Advertisement

ಇನ್ನು ಪಂಚಾಯತ್‌ಗಳಿಗಿಲ್ಲ ವಸತಿ ಯೋಜನೆ!

09:45 AM Dec 24, 2019 | mahesh |

ನೋಡಲ್‌ ಅಧಿಕಾರಿ ಮರುನೇಮಕ
ವಿಜಿಲ್‌ ಆ್ಯಪ್‌ ಮೂಲಕ ಅರ್ಹತೆಯ ಖಚಿತತೆ
ಎಲ್ಲ ವಸತಿ ಯೋಜನೆಗಳಿಗೂ ಒಂದೇ ಹೆಸರು

Advertisement

ಕುಂದಾಪುರ: ಗ್ರಾಮಸಭೆಗಳ ಮೂಲಕ ಫ‌ಲಾನುಭವಿಗಳನ್ನು ಆಯ್ಕೆ ಮಾಡಿ, ತಾ.ಪಂ., ಜಿ.ಪಂ.ನಲ್ಲಿ ಅನುಮೋದಿಸಿ, ರಾಜೀವ ಗಾಂಧಿ ವಸತಿ ನಿಗಮದಲ್ಲಿ ಮಂಜೂರು ಮಾಡುತ್ತಿದ್ದ ವಸತಿ ಯೋಜನೆಗಳ ಫ‌ಲಾನುಭವಿ ಆಯ್ಕೆ ಅಧಿಕಾರವನ್ನು ಪಂಚಾಯತ್‌ನಿಂದ ಹಿಂಪಡೆದು ಕಂದಾಯ ಇಲಾಖೆಗೆ ನೀಡಲಾಗುತ್ತಿದೆ. ಅದು ಸಿದ್ಧಪಡಿಸಿದ ಪಟ್ಟಿಯನ್ನು ಶಾಸಕರು ಮತ್ತು ಜಿ.ಪಂ. ಸಿಇಒ ಆಖೈರುಗೊಳಿಸಲಿದ್ದಾರೆ. ಮನೆ ಹಂಚುವಿಕೆಗೆ ಇನ್ನು ಗ್ರಾ.ಪಂ.ಗೆ ಪರಮಾಧಿಕಾರ ಇಲ್ಲ.

ಮರುನೇಮಕ
ನಮ್ಮ ಅಲ್ಪ ಮೊತ್ತವನ್ನೂ ದುರ್ವಿನಿ ಯೋಗ ಮಾಡುವವರಿದ್ದಾರೆ. ಅರ್ಹ ಬಡವರಿಗೆ ವಸತಿ ಒದಗಿಸಲು ಫ‌ಲಾನುಭವಿ ಪಟ್ಟಿಗೆ ತಹಶೀಲ್ದಾರ್‌, ಜಿ.ಪಂ. ಸಿಇಒ, ಶಾಸಕರ ಪರಿಶೀಲನೆ ಕಡ್ಡಾಯಗೊಳಿಸಲಾಗಿದೆ. ಹಿಂದೆ ನಾನು ಸಚಿವನಾಗಿದ್ದಾಗ ನೋಡಲ್‌ ಅಧಿಕಾರಿಗಳನ್ನು ನೇಮಿಸಿ, ಜಿಪಿಎಸ್‌ ಮೂಲಕ ಮನೆಗಳ ಮಾಹಿತಿ ಅಪ್‌ಲೋಡ್‌ ಮಾಡುವ ವ್ಯವಸ್ಥೆ ಮಾಡಿದ್ದೆ. ಅನಂತರದ ಸರಕಾರ ಅದನ್ನು ರದ್ದುಗೊಳಿಸಿತ್ತು. ಈಗ ನೋಡಲ್‌ ಅಧಿಕಾರಿಗಳನ್ನು ಮರುನೇಮಿಸಿ ಪ್ರತಿ ಮನೆಗೆ 200 ರೂ.ಗಳಂತೆ ನೀಡಲಾಗು ವುದು ಎಂದು ಸರಕಾರದ ಈ ನಿರ್ಧಾರದ ಸಂಬಂಧ ವಸತಿ ಸಚಿವ ವಿ. ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ.

ಕಣ್ಗಾವಲು
ಎರಡು ವರ್ಷಗಳ ಹಿಂದೆ ರಾಜ್ಯ ಸರಕಾರ “ಕನಸಿನ ಮನೆ’ ಎಂಬ ಆ್ಯಪ್‌ ತಂದಿತ್ತು. ಅದಕ್ಕೂ ಮುನ್ನ ಆಧಾರ್‌ – ಜಿಪಿಎಸ್‌ ಲಿಂಕಿಂಗ್‌ ಮಾಡಿ ಲಕ್ಷಾಂತರ ನಕಲಿ ಫ‌ಲಾನುಭವಿಗಳನ್ನು ಪತ್ತೆ ಮಾಡಿತ್ತು. ಈಗ ಹೊಸದಾಗಿ ವಿಜಿಲ್‌ ಆ್ಯಪ್‌ ಮೂಲಕ ಕಣ್ಗಾವಲು ವ್ಯವಸ್ಥೆಗೆ ಸಜ್ಜಾಗಿದೆ.

