ಮೈಸೂರು: ಮೈಸೂರು ಜಿಲ್ಲೆಯಲ್ಲಿ ಈವರೆಗೆ ಮಂಗನ ಕಾಯಿಲೆಯ ರೋಗ ಲಕ್ಷಣ ಪತ್ತೆಯಾಗಿಲ್ಲ. ಕರ್ನಾಟಕ-ಕೇರಳ ಗಡಿಯಲ್ಲಿ ಇತ್ತೀಚೆಗೆ ಮೃತಪಟ್ಟ ಇಬ್ಬರು ಗಿರಿಜನ ವ್ಯಕ್ತಿಗಳ ರಕ್ತದ ಮಾದರಿಯನ್ನು ಸಂಗ್ರಹಿಸಿ ಮಣಿಪಾಲ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಡಿ.ಬಿ.ಕುಪ್ಪೆಯ ಕಾಡಂಚಿನಲ್ಲಿ ಉಣ್ಣೆಯನ್ನು ಸಂಗ್ರಹಿಸಿ ಶಿವಮೊಗ್ಗಕ್ಕೆ ಕಳುಹಿಸಿದ್ದು, ಅಲ್ಲಿಂದ ಇನ್ನೂ ವರದಿ ಬರಬೇಕಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಬಿ.ಬಸವರಾಜು ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ಡಿ.ಕೋಟೆ ತಾಲೂಕು ಡಿ.ಬಿ.ಕುಪ್ಪೆ ಅರಣ್ಯ ವ್ಯಾಪ್ತಿಯ ತಿಮ್ಮನಹೊಸಳ್ಳಿ ಗಿರಿಜನ ಹಾಡಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಮಂಗನಕಾಯಿಲೆಯಿಂದ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಹಾಡಿಗೆ ಭೇಟಿ ನೀಡಿ ಹಾಡಿಜನರನ್ನು ಮಾತನಾಡಿಸಿದ್ದು, ಮೃತಪಟ್ಟ ಚಂದ್ರ (42) ಹಾಗೂ ಭಾಸ್ಕರ (36) ಬೇರೆ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂಬ ವಿಚಾರ ತಿಳಿದುಬಂತು. ಜೊತೆಗೆ ಅರಣ್ಯ ಇಲಾಖೆಯವರು ಈ ಭಾಗದಲ್ಲಿ ಯಾವುದೇ ಕೋತಿ ಮೃತಪಟ್ಟಿಲ್ಲ ಎಂದು ತಿಳಿಸಿದ್ದಾರೆ.
ಕೇರಳದ ಮಾನಂದವಾಡಿಯ ಸುರೇಶ ಮತ್ತು ಸುರೇಶಯ್ಯ ಎಂಬುವರು ಡಿ.ಬಿ.ಕುಪ್ಪೆ ಹಾಡಿಯ ಹೆಣ್ಣು ಮಕ್ಕಳನ್ನು ಮದುವೆಯಾಗಿರುವುದರಿಂದ ಇಲ್ಲಿಗೆ ಬಂದು ಹೋದ ಮೇಲೆ ಜ್ವರ ಕಾಣಿಸಿಕೊಂಡು ಸುರೇಶ ಮೃತಪಟ್ಟಿದ್ದು, ಸುರೇಶಯ್ಯ ಕಲ್ಲಿಕೋಟೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಾ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಹಾಡಿಗೆ ಭೇಟಿ ನೀಡಿದ್ದ ಕೇರಳದ ವೈನಾಡು ಜಿಲ್ಲೆಯ ಡಿಎಚ್ಒ ಹಾಗೂ ಮಾನಂದವಾಡಿ ತಾಲೂಕು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಜನರಲ್ಲಿ ಮಂಗನಕಾಯಿಲೆಯ ಭಯ ಇರುವುದರಿಂದ ಡಿ.ಬಿ.ಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನದ 24 ಗಂಟೆ ಕಾಲ ವೈದ್ಯರು, ನರ್ಸ್ ಹಾಗೂ ಆ್ಯಂಬುಲೆನ್ಸ್ ಸೇವೆ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಕಾಡಂಚಿನ ಜನರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಮುಂಜಾಗ್ರತಾ ಕ್ರಮವಾಗಿ ವರ್ಷದಲ್ಲಿ ಎರಡು ಬಾರಿ ಚುಚ್ಚುಮದ್ದು ನೀಡಲಾಗುತ್ತದೆ. ಆಗಸ್ಟ್‌ನಲ್ಲಿ ಮೊದಲ ಹಂತದ ಚುಚ್ಚುಮದ್ದು ನೀಡಲಾಗಿದ್ದು, ಎರಡನೇ ಹಂತದ ಚುಚ್ಚುಮದ್ದು ನೀಡಿಕೆಗೆ ಔಷಧಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಜಿಲ್ಲಾ ಸಾಂಕ್ರಾಮಿಕ ರೋಗಗಳ ಕಣ್ಗಾವಲು ಘಟಕದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಸುಮ ಪತ್ರಿಕಾಗೋಷ್ಠಿಯಲ್ಲಿದ್ದರು.