Advertisement

10ರ ಬಳಿಕ ಕೈ-ದಳ ಸ್ಥಾನ ಹಂಚಿಕೆ ಚರ್ಚೆ

01:16 AM Feb 04, 2019 | Team Udayavani |

ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ಕುರಿತು ಫೆ.10ರ ಬಳಿಕ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ಸಭೆ ನಡೆಯಲಿದ್ದು, ಕ್ಷೇತ್ರಗಳ ಬಗ್ಗೆ ನಿರ್ಧಾರವಾಗಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಹೇಳಿದರು.

Advertisement

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸೀಟುಗಳ ಹಂಚಿಕೆ ಕುರಿತು ಈವರೆಗೆ ಉಭಯ ಪಕ್ಷಗಳ ನಡುವೆ ಚರ್ಚೆ ನಡೆದಿಲ್ಲ. ಎರಡೂ ಪಕ್ಷಗಳ ನಾಯಕರು ಸಭೆ ಸೇರಿ ಸಾœನ ಹಾಗೂ ಕ್ಷೇತ್ರಗಳ ಹಂಚಿಕೆ ಕುರಿತು ಒಮ್ಮತದ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂದರು.

ಎಚ್‌ಡಿಕೆ ಮೇಲೆ ಪೂರ್ಣ ವಿಶ್ವಾಸ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮೇಲೆ ಕಾಂಗ್ರೆಸ್‌ ನಾಯಕರಲ್ಲಿ ಅಸಮಾಧಾನವಿದೆ ಎಂಬ ವರದಿಗಳು ಆಧಾರರಹಿತ. ನಮಗೆ ಅವರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಮತ್ತು ಸಮ್ಮಿಶ್ರ ಸರಕಾರ ಯಾವುದೇ ಗೊಂದಲಗಳಿಲ್ಲದೆ ಮುಂದುವರಿಯುತ್ತದೆ. ಕಾಂಗ್ರೆಸ್‌ನಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದು, ಯಾವುದೇ ಬಣಗಳಿಲ್ಲ. ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿಯವರ ಆದೇಶವನ್ನು ಎಲ್ಲರೂ ಪಾಲನೆ ಮಾಡುತ್ತಾರೆ. ನಮ್ಮ ಶಾಸಕರ ಮೇಲೆ ನಮಗೆ ವಿಶ್ವಾಸವಿದೆ. ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದರು.

ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್‌ನ ಕೆಲ ಶಾಸಕರು ಹಾಗೂ ನಾಯಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಸಮ್ಮಿಶ್ರ ಸರಕಾರ ಮತ್ತು ನಾಯಕರ ವಿರುದ್ಧ ಯಾರೂ ಬಹಿರಂಗವಾಗಿ ಹೇಳಿಕೆ ನೀಡಬಾರದೆಂದು ಈಗಾಗಲೇ ಎಲ್ಲ ಶಾಸಕರಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಈಗಾಗಲೇ ಬಹಿರಂಗ ಹೇಳಿಕೆ ನೀಡಿರುವ ಶಾಸಕರಿಗೆ ನೋಟಿಸ್‌ ನೀಡಲಾಗಿದ್ದು, ಅದಕ್ಕೆ ಉತ್ತರಗಳನ್ನೂ ನೀಡಿದ್ದಾರೆ ಎಂದರು.

ಅಧಿಕಾರಕ್ಕೆ ಬಂದ ದಿನದಿಂದಲೂ ಸಮ್ಮಿಶ್ರ ಸರಕಾರ ಹೆಚ್ಚು ದಿನ ಬಾಳುವುದಿಲ್ಲ, ಇಂದು ಬೀಳುತ್ತದೆ, ನಾಳೆ ಬೀಳುತ್ತದೆ ಎಂಬ ವದಂತಿ ಗಳನ್ನು ಬಿಜೆಪಿಯವರು ಹರಡುತ್ತಲೇ ಬಂದಿದ್ದಾರೆ. ಬಿಜೆಪಿಯವರು ಅಧಿಕಾರವಿಲ್ಲದೆ ಹತಾಶರಾಗಿದ್ದಾರೆ ಎಂದರು. ರಾಜಕೀಯದಲ್ಲಿ ನೈತಿಕತೆಯ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಕರ್ನಾಟಕದಲ್ಲಿ ಬೇರೆ ಪಕ್ಷಗಳ ಶಾಸಕರಿಗೆ ಆಮಿಷ ತೋರಿಸುತ್ತಾ ಅಗ್ಗದ ರಾಜಕೀಯ ಮಾಡುತ್ತಿದ್ದಾರೆ. ಇದು ಅವರ ನಿಜ ಬಣ್ಣವನ್ನು ಬಯಲು ಮಾಡಿದೆ ಎಂದು ಟೀಕಿಸಿದರು.

