ಶಿವಮೊಗ್ಗ: ದೇಶಾದ್ಯಂತ ಕೋವಿಡ್-19 ವೈರಸ್ ತಡೆಯುವ ಉದ್ದೇಶದಿಂದ ಲಾಕ್ ಡೌನ್ ಹಾಕಲಾಗಿದ್ದು, ಇದೇ ರೀತಿ ಮಂಗನ ಕಾಯಿಲೆ ತಡೆಯುವ ಹಿನ್ನೆಲೆಯಲ್ಲಿ ಮಲೆನಾಡಿನಲ್ಲಿ ನೋ ಮ್ಯಾನ್ ಝೋನ್ ಮಾಡಲಾಗಿದೆ.
ಮಲೆನಾಡಿನಲ್ಲಿ ಮಂಗನ ಕಾಯಿಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಧಿಕಾರಿ ಶಿವಕುಮಾರ್ ಅವರು ನೋ ಮ್ಯಾನ್ ಝೋನ್ ಘೋಷಿಸಿದ್ದಾರೆ.
ಇದುವರೆಗೆ ಮಂಗನ ಕಾಯಿಲೆ ( ಕ್ಯಾಸನೂರು ಫಾರೆಸ್ಟ್ ಡಿಸೀಸ್) ಸುಮಾರು 130ಕ್ಕೂ ಹೆಚ್ಚು ಜನರಿಗೆ ತಾಗಿದ್ದು, ಐವರು ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗನ ಕಾಯಿಲೆ ತಡೆಯುವ ಉದ್ದೇಶದಿಂದ ಜಿಲ್ಲಾಧಿಕಾರಿಯವರು ನೋ ಮ್ಯಾನ್ ಝೋನ್ ಗುರುತಿಸಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ, ಕೋಣಂದೂರು, ಕನ್ನಂಗಿ ಬೆಟ್ಟಬಸವಾನಿ, ಸಾಗರ ತಾಲೂಕಿನ ತುಮರಿ, ಕಾರ್ಗಲ್, ಅರಳಗೋಡು ಗ್ರಾಮಪಂಚಾಯಿತಿ ವ್ಯಾಪ್ತಿಯ ಅರಣ್ಯ ಪ್ರದೇಶ ಸೇರಿ ಜಿಲ್ಲೆಯ 31 ಹಳ್ಳಿಗಳ ವ್ಯಾಪ್ತಿಯ ಅರಣ್ಯ ಪ್ರದೇಶಗಳನ್ನು ನೋ ಮ್ಯಾನ್ ಝೋನ್ ಎಂದು ಘೋಷಿಸಲಾಗಿದೆ.
ಕಾಡಿನ ದರಗೆಲೆಗಳಿಂದಲೇ ಉಣ್ಣೆ ಮನ್ಯಷ್ಯನ ದೇಹಕ್ಕೆ ಅಂಟಿಕೊಂಡು ಮಂಗನ ಕಾಯಿಲೆ ಹರಡುವ ಕಾರಣದಿಂದ ಈ ಪ್ರದೇಶದಲ್ಲಿ ಕಾಡಿಗೆ ಯಾರೂ ಹೋಗದಂತೆ ಸೂಚನೆ ನೀಡಲಾಗಿದೆ. ಈ ನೋ ಮ್ಯಾನ್ ಝೋನ್ ನಲ್ಲಿ ತರಗೆಲೆ ಸಂಗ್ರಹಿಸುವುದನ್ನೂ ಜಿಲ್ಲಾಡಳಿತ ನಿಷೇಧಿಸಿದೆ.