Advertisement

SSLC ಪರೀಕ್ಷೆಗೆ ಇನ್ನು ಕೃಪಾಂಕ ಇಲ್ಲ; ಫ‌ಲಿತಾಂಶ ಹಿನ್ನೆಲೆಯಲ್ಲಿ ಸಿಎಂ ಗರಂ

12:42 AM May 18, 2024 | Team Udayavani |

ಬೆಂಗಳೂರು: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆ-1ರಲ್ಲಿ ಶೇ. 20 ಕೃಪಾಂಕ ನೀಡಿ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಡಿ
ಮಿಡಿಗೊಂಡಿದ್ದು, ಮುಂದಿನ ವರ್ಷ ದಿಂದ ಕೃಪಾಂಕ ನೀಡುವ ಪದ್ಧತಿಯನ್ನು ಕೈಬಿಡುವಂತೆ ಸೂಚಿಸಿದ್ದಾರೆ.

Advertisement

ಯಾರನ್ನು ಕೇಳಿ ಕೃಪಾಂಕ ನೀಡಿದ್ದೀರಿ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌ ಅವರನ್ನು ಸಿಎಂ ತರಾಟೆಗೆ ತೆಗೆದುಕೊಂಡಿದ್ದು, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಉಪಸ್ಥಿತಿಯಲ್ಲಿ ಈ ಬೆಳವಣಿಗೆ ನಡೆದಿದೆ.

ವಿಧಾನಸೌಧದಲ್ಲಿ ಕರೆದಿದ್ದ ಸರ ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಅಧಿಕಾರಿಗಳ ಜತೆಗಿನ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ವಿದ್ಯಾರ್ಥಿಗಳಿಗೆ ಶೇ. 20 ಕೃಪಾಂಕ ಯಾಕೆ ನೀಡಿದ್ದೀರಿ? ಯಾವ ಕಾರಣ ಮತ್ತು ಉದ್ದೇಶದಿಂದ? ಕೃಪಾಂಕ ನೀಡಲು ನಿಮಗೆ ಯಾರು ಹೇಳಿದ್ದು?’ ಎಂದು ಅಧಿಕಾರಿಗಳನ್ನು ಸಿದ್ದರಾಮಯ್ಯ ಪ್ರಶ್ನಿಸಿದರು.

ಈ ಸಂದರ್ಭ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೋವಿಡ್‌ ಸಂದರ್ಭ ದಲ್ಲಿ ಶೇ. 5-10 ಕೃಪಾಂಕ ಕೊಡುತ್ತಿದ್ದೆವು. ಈ ಬಾರಿ ಅದನ್ನು ಹೆಚ್ಚಿಸಿದ್ದೇವೆ ಎಂದು ಸಮಜಾಯಿಷಿ ನೀಡಿದರು. ಇದನ್ನು ಒಪ್ಪದ ಮುಖ್ಯಮಂತ್ರಿಗಳು, ಕೋವಿಡ್‌ ಇದ್ದಾಗ ಕೃಪಾಂಕ ನೀಡಿದ್ದನ್ನು ಒಪ್ಪಿಕೊಳ್ಳಬಹುದು. ಆದರೆ ಈಗ ಶೇ.20 ಕೃಪಾಂಕ ನೀಡುವ ಅಗತ್ಯವೇನಿದೆ ಎಂದು ಮರುಪ್ರಶ್ನಿಸಿದರು.

ಮಧ್ಯಪ್ರವೇಶಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ವಿದ್ಯಾರ್ಥಿಗಳು ಅವರ ಅರ್ಹತೆಯ ಆಧಾರದಲ್ಲಿ ಪ್ರಗತಿ ಸಾಧಿಸಬೇಕು.

Advertisement

ಕೃಪಾಂಕ ನೀಡಿದರೆ ಸ್ಪರ್ಧಾ ಸಾಮರ್ಥ್ಯ ಕಡಿಮೆ ಆಗುತ್ತದೆ. ಕಡಿಮೆ ಅಂಕ ಪಡೆದರೆ ವಿದ್ಯಾರ್ಥಿಗಳು ಅನರ್ಹರೇ? ನಾನು 300 ಅಂಕ ಪಡೆದಿದ್ದೆ. ಹಾಗೆಂದು ನನ್ನನ್ನು ಅಸಮರ್ಥ ಎನ್ನುತ್ತೀರಾ ಎಂದು ಅಧಿಕಾರಿಗಳಿಗೆ ಚಾಟಿ ಬೀಸಿದರು.

