ಹೊಸದಿಲ್ಲಿ: ಡಿಜಿಟಲ್ ಪಾವತಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವ ಕೇಂದ್ರ ಸರಕಾರ, 2000 ರೂ.ವರೆಗಿನ ಡೆಬಿಟ್ ಕಾರ್ಡ್ ವಹಿವಾಟುಗಳ ಮೇಲೆ ವ್ಯಾಪಾರಿಗಳಿಗೆ ವಿಧಿಸಲಾಗುವ ಶುಲ್ಕವನ್ನು ರದ್ದುಗೊಳಿಸಿದೆ.
ಡೆಬಿಟ್ ಕಾರ್ಡ್ ಜತೆಗೆ ಆಧಾರ್ ಪಾವತಿ ವ್ಯವಸ್ಥೆ ಮತ್ತು ಭೀಮ್ ಯುಪಿಐ ಮೂಲಕ ಮಾಡಲಾಗುವ ವಹಿವಾಟುಗಳಿಗೂ ಶುಲ್ಕವನ್ನು ರದ್ದುಗೊಳಿಸಲಾಗಿದೆ. ಇದು 2018ರ ಜನವರಿ 1 ರಂದು ಅನ್ವಯವಾಗಲಿದ್ದು ,2 ವರ್ಷಗಳವರೆಗೆ ಈ ಶುಲ್ಕವನ್ನು ಕೇಂದ್ರ ಸರಕಾರ ಭರಿಸಲಿದೆ. ಈ ನಿರ್ಧಾರದಿಂದ ಸರಕಾರಕ್ಕೆ 2,512 ಕೋಟಿ ರೂ. ಹೊರೆಯಾಗಲಿದೆ.
ಈ ನಿರ್ಧಾರದಿಂದಾಗಿ ಬ್ಯಾಂಕ್‌ಗಳಿಗೆ ಸರಕಾರ ಪಾವತಿಸಬೇಕಿರುವ ಶುಲ್ಕದ ಪ್ರಮಾಣ ಮತ್ತು ವಿಧಾನವನ್ನು ನಿಗದಿಸಲು ಸಮಿತಿ ರಚಿಸಲಾಗಿದೆ. ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ, ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ, ರಾಷ್ಟ್ರೀಯ ಪಾವತಿ ಕಾರ್ಪೊರೇಶನ್‌ನ ಸಿಇಒ ಈ ಸಮಿತಿಯಲ್ಲಿರಲಿದ್ದಾರೆ.
ಎಂಸಿಐ ಅಲ್ಲ ಎನ್‌ಎಂಸಿ: ಮತ್ತೂಂದು ಪ್ರಮುಖ ನಿರ್ಧಾರದಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಆಮೂಲಾಗ್ರ ಬದಲು ಮಾಡಲು ಮುಂದಾಗಿ ರುವ ಸರಕಾರ ಸದ್ಯ ಇರುವ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಸ್ಥಾನದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ರಚನೆಯಾಗಲಿದೆ. ಈ ಮೂಲಕ ವೈದ್ಯಕೀಯ ಶಿಕ್ಷಣದ ಮೇಲೆ ಸಂಪೂರ್ಣವಾಗಿ ಕೇಂದ್ರ ಸರಕಾರದ ಮಾತೇ ನಡೆಯುವಂ ತಾಗಬೇಕು ಎನ್ನುವುದು ಸರಕಾರದ ನಿಲುವು.
ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಸದ್ಯ ಎಂಸಿಐ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ಪ್ರತ್ಯೇಕವಾಗಿಯೇ ನಿರ್ವಹಿಸಲಾಗುತ್ತದೆ. ವೈದ್ಯಕೀಯ ವೃತ್ತಿಗೆ ಸಂಬಂಧಿಸಿದ ನೀತಿ ನಿಯಮಗಳನ್ನು ಕೂಡ ಪುನರ್‌ರೂಪಿಸಲಾಗುತ್ತದೆ.
ಈ ಆಯೋಗದಲ್ಲಿ ಗಣ್ಯ ವೈದ್ಯರು ಮತ್ತು ಪರಿಣಿತರು ಸದಸ್ಯರಾಗಿರಲಿದ್ದಾರೆ. ಇವರು ಜಾಗತಿಕ ಗುಣಮಟ್ಟಕ್ಕೆ ಅನುಗುಣವಾಗಿ ಶಿಕ್ಷಣದ ಗುಣಮಟ್ಟವನ್ನು ಏರಿಸಲು ಶ್ರಮಿಸಲಿದ್ದಾರೆ.
ಚರ್ಮ ಮತ್ತು ಪಾದರಕ್ಷೆ ವಲಯಕ್ಕೆ 2600 ಕೋಟಿ ರೂ. ಪ್ಯಾಕೇಜ್: ಚರ್ಮ ಮತ್ತು ಪಾದರಕ್ಷೆ ಉದ್ಯಮಕ್ಕೆ 2600 ಕೋಟಿ ರೂ. ಪ್ಯಾಕೇಜ್‌ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇದರಿಂದ ಮೂರು ವರ್ಷಗಳಲ್ಲಿ 3.24 ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊಂದಲಾಗಿದೆ.