Advertisement

ಮೋದಿ ಎಷ್ಟು ಸಲ ಬಂದರೂ ಕಾಂಗ್ರೆಸ್ಸೇ ಗೆಲ್ಲೋದು: ಪ್ರಿಯಾಂಕ್ ಖರ್ಗೆ

03:20 PM Feb 08, 2023 | Team Udayavani |

ವಾಡಿ: ಪ್ರಧಾನಿ ನರೇಂದ್ರ ಮೋದಿ ಅವರಾಗಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆಗಲಿ, ಅಥವಾ ಅಮಿತ್ ಶಾ ಆಗಲಿ ಯಾರು ಎಷ್ಟು ಸಲ ಬಂದು ಹೋದರೂ ಕರ್ನಾಟಕದಲ್ಲಿ ಗೆಲ್ಲೋದು ಕಾಂಗ್ರೆಸ್ ಪಕ್ಷ ಮಾತ್ರ ಎಂದು ಶಾಸಕ ಪ್ರಿಯಾಂಕ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಚಿತ್ತಾಪುರ ಪಟ್ಟಣದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷ ಏರ್ಪಡಿಸಿದ್ದ ಪ್ರಜಾಧ್ವನಿ ಕಾರ್ಯಕ್ರಮದ ಬೃಹತ್ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿ, ಸಾಮಾನ್ಯ ಕಳ್ಳರು ಅಮಾಯಕ ಜನರ ಜೇಬು ಕತ್ತರಿಸುತ್ತಾರೆ. ಆದರೆ ಬಿಜೆಪಿಯ ರಾಜಕಾರಣ ಬಡವರ ಭವಿಷ್ಯ ಕದಿಯುತ್ತಿದೆ. ಯುವಕರ ಕನಸು ಕದಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋಮುವಾದಿಗಳ ಮೋಸದಾಟ ಕರ್ನಾಟಕದಲ್ಲಿ ನಡೆಯಲ್ಲ. ಪ್ರಬುದ್ಧ ಮತದಾರರು ಬಿಜೆಪಿಯ ಕಳ್ಳಾಟಕ್ಕೆ ಸುಳ್ಳು ಪ್ರಚಾರಕ್ಕೆ ಮರುಳಾಗಬೇಡಿ. ನನ್ನನ್ನು ಸೋಲಿಸಲು ಆರ್ ಎಸ್ ಎಸ್ ಟೀಂ ಚಿತ್ತಾಪುರಕ್ಕೆ ಓಡಿ ಬರುತ್ತಿದೆ. ನಾನು ಇದಕ್ಕೆ ಹೆದರುವುದಿಲ್ಲ. ಬ್ಯಾಟ್ ಬೀಸಲು ರೆಡಿ ಇದ್ದೇನೆ. ಬೌಲರ್ ಯಾರು ಹೇಳಿ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