ಈ ರೀತಿ ಆದರೆ ಬೋರ್ಡ್‌ ಪರೀಕ್ಷೆ ನಡೆಸುವ ಅಗತ್ಯವೇನಿದೆ? 10-15 ಅಂಕ ಪಡೆದು ಪರೀಕ್ಷೆ ಉತ್ತೀರ್ಣರಾಗಲು ಅಸಮರ್ಥರಾಗಿರುವವರಿಗೆ ನೆರವು ನೀಡಿ, ವರ್ಷವಿಡೀ ಕಠಿನ ಪರಿಶ್ರಮ ದಿಂದ ಓದುವ ಮಕ್ಕಳಗೆ ಅನ್ಯಾಯ ಎಸಗುವುದು ಸರಿಯೇ ಎಂದು ಅಧಿ ಕಾರಿ ಗಳನ್ನು ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಂಡರು ಎಂದು ತಿಳಿದುಬಂದಿದೆ. ಬಳಿಕ ಮತ್ತೆ ಮಾತನಾಡಿದ ಮುಖ್ಯ ಮಂತ್ರಿಗಳು, ಕೃಪಾಂಕ ಕೊಡುವುದು ಅವೈಜ್ಞಾನಿಕ ಎಂಬ ಬಗ್ಗೆ ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪರೀಕ್ಷೆಯಲ್ಲಿ ನಕಲು ಮಾಡುವುದನ್ನು ತಡೆಯಲು ಈ ಬಾರಿ ಕಠಿನ ಕ್ರಮ ಕೈಗೊಂಡಿರುವುದು ಸರಿ. ಆದರೆ ಅವರಿಗೆ ಕೃಪಾಂಕ ನೀಡಿರುವುದು ಸೂಕ್ತವಲ್ಲ ಎಂದು ಮುಖ್ಯಮಂತ್ರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ವಿವಾದ ಯಾಕೆ?
-ಪರೀಕ್ಷೆ ಅಕ್ರಮ ತಡೆಯಲು ಸರಕಾರದಿಂದ ಕಠಿನ ಕ್ರಮ. ವಿದ್ಯಾರ್ಥಿಗಳ ಅನುತ್ತೀರ್ಣ ಹೆಚ್ಚಳ.
-  ಫ‌ಲಿತಾಂಶ ಭಾರೀ ಕುಸಿತದ ಹಿನ್ನೆಲೆಯಲ್ಲಿ ಉತ್ತೀರ್ಣರಾಗಲು ಬೇಕಾದ ಶೇ. 35 ಅಂಕವನ್ನು ಶೇ. 25ಕ್ಕೆ ಇಳಿಸಿದ್ದ ಸರಕಾರ.
-  ಕೃಪಾಂಕದ ಪ್ರಮಾಣವೂ ಶೇ. 10ರಿಂದ ಶೇ. 20ಕ್ಕೆ ಏರಿಕೆ. ಇದರಿಂದಾಗಿ ಶೇ. 54ರಷ್ಟಿದ್ದ ರಾಜ್ಯದ ಉತ್ತೀರ್ಣತೆಯ ಪ್ರಮಾಣ ಶೇ. 73.80ಕ್ಕೆ ಏರಿಕೆ.
-ವೈಜ್ಞಾನಿಕವಲ್ಲದ ಈ ಕ್ರಮದ ವಿರುದ್ಧ ವಿಪಕ್ಷಗಳು, ಖಾಸಗಿ ಶಾಲೆಗಳ ತೀವ್ರ ಆಕ್ರೋಶ. ಕೃಪಾಂಕಕ್ಕೆ ಭಾರೀ ವಿರೋಧ, ವಿವಾದ.

