ಕೆ.ಆರ್.ಪೇಟೆ: ತಾಲೂಕಿನ ಶಕ್ತಿ ಕೇಂದ್ರವೇ ಆಗಿರುವ ಹತ್ತಾರು ಸರ್ಕಾರಿ ಕಚೇರಿಗಳನ್ನು ಹೊಂದಿರುವ ಹಾಗೂ ಪ್ರತಿದಿನ ನೂರಾರು ಅಧಿಕಾರಿಗಳು ಮತ್ತು ಸಾವಿರಾರು ಸಾರ್ವಜನಿರು ತಮ್ಮತಮ್ಮ ಕೆಲಸಗಳಿಗಾಗಿ ಬಂದು ಹೋಗುವ ಮಿನಿ ವಿಧಾನಸೌಧ ಸೂಕ್ತ ನಿರ್ವಹಣೆ ಇಲ್ಲದೆ ಅವ್ಯವಸ್ಥೆಯ ಗೂಡಾಗಿದೆ. ಕೇವಲ ಒಂದು ದಶಕಗಳ ಹಿಂದೆ ನಿರ್ಮಿಸಿರುವ ನಾಲ್ಕು ಮಹಡಿಯ ಶ್ವೇತವರ್ಣದ ಮಿನಿ ವಿಧಾನಸೌಧ ಮಳೆ ಬಂದರೆ ಸೋರುತ್ತದೆ. ಹತ್ತಾರು ತಹಶೀಲ್ದಾರ್ ರು ಬಂದು ಅದೇ ಸೋರುವ ಮಿನಿ ವಿಧಾನಸೌಧದಲ್ಲಿ ಅಧಿಕಾರ ನಡೆಸಿದರು. ವರ್ಗವಾದರು. ಆದರೆ ಯಾವ ತಹಶೀಲ್ದಾರ್ ಕೂಡ ಮಿನಿ ವಿಧಾನ ಸೌಧದ ದುರಸ್ತಿಗೆ ಮನಸ್ಸು ಮಾಡಲಿಲ್ಲ.
ಮಳೆ ಬಂದರೆ ಬಹುತೇಕ ಕೊಠಡಿಗಳು ಸೋರುವ ಜೊತೆಗೆ ಕೆಲವು ಕೊಠಡಿಗಳಲ್ಲಿ ನೀರು ತುಂಬಿಕೊಂಡು ವಿದ್ಯುತ್ ಶಾಕ್ ಹೊಡೆಯುವ ಆತಂಕವೂ ಉಂಟಾಗಿದೆ. ಇಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಮಳೆ ಬಂದರೆ ನೀರು ಸೋರುವ ಸ್ಥಳಕ್ಕೆ ಬಕೆಟ್ ಇಡುವ ಜೊತೆಗೆ ವಿದ್ಯುತ್ ಶಾಕ್ ಹೊಡೆಯುವ ಭಯದಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿರುವುದು ಸಾಮಾನ್ಯ ವಾಗಿದೆ. ಕಟ್ಟಡದ ನೆಲ ಮಹಡಿಯಲ್ಲಿ ಮಳೆ ಬಂದರೆ ನೀರಿನಲ್ಲೇ ಸಾರ್ವಜನಿಕರು ಓಡಾಡಬೇಕಿದೆ.
ಅವೈಜ್ಞಾನಿಕ ಕಟ್ಟಡ ನಿರ್ಮಾಣ: ಮಿನಿ ವಿಧಾನಸೌಧದ ಕಟ್ಟಡವನ್ನು 2007ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಉದ್ಘಾಟಿಸಿದ್ದರು. ಮಿನಿವಿಧಾನ ಸೌಧದಲ್ಲಿ ಹೊಸತರಲ್ಲಿ ಸ್ವಲ್ಪ ದಿನ ಚೆನ್ನಾಗಿಯೇ ಇತ್ತು. ಆಗಲೇ ಮಳೆಗಾಲದಲ್ಲಿ ಸೋರುವುದು ಗೋಚರಕ್ಕೆ ಬಂದಿತು. ಅದರಿಂದ ಕಟ್ಟಡವನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದು ತಿಳಿಯಿತು. ಹನ್ನೆರಡು ವರ್ಷಗಳಿಂದ ಒಮ್ಮೆಯೂ ಸುಣ್ಣಬಣ್ಣ ಕಾಣದ ಕಟ್ಟಡ ಬಿಸಿಲಿನಿಂದ ಒಣಗಿ ಕೆಲವೆಡೆಗಳಲ್ಲಿ ಮಳೆ ನೀರಿನಿಂದ ಗೋಡೆಯ ಮೇಲೆ ಪಾಚಿ ಕಟ್ಟಿಕೊಂಡಿದ್ದು ಬಳಿಬಣ್ಣ ಈಗ ಕಪ್ಪುಬಣ್ಣಕ್ಕೆ ತಿರುಗಿದೆ.
