ಸಿರುಗುಪ್ಪ: ನಗರದಲ್ಲಿ ಬಳ್ಳಾರಿ-ಸಿಂಧನೂರು ಮುಖ್ಯರಸ್ತೆಯಲ್ಲಿ ನಿರಂತರವಾಗಿ ವಾಹನಗಳು ಮತ್ತು ಜನ ಜಂಗುಳಿಯಿಂದ ತುಂಬಿರುತ್ತದೆ. ಸುಸಜ್ಜಿತ ಈ ರಸ್ತೆಯ ಮಧ್ಯದಲ್ಲಿರುವ ವಿಭಜಕದಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳಲ್ಲಿ ದೀಪಗಳು ಉರಿಯದೇ ರಾತ್ರಿ ಮತ್ತು ನಸುಕಿನ ವೇಳೆ ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ!
10 ವರ್ಷಗಳ ಹಿಂದೆ ನಗರಸಭೆ ಅಧಿಕಾರಿಗಳು ಕಿರಿದಾದ ಬಳ್ಳಾರಿ-ಸಿಂಧನೂರು ರಸ್ತೆಯನ್ನು ವಿಸ್ತರಣೆ ಮಾಡಲು ರಸ್ತೆಯ ಎರಡೂ ಬದಿಯಲ್ಲಿದ್ದ ಮನೆ, ಅಂಗಡಿಗಳನ್ನು ತೆರವುಗೊಳಿಸಿ 80 ಅಡಿ ಅಗಲದ ರಸ್ತೆಯನ್ನು ನಿರ್ಮಿಸಿದ್ದರು. ರಸ್ತೆಯ ನಡುವೆ ಅಳವಡಿಸಿದ ವಿಭಜಕಗಳಲ್ಲಿ ನಗರ ಸೌಂದಯೀìಕರಣಗೊಳಿಸಲು ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದ್ದರೂ ಕೆಲವು ಕಂಬಗಳಲ್ಲಿ ದೀಪಗಳೇ ಬೆಳಗುವುದಿಲ್ಲ. ಇದರಿಂದಾಗಿ ರಾತ್ರಿ ವೇಳೆ ಮುಖ್ಯರಸ್ತೆಯಲ್ಲಿ ದೀಪದ ಭಾಗ್ಯವಿಲ್ಲದೆ ಭಣಗುಡುತ್ತಿದೆ.
ಇನ್ನು ಕೆಲವು ಕಡೆಗಳಲ್ಲಿ ವಾಹನಗಳ ಡಿಕ್ಕಿಗೆ ಗುರಿಯಾದ ವಿದ್ಯುತ್‌ಕಂಬಗಳನ್ನು ಅಳವಡಿಸಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇನ್ನು ಸಿರುಗುಪ್ಪ-ಆದೋನಿ ರಸ್ತೆ ವಿಭಜಕಗಳಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ದೀಪಗಳು ಯಾವಾಗ ಬೆಳಗುತ್ತವೋ ಯಾವಾಗ ಕಣ್ಣು ಮುಚ್ಚುತ್ತವೋ, ಒಟ್ಟು ಈ ರಸ್ತೆಯಲ್ಲಿ ರಾತ್ರಿವೇಳೆ ಬೆಳಕಿನ ಭಾಗ್ಯ ಇಲ್ಲದಂತಾಗಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಭಯದಲ್ಲಿಯೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಖ್ಯರಸ್ತೆಯ ಪಕ್ಕದಲ್ಲಿರುವ ತರಕಾರಿ ಮಾರುಕಟ್ಟೆಗೆ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ತರಕಾರಿ, ಸೊಪ್ಪು ಸೇರಿದಂತೆ ಇತರೆ ಸಾಮಗ್ರಿಗಳನ್ನು ಆಟೋ, ಬೈಕ್, ಟೆಂಪೋಗಳಲ್ಲಿ ಸಾಗಾಣಿಕೆ ಮಾಡುವ ವೇಳೆ ರಸ್ತೆ ಕತ್ತಲಿನಿಂದ ಕೂಡಿರುವುದರಿಂದ ಅಪಘಾತಕ್ಕೆ ಆಹ್ವಾನಿಸುವಂತಾಗಿದೆ. ಈ ರಸ್ತೆಯಲ್ಲಿ ಪಾದಚಾರಿಗಳು ಪ್ರಾಣಭೀತಿಯಿಂದ ಸಂಚರಿ ಸುವಂತಾಗಿದೆ. ಅಪಘಾತಗಳಾಗಿ ಹಲವರು ಗಾಯ ಮಾಡಿಕೊಂಡಿರುವ ಘಟನೆಗಳು ನಡೆದಿವೆ.
ಇದನ್ನೂ ಓದಿ:ಬೀದರ್: ಹಿರಿಯ ಪತ್ರಕರ್ತ ವಿಶ್ವನಾಥ ಪಾಟೀಲ್ ನಿಧನ
ಬೆಳಗಿನ ಜಾವ ತರಕಾರಿ ಬೆಳೆದ ರೈತರು ಮತ್ತು ಮಹಿಳೆಯರು ನಡೆದು ಬರುವಾಗ ನಾಯಿಗಳ ಕಾಟ ಇರುವುದರಿಂದ ಭಯಪಡುತ್ತಿದ್ದಾರೆ. ಅಲ್ಲದೆ ವಾಹನಗಳ ಬರುವುದರಿಂದ ಭಯದ ವಾತಾವಾರಣವಿದೆ. ಆದ್ದರಿಂದ ಮುಖ್ಯರಸ್ತೆಗಳಲ್ಲಿ ಬೀದಿ ದೀಪದ ಸಮರ್ಪಕ ವ್ಯವಸ್ಥೆ ಮಾಡಬೇಕೆಂದು ನಗರ ನಿವಾಸಿಗಳು ಒತ್ತಾಯಿಸಿದ್ದಾರೆ.
ಆರ್.ಬಸವರೆಡ್ಡಿ ಕರೂರು