Advertisement

ಹಲವೆಡೆ ಪರವಾಗಿಲ್ಲ ; ಕೆಲವೆಡೆ ನೀರಿಲ್ಲ!

11:14 AM Mar 16, 2018 | Team Udayavani |

ಮೂಡಬಿದಿರೆ: ತೆಂಕ ಮಿಜಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ 2,100 ಮನೆಗಳಿದ್ದು 8,450 ಜನರು ವಾಸವಾಗಿದ್ದಾರೆ. ಕೃಷಿ ಪ್ರಧಾನ ಪ್ರದೇಶವಾಗಿರುವುದರಿಂದ ಸಹಜ ನೀರಿನ ಆಶಯಗಳು ಸಾಕಷ್ಟಿವೆ. ಕೊಳವೆ ಬಾವಿಗಳ ಮೂಲಕ ನೀರನ್ನು ಪೂರೈಸುವ ಜಾಲವೂ ಚೆನ್ನಾಗಿದೆ. ಆದರೆ
ಬೇಸಗೆ ಬಂದಂತೆಲ್ಲ ಎರಡು ದಿನಗಳಿಗೊಮ್ಮೆ, ಒಂದು ಗಂಟೆಯ ಕಾಲ ನೀರು ಪೂರೈಸುವ ಸ್ಥಿತಿ ಇದೆ. ಮನೆಗಳಿಗೆ 600 ಲೀ. ನಷ್ಟು ನೀರು ಪೂರೈಕೆ ಮಾಡಲು ಸಾಧ್ಯವಾಗಿರುವುದರಿಂದ ಶೇ. 50ರಷ್ಟು ನೀರು ಲಭ್ಯವಿದೆ ಎಂದೇ ಹೇಳಬಹುದು.

Advertisement

ಕರಿಕುಮೇರು ಪ್ರದೇಶದಲ್ಲಿ ಸ್ವಲ್ಪ ನೀರಿನ ಸಮಸ್ಯೆ ಇತ್ತು. ಈಗ ಬೋರ್‌ವೆಲ್‌ಗ‌ಳ ಮೂಲಕ ನೀರು ಹರಿಸಲಾಗುತ್ತಿದೆ. ಟ್ಯಾಂಕರ್‌ ಮೂಲಕ ನೀರು ಪೂರೈಸುವ ಸಂದರ್ಭ ಇದುವರೆಗೆ ಬಂದಿಲ್ಲ.

ಜಲನಿಧಿ ಸಂರಕ್ಷಣೆ
ಸ್ಥಳೀಯರು ತಮ್ಮ ಹೊಲಗದ್ದೆ ತೋಟಗಳಿಗಾಗಿ ತಾವೇ ನೀರಿನ ತೋಡುಗಳಿಗೆ ಕಟ್ಟ ಹಾಕಿ ನೀರು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆಯನ್ನು ಹೆಚ್ಚಿನ ಕಡೆ ಮಾಡುತ್ತಿದ್ದಾರೆ. ಇದಲ್ಲದೆ, ಆಳ್ವಾಸ್‌ ಕಾಲೇಜಿನ ಎನ್ನೆಸ್ಸೆಸ್‌ ಘಟಕದವರು ಕೆಲವು ವರ್ಷಗಳಿಂದ ನೀರಿನ ತೋಡುಗಳಲ್ಲಿ ಖಾಲಿ ಸಿಮೆಂಟ್‌ ಚೀಲಗಳಲ್ಲಿ ಮರಳು ತುಂಬಿಸಿ, ಪೇರಿಸಿಕೊಂಡು 20 ಕಡೆಗಳಲ್ಲಿ ಕಟ್ಟಗಳನ್ನು ನಿರ್ಮಿಸಿ ಜಲನಿಧಿ ಸಂರಕ್ಷಣೆಯಲ್ಲಿ ಸಂತೋಷ ಕಂಡುಕೊಂಡಿದ್ದಾರೆ.

ಇವರೊಂದಿಗೆ ಊರವರೂ ಕೈಜೋಡಿಸಿದ್ದಾರೆ. ಜಲ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ. ಹೀಗೆ ಕಟ್ಟ ಹಾಕಿದ ಪರಿಣಾಮವಾಗಿ ತೆರೆದ ಕೆರೆ, ಬಾವಿಗಳಲ್ಲೂ ನೀರಿನ ಒರತೆ ಹೆಚ್ಚಾಗುವಂತಾಗಿದೆ. ಕಳೆದ ವರ್ಷ ಶಾಸಕರು 5 ಕೊಳವೆ ಬಾವಿಗಳನ್ನು ಒದಗಿಸಿಕೊಟ್ಟಿದ್ದಾರೆ. ಹೀಗೆ ಕೊರೆಸಿದ ಕೊಳವೆ ಬಾವಿಗಳಲ್ಲಿ ಒಳ್ಳೆಯ ನೀರು ಲಭಿಸಿದೆ.

