Advertisement

ಭಾನುವಾರದ ಲಾಕ್‌ಡೌನ್‌ನಲ್ಲಿ ಏನು ಇರುತ್ತೆ ಏನು ಇರಲ್ಲ !

10:00 PM Jul 04, 2020 | Sriram |

ಬೆಂಗಳೂರು: ಕೋವಿಡ್‌-19 ನಿಯಂತ್ರಣ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನದಂತೆ ಪ್ರತಿ ಭಾನುವಾರದ ಲಾಕ್‌ಡೌನ್‌ ಅಂಗವಾಗಿ ಶನಿವಾರ ರಾತ್ರಿ ಎಂಟು ಗಂಟೆಯಿಂದಲೇ ರಾಜ್ಯಾದ್ಯಂತ ಪೂರ್ಣ ಪ್ರಮಾಣದ ಲಾಕ್‌ಡೌನ್‌ ಜಾರಿಯಲ್ಲಿದ್ದು ಸೋಮವಾರ ಬೆಳಗ್ಗೆ 5 ಗಂಟೆವರೆಗೂ ಮುಂದುವರಿಯಲಿದೆ.

Advertisement

ಭಾನುವಾರ ಇಡೀ ದಿನ ಅಗತ್ಯ ಸೇವೆಗಳ ಪೂರೈಕೆ ಹೊರತುಪಡಿಸಿ ಸಾರ್ವಜನಿಕ ಹಾಗೂ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಅನಗತ್ಯವಾಗಿ ಓಡಾಟ ಮಾಡುವ ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆಗೆ ಸೂಚನೆ ನೀಡಲಾಗಿದೆ.

ಬಸ್‌, ಆಟೋ, ಟ್ಯಾಕ್ಸಿ ಸೇವೆಯೂ ಇರುವುದಿಲ್ಲ. ಹೋಟೆಲ್‌ ಹಾಗೂ ಮಾಲ್‌ಗ‌ಳು ಬಂದ್‌ ಆಗಲಿದ್ದು ಎಲ್ಲ ವ್ಯಾಪಾರ ವಹಿವಾಟು ಸ್ಥಗಿತಗೊಳ್ಳಲಿದೆ.

ವಾರದಲ್ಲಿ ಒಂದು ದಿನದ ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಎಲ್ಲ ಜಿಲ್ಲಾಧಿಕಾರಿಗಳು, ನಗರ ಪೊಲೀಸ್‌ ಆಯುಕ್ತರು/ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ಕಾರ್ಯಪಡೆಯು ಲಾಕ್‌ಡೌನ್‌ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು. ಕೈಗಾರಿಕೆ, ಉದ್ಯಮ ಸೇರಿ ಯಾವುದೇ ರೀತಿಯ ಚಟುವಟಿಕೆಗಳಿಗೆ ಅವಕಾಶ ಕೊಡಬಾರದು ಎಂದು ತಿಳಿಸಲಾಗಿದೆ.

Advertisement

ಪೂರ್ವನಿಗದಿತ ವಿವಾಹಗಳಿಗೆ ಅವಕಾಶವಿದ್ದು 50 ಜನರು ಪಾಲ್ಗೊಳ್ಳಲು ಮಾತ್ರ ಅನುಮತಿ ನೀಡಲಾಗುವುದು. ಅಂತ್ಯಕ್ರಿಯೆಗೆ 20 ಜನರು ಪಾಲ್ಗೊಳ್ಳಲು ಮಾತ್ರ ಅವಕಾಶ ಎಂದು ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ.

ಭಾನುವಾರದ ಸಂಪೂರ್ಣ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶನಿವಾರ ಹಿರಿಯ ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿ ಸೇರಿ ಪ್ರಮುಖ ಇಲಾಖೆಗಳ ಅಧಿಕಾರಿಗಳ ಜತೆ ಸಭೆ ನಡೆಸಿದರು.

ಲಾಕ್‌ಡೌನ್‌ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಬೇಕು. ಜತೆಗೆ, ಈ ಸಂದರ್ಭದಲ್ಲಿ ಕೋವಿಡ್‌-19 ಸೋಂಕಿತರು, ಹೋಂ ಕ್ವಾರಂಟೈನ್‌ನಲ್ಲಿರುವವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಆಸ್ಪತ್ರೆಗಳಲ್ಲಿ ದಾಖಲಾಗಲು ಅವಕಾಶ ಸಿಗದೆ ಸೋಂಕಿತರು ಮೃತಪಡುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಲಾಕ್‌ಡೌನ್‌ ಇದ್ದರೂ ಕೋವಿಡ್‌-19 ಸೇವೆಗೆ ಯಾವುದೇ ತೊಂದರೆಯಾಗಬಾರದು. ಜಿಲ್ಲಾಧಿಕಾರಿಗಳು, ಪಾಲಿಕೆಗಳ ಆಯುಕ್ತರು ಈ ಕುರತು ಗಮನಹರಿಸಬೇಕು ಎಂದು ನಿರ್ದೇಶಿದರು.

Advertisement

Udayavani is now on Telegram. Click here to join our channel and stay updated with the latest news.

Next