ಹೊಸ ಆ್ಯಪ್‌
ವಿವಿಧ ವಸತಿ ಯೋಜನೆಗಳಡಿ ಮಂಜೂರಾಗಿ ಪ್ರಗತಿಯಲ್ಲಿರುವ ಮನೆಗಳಿಗೆ ವಿಜಿಲ್‌ ಆ್ಯಪ್‌ ಮತ್ತು ವಸತಿ ವಿಜಿಲ್‌ ವೆಬ್‌ ಪೋರ್ಟಲ್‌ ಬಳಸಿ ಅನುದಾನ ಬಿಡುಗಡೆಗಾಗಿ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ. ಇದರಲ್ಲಿ ಪಿಡಿಒ ಮತ್ತು ವಿಎ ಜತೆಯಾಗಿ ನೋಂದಾಯಿಸಿಕೊಳ್ಳಬೇಕು. ಪಿಡಿಒ ಮೊಬೈಲ್‌ಗೆ ಬರುವ ಲಿಂಕ್‌ ಅಳವಡಿಸಿಕೊಂಡಾಗ ಅವರ ಗ್ರಾ.ಪಂ.ನ ಫಲಾನುಭವಿಗಳ ವಿವರ ಬರುತ್ತದೆ. ಪಿಡಿಒ ಮತ್ತು ವಿಎ ಜತೆಯಾಗಿ ಫಲಾನುಭವಿಯ ಮನೆಗೆ ಹೋಗಿ, ಫಲಾನುಭವಿ ಜತೆ ನಿಂತು ಛಾಯಾಚಿತ್ರ ತೆಗೆದು ಅಪ್‌ಲೋಡ್‌ ಮಾಡಬೇಕು. ಅನಂತರ ಪಿಡಿಒ ಮೊಬೈಲ್‌ಗೆ ಬರುವ ದೃಢೀಕರಣ ಒಟಿಪಿ ಹಾಕಿದರೆ ಫಲಾನುಭವಿಗೆ ಅನುದಾನ ಲಭ್ಯವಾಗಲಿದೆ.

Advertisement

ಬಾಕಿ ಅನುದಾನ
ಅನುಮೋದನೆಗೊಂಡು ವಿವಿಧ ಹಂತಗಳಲ್ಲಿ ನಿರ್ಮಾಣವಾಗುತ್ತಿದ್ದ 54 ಸಾವಿರಕ್ಕೂ ಅಧಿಕ ಮನೆಗಳಿಗೆ ಅನುದಾನ ಬಂದಿರಲಿಲ್ಲ. ಈಗ ಆಯ್ದವುಗಳನ್ನು ಮರುಪರಿಶೀಲಿಸುವ ಅನಿವಾರ್ಯತೆ ಬಂದಿದೆ. ಉಡುಪಿ ಜಿಲ್ಲೆಯಲ್ಲಿ 1,448 ಮನೆಗಳಿಗೆ ಅನುದಾನ ಬಾಕಿಯಿದ್ದು, 319 ಮನೆಗಳನ್ನು ಮರುಪರಿಶೀಲಿಸಲು ಸೂಚನೆ ಬಂದಿದೆ. ಚಿತ್ರದುರ್ಗ, ಕಲಬುರ್ಗಿ, ಯಾದಗಿರಿ ಜಿಲ್ಲೆಗಳಲ್ಲಿ ಅವ್ಯವಹಾರ ನಡೆದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಆದೇಶಿಸಲಾಗಿದೆ. ರಾಜ್ಯದಲ್ಲಿ 6 ಲಕ್ಷ ಮನೆಗಳ ನಿರ್ಮಾಣ ತಡೆಹಿಡಿಯಲಾಗಿದ್ದು, ಜಿಐ ಟ್ಯಾಗಿಂಗ್‌ ಅನಂತರ ನಿರ್ಮಾಣಕ್ಕೆ ಹಸಿರುನಿಶಾನೆ ದೊರೆಯಲಿದೆ.