ಏನಿದು ಕೃಪಾಂಕ?
-ಕೋವಿಡ್‌ ಸಂದರ್ಭದಲ್ಲಿ ಶೇ. 10, ಕೋವಿಡ್‌ ಪೂರ್ವದಲ್ಲಿ ಶೇ. 5 ಕೃಪಾಂಕ ನೀಡಲಾಗುತ್ತಿತ್ತು. ಈ ವರ್ಷ ಶೇ. 20 ಕೃಪಾಂಕ ನೀಡಲಾಗಿದೆ.
-ಕೃಪಾಂಕ ಪಡೆಯಲು 6 ವಿಷಯ ಗಳ ಲಿಖಿತ ಪರೀಕ್ಷೆಯಲ್ಲಿ ಒಟ್ಟು ಶೇ.35 (175 ಅಂಕ) ಅಂಕ ಗಳಿಸಬೇಕು ಎಂಬ ನಿಯಮ ಹಿಂದೆ ಇತ್ತು. ಈ ಬಾರಿ ಅದು ಶೇ. 25ಕ್ಕೆ (125 ಅಂಕ) ಇಳಿದಿದೆ.
-ಮೂರು ವಿಷಯಗಳಲ್ಲಿ ಕಡ್ಡಾಯ ವಾಗಿ ಉತ್ತೀರ್ಣರಾಗಿದ್ದು, ಇನ್ನು ಮೂರು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರೂ ಒಟ್ಟು 125 ಅಂಕ ಪಡೆದಿರುವ ವಿದ್ಯಾರ್ಥಿ ಗಳಿಗೆ ಶೇ. 20 ಕೃಪಾಂಕ ಲಭ್ಯ.
-ಶೇ. 20 ಅಂಕವನ್ನು ಅಗತ್ಯ ವಿದ್ದರೆ ಒಂದೇ ವಿಷಯಕ್ಕೆ ಆಥವಾ 2, 3 ವಿಷಯಗಳಿಗೂ ಹಂಚಿಕೆ ಮಾಡಲಾಗಿದೆ.

ಶೇ. 20 ಕೃಪಾಂಕ ಯಾಕೆ ನೀಡಿದ್ದೀರಿ? ಕೃಪಾಂಕ ನೀಡಲು ನಿಮಗೆ ಯಾರು ಹೇಳಿದ್ದು? ಕೋವಿಡ್‌ ಮುಗಿದ ಮೇಲೂ ಶೇ. 20 ಕೃಪಾಂಕ ನೀಡುವ ಅಗತ್ಯವೇನಿದೆ? ಇದು ಅವೈಜ್ಞಾನಿಕ ಕ್ರಮ ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೃಪಾಂಕ ನೀಡಿರುವುದು ಸರಿಯಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ಎಸೆಸೆಲ್ಸಿಯಲ್ಲಿ ಈ ವರ್ಷ ಮಾತ್ರ ಕೃಪಾಂಕ ಕೊಡುವ ತೀರ್ಮಾನ ಮಾಡಲಾಗಿತ್ತು. ಈ ಬಾರಿ ನಾವು ಪರೀಕ್ಷಾ ನಡವಳಿಕೆ ಸರಿ ಮಾಡಲು ಮುಂದಾಗಿದ್ದೆವು. ಮಕ್ಕಳ ಪ್ರಗತಿ ಹೆಚ್ಚಿಸುವ ಉದ್ದೇಶದಿಂದ ಕೃಪಾಂಕ ನೀಡಿದ್ದೆವು. ಇದರಿಂದ ಮಕ್ಕಳಲ್ಲಿ ಪ್ರಗತಿ ಕಂಡು ಬಂದಿತ್ತು. ಆದರೆ ಈಗ ಬೇಡ ಅನ್ನುವ ನಿಲುವಿಗೆ ಬಂದಿದ್ದೇವೆ. ನನಗೆ ಶಿಕ್ಷಣ ಇಲಾಖೆ ಹೇಗೆ ನಡೆಸಬೇಕು ಎಂದು ಗೊತ್ತಿದೆ.
-ಮಧು ಬಂಗಾರಪ್ಪ, ಪ್ರಾ. ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next