ಪ್ರಿಯಾಂಕ್ ಖರ್ಗೆಯವರನ್ನು ಹಾಡಿ ಹೊಗಳಿದ ಸಿದ್ದರಾಮಯ್ಯ

ಪ್ರಿಯಾಂಕ್ ಖರ್ಗೆ ಅಂಥಹ ಬುದ್ದಿವಂತ, ಪ್ರಾಮಾಣಿಕ, ಅಭಿವೃದ್ಧಿ ಪರ ಮನಸು, ಜನ ಮೆಚ್ಚುವ ರಾಜಕಾರಣಿ ವಿಧಾನಸಭೆಗೆ ಬರಬೇಕು. ಆಗ ಮಾತ್ರ ರಾಜಕೀಯ ಶುದ್ಧವಾಗಲು ಸಾಧ್ಯವಾಗುತ್ತದೆ. ಪ್ರಿಯಾಂಕ್ ನೇರವಾಗಿ ಮಾತನಾಡುವ ರಾಜಕಾರಣಿ, ಇದ್ದದ್ದನ್ನು ಇದ್ದಂಗೆ ಹೇಳುವ ಧೈರ್ಯಶಾಲಿ ಯುವಕ. ಇಂಥವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ. ಅವರ ವರ್ತನೆ ಬದಲಾಗಬೇಕು ಎಂದು ನಾನು ಹೇಳುವುದಿಲ್ಲ. ನೇರವಾಗಿ ಹೇಳುವ ಕಠೋರ ನುಡಿಗಳು ಒಮ್ಮೊಮ್ಮೆ ತಿರುಗುಬಾಣ ಆಗುತ್ತವೆ. ಇದಕ್ಕೆಲ್ಲ ಹೆದರುವ ಅಗತ್ಯವಿಲ್ಲ, ಆದರೆ ಜನರ ಮನ ಗೆಲ್ಲುವ ಕಾರ್ಯವೂ ಮಾಡಬೇಕು ಎಂದು ಕಿವಿಮಾತು ಹೇಳಿದರು.

Advertisement

ಕೋಟಿಗಟ್ಟಲೆ ಹಣ ಸುರಿದು ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿರುವ ಅನೈತಿಕ ಸರ್ಕಾರ, ರಾಜ್ಯವನ್ನು ಲೂಟಿ ಹೊಡೆಯುವುದರಲ್ಲಿ ಮುಳುಗಿದೆ. ಇವರಿಂದ ರಾಜ್ಯಕ್ಕೆ ಒಂದು ಹೊಸ ಯೋಜನೆ ಕೊಡಲಿಲ್ಲ. ವಿಧಾನಸೌಧದ ಗೋಡೆಗಳಿಗೆ ಕಿವಿ ಕೊಟ್ಟು ಕೇಳಿದರೆ ಲಂಚ ಲಂಚ ಎನ್ನುತ್ತಿವೆ. ಶೇ.40 ಕಮಿಷನ್ ಕೇಳುವ ಬಿಜೆಪಿ ಸರ್ಕಾರ ಗುತ್ತಿಗೆದಾರರ ಸಾವಿಗೆ ಕಾರಣವಾಗಿದೆ. ಸರ್ಕಾರಿ ಗುತ್ತಿಗೆದಾರರೇ ಪ್ರಧಾನಿಗೆ ನೇರವಾಗಿ ದೂರು ನೀಡಿದ್ದಾರೆ. ನಾ ಖಾವೂಂಗಾ ನಾ ಖಾನೆ ದೂಂಗಾ ಎನ್ನುವವರಿಗೆ ನಾಚಿಕೆಯಾಗಬೇಕು. ಲಂಚದ ಆರೋಪಕ್ಕೆ ದಾಖಲೆ ಕೇಳುವ ಸಿಎಂ ಬೊಮ್ಮಾಯಿಗೂ ನೈತಿಕತೆಯಿಲ್ಲ ಎಂದು ಹರಿಹಾಯ್ದರು.

ಮಾಜಿ ಸಚಿವರಾದ ರೇವುನಾಯಕ ಬೆಳಮಗಿ, ಡಾ.ಶರಣಪ್ರಕಾಶ ಪಾಟೀಲ, ಶಾಸಕರಾದ ಪ್ರಿಯಾಂಕ್ ಖರ್ಗೆ, ಎಂ.ವೈ.ಪಾಟೀಲ, ಜಮೀರ್ ಅಹ್ಮದ್, ಮುಖಂಡರಾದ ಈಶ್ವರ ಖಂಡ್ರೆ, ತಿಪ್ಪಣ್ಣಪ್ಪ ಕಮಕನೂರ, ಸುಭಾಷ್ ರಾಠೋಡ, ಭೀಮಣ್ಣ ಸಾಲಿ, ಮಹೆಮೂದ್ ಸಾಹೇಬ, ನಾಗರೆಡ್ಡಿಗೌಡ ಪಾಟೀಲ ಕರದಾಳ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next