ಒಂದರೊಳಗೆ ಹಲವು
ಇನ್ನು ಮುಂದೆ ನಕಲಿ ಫ‌ಲಾನು ಭವಿಗಳ ತಡೆಗೆ ಸಹಾಯಕವಾಗಲು ಬಸವ, ಆಶ್ರಯ, ಅಂಬೇಡ್ಕರ್‌, ದೇವರಾಜ ಅರಸು, ಪ್ರಧಾನಮಂತ್ರಿ ಆವಾಸ್‌ ಯೋಜನೆಗಳನ್ನೆಲ್ಲ ವಿಲೀನ ಮಾಡಿ ಅಂಬೇಡ್ಕರ್‌ ವಸತಿ ಯೋಜನೆ ಎಂದೇ ನಾಮಕರಣ ಮಾಡುವ ಚಿಂತನೆಯಿದೆ.

ಹೀಗೊಂದು ಅಕ್ರಮ
ಮೊದಲು ಇದ್ದ ಆ್ಯಪ್‌ನಲ್ಲಿ ಒಮ್ಮೆ ದಾಖಲಾದ ಫ‌ಲಾನುಭವಿಯ ವಿವರ ಮತ್ತೂಮ್ಮೆ ದಾಖಲಿಸಲು ಸಾಧ್ಯವಿರಲಿಲ್ಲ. ಜಿಐ ಟ್ಯಾಗಿಂಗ್‌, ಛಾಯಾಚಿತ್ರ ಅಪ್‌ಲೋಡ್‌, ಆಧಾರ್‌ ಸಂಖ್ಯೆ ಮೂಲಕ ನಕಲಿಯಾದರೆ ತಿಳಿಯುತ್ತಿತ್ತು. ಆದರೆ ಖದೀಮರು ಬೇರೆ ಬೇರೆ ವಸತಿ ಯೋಜನೆಗಳ ಮೂಲಕ ಒಂದೇ ಮನೆಗೆ ಅನುದಾನ ಪಡೆಯುತ್ತಿದ್ದರು. ರಾಜ್ಯದಲ್ಲಿ ಇರುವುದು 1 ಕೋಟಿ ಮನೆ. ಆದರೆ 19 ವರ್ಷಗಳಲ್ಲಿ ಸರಕಾರ 42 ಲಕ್ಷ ಮನೆಗಳ ನಿರ್ಮಾಣಕ್ಕೆ ಅನುದಾನ ನೀಡಿದೆ!

ಸಮಿತಿ ರಚನೆ
ನಕಲಿ ಫ‌ಲಾನುಭವಿಗಳ ಪತ್ತೆಗೆ ಗ್ರಾ.ಪಂ. ಮಟ್ಟದಲ್ಲಿ ಜಿ.ಪಂ. ಸಿಇಒ ಅಧ್ಯಕ್ಷತೆಯಲ್ಲಿ ತಾ.ಪಂ. ಇಒ, ಪಿಡಿಒ, ವಿಎ, ನಗರಮಟ್ಟದಲ್ಲಿ ಡಿಸಿ ಅಧ್ಯಕ್ಷತೆಯಲ್ಲಿ ನಗರಸಭೆ ಆಯುಕ್ತ/ಪುರಸಭೆ ಮುಖ್ಯಾಧಿಕಾರಿ, ಕರ ವಸೂಲಿಗಾರ, ವಸತಿ ಯೋಜನೆ ವಿಷಯ ನಿರ್ವಾಹಕರಿರುವ ಸಮಿತಿ ರಚಿಸಲಾಗಿದೆ. ಭೌತಿಕ ಪರಿಶೀಲನೆ ಬಳಿಕ ಅನರ್ಹ ಪ್ರಕರಣಗಳಲ್ಲಿ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ, ಫ‌ಲಾನುಭವಿಯಿಂದ ಹಣ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ.

ಅನುದಾನ ಬಿಡುಗಡೆ
ವಸತಿ ಯೋಜನೆಯಡಿ ಅಪರಾಧವೆಸಗುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲು ಅವಕಾಶ ಕಲ್ಪಿಸುವಂತೆ ಹೊಸ ಕಾನೂನನ್ನು ಜಾರಿಗೆ ತರಲಾಗುವುದು. ಬಾಕಿಯಿದ್ದ 54 ಸಾವಿರ ಮನೆಗಳಿಗೆ 211 ಕೋ.ರೂ. ಬಿಡುಗಡೆ ಮಾಡಲಾಗಿದೆ. ಕಂದಾಯ ಇಲಾಖೆ ಮೂಲಕ ಫ‌ಲಾನುಭವಿ ಪಟ್ಟಿ ತಯಾರಿಸಿ ಶಾಸಕರು, ಜಿಪಂ ಸಿಇಒ ಪರಿಶೀಲಿಸುತ್ತಾರೆ. ಜಿಐ ಟ್ಯಾಗಿಂಗ್‌ ಮೂಲಕ ಖಚಿತ ಮಾಹಿತಿ ಪಡೆಯಲಾಗುವುದು.
-ವಿ. ಸೋಮಣ್ಣ , ವಸತಿ ಸಚಿವರು

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next