ಸ್ವಚ್ಛತೆಯೇ ಕಾಣದ ಕಚೇರಿ: ಮಿನಿ ವಿಧಾನಸೌಧದಲ್ಲಿ ಪ್ರತಿದಿನ ಕಸ ಗುಡಿಸದೆ ಅಲ್ಲಲ್ಲಿ ಕಸದ ರಾಶಿಗಳೇ ಬಿದ್ದಿವೆ. ಗೋಡೆಗಳಲ್ಲಿ ಜೇಡರ ಬಲೆಗಳು ಗೂಡು ಕಟ್ಟಿಕೊಂಡಿವೆ. ಸ್ವಚ್ಛತೆಗೆ ಇಲ್ಲಿ ಅರ್ಥವೇ ತಿಳಿದಿಲ್ಲ. ತಾಲೂಕನ್ನು ಅಭಿವೃದ್ಧಿ ಮಾಡಬೇಕಿರುವ ಮತ್ತು ಸ್ವತ್ಛತೆ ಕಾಪಾಡಬೇಕಾದ ಇತರರಿಗೆ ಮಾದರಿಯಾಗ ಬೇಕಿರುವ ತಾಲೂಕು ಆಡಳಿತ ಕಚೇರಿಯಲ್ಲೇ ಸೂಕ್ತ ನಿರ್ವಹಣೆ ಮಾಡದಿರುವುದು ವಿಪರ್ಯಾಸ.
ಹತ್ತಕ್ಕೂ ಹೆಚ್ಚು ಕಚೇರಿಗಳು: ಮಿನಿ ವಿಧಾನಸೌಧದಲ್ಲಿ ಕೇವಲ ತಾಲೂಕು ಕಚೇರಿ ಮಾತ್ರ ಇಲ್ಲ. ಇದರ ಜೊತೆಗೆ ತಾಲೂಕು ಖಜಾನೆ ಇಲಾಖೆ, ರೇಷ್ಮೆ, ಭೂ ಮಾಪನಾ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಡಾ.ಬಿ.ಆರ್.ಅಂಬೇಡ್ಕರ್ ನಿಗಮ, ತಾಲೂಕು ಕಾನೂನು ಸೇವಾ ಸಮಿತಿ ಸೇರಿದಂತೆ ಹತ್ತಾರು ಇಲಾಖೆ ಕಚೇರಿಗಳೂ ಕಾರ್ಯನಿರ್ವಹಿಸುತ್ತಿವೆ. ಎಲ್ಲ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಅವರಿಗೆ ಕಚೇರಿ ಸ್ವತ್ಛತೆ, ನಿರ್ವಹಣೆ ಬಗ್ಗೆ ಕಿಂಚತ್ತು ಕಾಳಜಿ ಇಲ್ಲವೆನ್ನಲು ಇಲ್ಲಿನ ಅವ್ಯವಸ್ಥೆಗಳಿಗಿಂತ ಮತ್ತೂಂದು ನಿದರ್ಶನ ಬೇಕಿಲ್ಲ. ಪರಿಸರ ಪ್ರೇಮಿ ಮಿನಿ ವಿಧಾನಸೌಧ: ರಸ್ತೆಗಳು, ಮನೆಯಂಗಳ, ಶಾಲಾ ಆವರಣ, ಸರ್ಕಾರಿ ಕಚೇರಿಗಳ ಆವರಣದಲ್ಲಿ ಸಸಿ ನೆಟ್ಟು ಪರಿಸರ ಸಂರಕ್ಷಣೆ ದಿನಾಚರಣೆ ಆಯೋಜಿಸಿ ಪರಿಸರ ಕುರಿತು ಜನಜಾಗೃತಿ ಮೂಡಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಾಲೂಕಿನ ಮುಖ್ಯ ಕೇಂದ್ರ ಬಿಂದು, ಆಡಳಿತ ನಿರ್ವಹಿಸುವ ಮಿನಿ ವಿಧಾನಸೌಧದಲ್ಲೇ ಈ ರೀತಿಯ ಅವ್ಯವಸ್ಥೆಗಳಿದ್ದರೆ, ಆಡಳಿತ ನಿರ್ವಹಣೆ ಎಷ್ಟರ ಮಟ್ಟಿಗೆ ನಡೆಯುತ್ತಿರುಬಹುದು ಎಂಬ ಅನುಮಾನ ಮೂಡಿಸುವಂತಾಗಿದೆ.
ಕಟ್ಟಡ ಸೋರುತ್ತಿರುವ ಬಗ್ಗೆ ನನ್ನ ಗಮನಕ್ಕೂ ಬಂದಿದೆ. ಈಗಾಗಲೇ ಲೋಕೋಪಯೋಗಿ ಇಲಾಖೆ ಮೂಲಕ ಕಟ್ಟಡ ದುರಸ್ತಿ, ಬಣ್ಣ ಬಳಿಸಲು ಮತ್ತು ಕಚೇರಿ ಆವರಣಕ್ಕೆ ಸುತ್ತಲೂ ಕಾಂಪೌಂಡ್ ನಿರ್ಮಾಣಕ್ಕೆ 39 ಲಕ್ಷ ರೂ. ವೆಚ್ಚದ ಅಂದಾಜು ಪಟ್ಟಿ ಸಿದ್ದಪಡಿಸಿ ವರದಿ ಕಳುಹಿಸಲಾಗಿದೆ. ಮೊದಲಿಗೆ ಕಟ್ಟಡ ದುರಸ್ತಿ, ಸ್ವತ್ಛತೆ ಹೀಗೆ ಹಂತಹಂತವಾಗಿ ಮಿನಿ ವಿಧಾನಸೌಧದ ಸೂಕ್ತ ನಿರ್ವಹಣೆಗೆ ಕ್ರಮ ಕೈಗೊಳ್ಳುತ್ತೇನೆ.
–ಎಂ.ಶಿವಮೂರ್ತಿ, ತಹಶೀಲ್ದಾರ್
-ಎಚ್.ಬಿ.ಮಂಜುನಾಥ್