್‌ ಸೂಚನೆ

02:04 AM Jul 19, 2019 | mahesh |

ಮಂಗಳೂರು: ಬಿಳಿನೆಲೆ ಗ್ರಾಮದ ಕಿದು ಸಿಪಿಸಿಆರ್‌ಐಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸದೆ ಅಲ್ಲೇ ಮುಂದುವರಿಸಬೇಕು ಮತ್ತು ಈ ಬಗ್ಗೆ ಉಂಟಾಗಿರುವ ಗೊಂದಲವನ್ನು ಪರಿಹರಿಸಬೇಕು ಎಂದು ಆಗ್ರಹಿಸಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಹಾಗೂ ಮಂಗಳೂರು ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಅವರನ್ನು ಗುರುವಾರ ಭೇಟಿಯಾಗಿ ಮನವಿ ಸಲ್ಲಿಸಿದರು.

Advertisement

ತೆಂಗು, ಕೋಕೋ ಮತ್ತು ಗೇರು ತಳಿಗಳಿಂದ ಉತ್ತಮವಾದ ಬೆಳೆಗಳನ್ನು ಬೆಳೆಯುವ ಉದ್ದೇಶದಿಂದ ಈ ಕೇಂದ್ರವನ್ನು 1972ರಲ್ಲಿ ಕಿದುವಿನಲ್ಲಿ ಸೆಂಟ್ರಲ್ ಪ್ಲಾಂಟೇಶನ್‌ ಕ್ರಾಪ್ಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್ (ಸಿಪಿಸಿಆರ್‌ಐ) ಅಡಿಯಲ್ಲಿ ಸ್ಥಾಪಿಸಲಾಗಿದೆ.

ಅನಂತರ ಬೀಜ ಫಾರ್ಮ್ ಆಗಿ ಮಾಡಲಾಯಿತು ಮತ್ತು 2001ರಲ್ಲಿ ಸಂಶೋಧನಾ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲಾಯಿತು. 1972ರಲ್ಲಿ ಸುಬ್ರಹ್ಮಣ್ಯದಲ್ಲಿ ಕಚೇರಿ ಕಾರ್ಯಾರಂಭಿಸಿದ್ದು, ಬಳಿಕ ರಾಜ್ಯ ಸರಕಾರದಿಂದ ಕಿದುವಿನಲ್ಲಿ 60 ಹೆಕ್ಟೇರ್‌ ಅರಣ್ಯ ಭೂಮಿಯನ್ನು ಗೇಣಿಗೆ ಪಡೆದುಕೊಂಡು ಕಚೇರಿಯನ್ನು ಅಲ್ಲಿಗೆ ಸ್ಥಳಾಂತರಿಸಲಾಯಿತು. 1973ರಲ್ಲಿ ಔಪಚಾರಿಕವಾಗಿ ಉದ್ಘಾಟಿಸಿ ಅದೇ ವರ್ಷದಲ್ಲಿ ಹೆಚ್ಚುವರಿಯಾಗಿ 60 ಹೆಕ್ಟೇರ್‌ ಕೃಷಿ ಭೂಮಿಯನ್ನಾಗಿ ವಿಸ್ತರಿಸಲಾಗಿತ್ತು.

ತೆಂಗು ಜೀನ್‌ ಬ್ಯಾಂಕ್‌
ತೆಂಗು ಜೆನೆಟಿಕ್‌ ರಿಸೋರ್ಸ್‌ ನೆಟ್ವರ್ಕ್‌ ಅಡಿಯಲ್ಲಿ ದಕ್ಷಿಣ ಏಷ್ಯಾದ ಅಂತಾರಾಷ್ಟ್ರೀಯ ತೆಂಗು ಜೀನ್‌ ಬ್ಯಾಂಕ್‌ ಅನ್ನು ಈ ಕೇಂದ್ರದಲ್ಲಿ 1998ರಲ್ಲಿ ಸ್ಥಾಪಿಸಲಾಯಿತು. ಈ ಕೇಂದ್ರಕ್ಕೆ ಸಿಪಿಸಿಆರ್‌ಐ ಸಂಶೋಧನಾ ಕೇಂದ್ರ ಮತ್ತು ದಕ್ಷಿಣ ಏಷ್ಯಾದ ಅಂತಾರಾಷ್ಟ್ರೀಯ ತೆಂಗಿನ ಜೀನ್‌ ಬ್ಯಾಂಕ್‌ ಎಂದು ಮರುನಾಮಕರಣ ಮಾಡಲಾಗಿದೆ.

ಕಿದು ಸಂಶೋಧನಾ ಕೇಂದ್ರದ ವ್ಯಾಪ್ತಿಯಲ್ಲಿ 95 ಹೆಕ್ಟೇರ್‌ ತೆಂಗು, 7.5 ಹೆಕ್ಟೇರ್‌ನಲ್ಲಿ ಅಡಿಕೆ ಮತ್ತು 2.5 ಹೆಕ್ಟೇರ್‌ನಲ್ಲಿ ಕೋಕೊ ಬೆಳೆ ಬೆಳೆಯಲಾಗಿದೆ. ರಾಜ್ಯ ಸರಕಾರವು ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಿದ ಹಿನ್ನೆಲೆಯಲ್ಲಿ 19.26 ಕೋಟಿ ರೂ.ಗಳನ್ನು ಪಾವತಿಸುವಂತೆ ಸಿಪಿಸಿಆರ್‌ಐಗೆ ನಿರ್ದೇಶನ ನೀಡಿದೆ ಎಂದು ಸಚಿವ ಸದಾನಂದ ಗೌಡ ಹಾಗೂ ಸಂಸದ ನಳಿನ್‌ ಕುಮಾರ್‌ ವಿವರಣೆ ನೀಡಿದರು.

Advertisement

ಸಚಿವರ ಆದೇಶ
ಇದಕ್ಕೆ ಸ್ಪಂದಿಸಿದ ಸಚಿವರು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಕಾರ್ಯದರ್ಶಿ ಸಿ.ಎಲ್. ಮಿಶ್ರಾ ಅವರನ್ನು ಕಚೇರಿಗೆ ಕರೆಸಿಕೊಂಡು ಕರ್ನಾಟಕ ಅರಣ್ಯ ಇಲಾಖೆಗೆ ಪಾವತಿಸಲು ಬಾಕಿಯಿರುವ ಹಣವನ್ನು ಮನ್ನಾ ಮಾಡುವ ಮತ್ತು ಕಿದು ಸಿಪಿಸಿಆರ್‌ಐಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸದೆ ಅಲ್ಲೇ ಮುಂದುವರಿಸುವಂತೆ ತತ್‌ಕ್ಷಣ ಆದೇಶ ಹೊರಡಿಸುವಂತೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next