ಅಶ್ವತ್ಥಪುರ ಟ್ಯಾಂಕ್‌ನಿಂದ ಅಶ್ವತ್ಥಪುರ, ಸಂತೆಕಟ್ಟೆ, ವಂಟಿಮಾರು, ನೀರ್ಕೆರೆ ವಂಟಿಮಾರು, ಪರಶುರಾಮ ನಗರ, ಕಂದೇಲಬೆಟ್ಟು ನಂದಿನಿ ನಗರ 5 ಸೆಂಟ್ಸ್‌ ಕಾಲನಿ, ದಾಸರಬೆಟ್ಟು ಹೀಗೆ ಹಲವು ಕಡೆಗಳಿಗೆ ನೀರು ಪೂರೈಕೆಯಾಗುತ್ತಿದೆ. ನೀರ್ಕೆರೆಯಲ್ಲಿ ತೋಡಿರುವ ಬಾವಿಯಲ್ಲೂ ಸಾಕಷ್ಟು ನೀರು ಲಭ್ಯವಿದೆ.

Advertisement

ಬಹುಗ್ರಾಮ ಕುಡಿಯುವ ನೀರು ಯೋಜನೆ
2010-11ರಲ್ಲಿ ತೆಂಕಮಿಜಾರು ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಸರಕಾರ ಮಂಜೂರಾತಿ ನೀಡಿತ್ತು. ಪ್ರಥಮ ಹಂತದ ಸಮೀಕ್ಷಾ ಕಾರ್ಯವೂ ನಡೆದಿದೆ. ಸುಮಾರು ರೂ. 4 ಕೋಟಿ ವೆಚ್ಚದ ಈ ಯೋಜನೆ ಜಾರಿಗೊಂಡರೆ ಸಮಸ್ಯೆ ಬಗೆಹರಿಯಲು ಸಾಧ್ಯವಿದೆ. 

ಜಲಮೂಲ ವೃದ್ಧಿ 
ಕೊಳವೆ ಬಾವಿಗಳನ್ನು ತೋಡಿ ತೋಡಿ ಅಂತರ್ಜಲ ಮಟ್ಟ ಕುಸಿಯುತ್ತ ಕುಸಿಯುತ್ತ 300 ಅಡಿಯಿಂದ 800 ಅಡಿ ಆಳದವರೆಗೆ ಇಳಿದಿರುವ ಪ್ರಸಕ್ತ ಸನ್ನಿವೇಶದಲ್ಲಿ ಸಾಂಪ್ರದಾಯಿಕ ಕಟ್ಟ, ಕಿಂಡಿ ಅಣೆಕಟ್ಟುಗಳ ಮೂಲಕ ಜಲಮೂಲವನ್ನು ವೃದ್ಧಿಸುವುದು ಒಳ್ಳೆಯದು ಎಂಬುದು ಆಡಳಿತಕ್ಕೆ, ಜನರಿಗೆ ಮನವರಿಕೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ.
– ಬಾಲಕೃಷ್ಣ ದೇವಾಡಿಗ ,ಗ್ರಾ.ಪಂ. ಅಧ್ಯಕ್ಷರು

ಸೂಕ್ತವಾದ ಸ್ಪಂದನೆ
ತೆಂಕಮಿಜಾರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಮೊದಲಿದ್ದಷ್ಟು ಈಗ ಇಲ್ಲ. ಈಗಿನ ಪಿಡಿಒ ಅವರ ಪರಿಶ್ರಮದಿಂದಾಗಿ ನೀರು ಪೂರೈಕೆ ಚೆನ್ನಾಗಿ ನಡೆಯುತ್ತಿದೆ. ಜನರ ಬೇಡಿಕೆಗಳಿಗೆ ಅವರು ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ.
– ಲಿಂಗಪ್ಪ ಗೌಡ , ನೀರ್ಕೆರೆ

ಪ್ಲಾಂಟ್‌ ಸ್ಥಾಪಿಸುವ ಯೋಜನೆ
ಇರುವೈಲು ಗ್ರಾಮದ ಕೊಲ್ಲೈಕೋಡಿಯಲ್ಲಿ ಫಲ್ಗುಣಿ ನದಿಗೆ ಅಡ್ಡವಾಗಿ ಅಣೆಕಟ್ಟು ನಿರ್ಮಿಸಿ ಕೊನ್ನೆ ಪದವಿನಲ್ಲಿ ಪ್ಲಾಂಟ್‌ ಸ್ಥಾಪಿಸುವ ಯೋಜನೆ ಇದೆ. ಈಗಾಗಲೇ ಈ ಬಗ್ಗೆ ಪ್ರಸ್ತಾವನೆ ಸರಕಾರಕ್ಕೆ ಹೋಗಿದೆ. ಈ ಯೋಜನೆ ಸಾಕಾರಗೊಂಡರೆ ಕೇವಲ ತೆಂಕಮಿಜಾರು ಗ್ರಾಪಂ. (ತೆಂಕ ಮಿಜಾರು, ಬಡಗ ಮಿಜಾರು) ಮಾತ್ರವಲ್ಲ ಇರುವೈಲು, ತೋಡಾರು, ಹೊಸಬೆಟ್ಟು ಹಾಗೂ ಪುತ್ತಿಗೆ ಗ್ರಾಮಗಳ ಸುಮಾರು 7,000 ಕುಟುಂಬಗಳ 65,000 ಮಂದಿಯ ನೀರ ಬೇಡಿಕೆಗೆ ಸಮಂಜಸ ಉತ್ತರ ಸಿಗಬಲ್ಲದು.  

ಧನಂಜಯ ಮೂಡಬಿದಿರೆ 

Advertisement

Udayavani is now on Telegram. Click here to join our channel and stay updated with the latest news.

Next