Advertisement

ಮೈತ್ರಿ ಸರಕಾರಕ್ಕೆ ಮುಜುಗರ ತರುವ ಹೇಳಿಕೆ ಸಹಿಸಲ್ಲ: ದಿನೇಶ್‌

ಮಂಗಳೂರು: ಸಮ್ಮಿಶ್ರ ಸರಕಾರಕ್ಕೆ ಮುಜುಗರ ತರುವ ಹೇಳಿಕೆಗಳನ್ನು ಕಾಂಗ್ರೆಸ್‌ನ ಯಾವ ಶಾಸಕರು ಅಥವಾ ನಾಯಕರು ನೀಡಿದರೂ ಪಕ್ಷ ಅದನ್ನು ಸಹಿಸುವುದಿಲ್ಲ. ಈ ರೀತಿಯ ವರ್ತನೆಗಳನ್ನು ಗಂಭೀರವಾಗಿ ಪರಿಗಣಿಸಲಾಗು ವುದು ಮತ್ತು ಕಠಿಣ ಕ್ರಮ ಕೈಗೊಳ್ಳಲಾಗು ವುದೆಂದು ಎಚ್ಚರಿಕೆ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

ಪತ್ರಿಕಾಗೋಷ್ಠಿ ನಡೆಸಿದ ಅವರು, ಪಕ್ಷದ ಪ್ರತಿಯೋರ್ವರೂ ಪಕ್ಷದ ಶಿಸ್ತುಪಾಲನೆ ಮಾಡಬೇಕು. ಅನಗತ್ಯ ಹೇಳಿಕೆಗಳಿಂದ ಜನರಿಗೆ ಸರಕಾರದ ಬಗ್ಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ಶಾಸಕ ಸೋಮಶೇಖರ್‌ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದಾರೆಂಬ ವರದಿಗಳ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್‌ ನೀಡಿದ್ದು, ಇದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ ಎಂದರು.

ಸಮ್ಮಿಶ್ರ ಸರಕಾರದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಹೊಂದಾಣಿಕೆಯಿದೆ. ಪರಸ್ಪರ ನಂಬಿಕೆ, ವಿಶ್ವಾಸದಿಂದ ಸರಕಾರ ಮುಂದುವರಿಯುತ್ತಿದೆ. ನಿಗಮ, ಸಂಸದೀಯ ಕಾರ್ಯದರ್ಶಿಗಳ ನೇಮಕಗಳಲ್ಲಿ ಕಾಂಗ್ರೆಸ್‌ ಸೂಚಿಸಿದ ಹೆಸರನ್ನು ಮುಖ್ಯಮಂತ್ರಿ ಅನುಮೋದಿಸಿದ್ದಾರೆ ಎಂದರು.

ಲೋಕಸಭಾ ಸೀಟು ಹಂಚಿಕೆ ಕುರಿತು ಪ್ರತಿಷ್ಠೆಯ ಪ್ರಶ್ನೆ ಇಲ್ಲ, ಗೆಲುವು ಮುಖ್ಯ. ಮೈತ್ರಿಕೂಟ ಪಕ್ಷ ಗರಿಷ್ಠ ಸ್ಥಾನಗಳನ್ನು ಗೆಲ್ಲಲಿದೆ. ಗೆಲ್ಲುವುದು ಹಾಗೂ ಬಿಜೆಪಿ ಕನಿಷ್ಠ ಸ್ಥಾನ ಪಡೆಯುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಸ್ಥಳೀಯವಾಗಿ ತಲೆದೋರುವ ಗೊಂದಲಗಳನ್ನು ಎರಡೂ ಪಕ್ಷಗಳ ನಾಯಕರು ಬಗೆಹರಿಸುತ್ತಾರೆ. ಫೆ.6 ಅಥವಾ 7 ರಂದು ನಡೆಯುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷದ ಎಲ್ಲ 80 ಶಾಸಕರು ಭಾಗವಹಿಸುತ್ತಾರೆ. ಎಲ್ಲ ಶಾಸಕರು ನಮ್ಮೊಂದಿಗೆ ಇದ್ದಾರೆ ಎಂದವರು ಹೇಳಿದರು.

ಸಿಎಂ ರಾಜೀನಾಮೆ ಕೊಡಲ್ಲ: ಮನಗೂಳಿ

ವಿಜಯಪುರ: ಬಜೆಟ್ ಅಧಿವೇಶನ ವೇಳೆ ಮೈತ್ರಿ ಸರ್ಕಾರದ ಯಾವ ಶಾಸಕರೂ ರಾಜೀನಾಮೆ ನೀಡುವುದಿಲ್ಲ, ನಮ್ಮ ಸರ್ಕಾರ ಬೀಳುವುದಿಲ್ಲ. ಉತ್ತಮ ಆಡಳಿತ ನೀಡುತ್ತಿರುವ ಕುಮಾರಸ್ವಾಮಿ ರಾಜೀನಾಮೆ ಕೊಡುವ ಪ್ರಶ್ನೆಯೂ ಇಲ್ಲ ಎಂದು ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಹೇಳಿದರು. ಭಾನುವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಕೆಲವು ಶಾಸಕರು ರಾಜೀನಾಮೆ ನೀಡುತ್ತಾರೆಂದು ಸುಳ್ಳು ವದಂತಿ ಹರಡಿಸುವ ಮೂಲಕ ಬಿಜೆಪಿ ನಾಯಕರು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಲು ಮುಂದಾಗಿದ್ದಾರೆ. ಕುಮಾರ ಸ್ವಾಮಿ ರಾಜೀನಾಮೆಯ ಮಾತನಾಡಿ ರುವುದು ಸಿಟ್ಟಿನ ಭರದಲ್ಲಿಯೇ ಹೊರತು ಇದಕ್ಕೆ ಹೆಚ್ಚಿನ ಮಹತ್ವ ನೀಡಬೇಕಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next