ಕೊಪ್ಪಳ: ನಗರದ ಗಡಿಯಾರ ಕಂಬದ ಬಳಿ ಹೃದಯ ಭಾಗದಲ್ಲಿರುವ ಶಿಕ್ಷಣ ಇಲಾಖೆಯ ಅರ್ಧ ಎಕರೆ ಜಾಗವು ಕಳೆದ ಹತ್ತು ವರ್ಷಗಳಿಂದ ಪಾಳು ಬಿದ್ದಿದೆ. ಇದರಿಂದ ಇದೊಂದು ಅನೈತಿಕ ಚಟುವಟಿಕೆಯಾಗಿ ಮಾರ್ಪಾಡಾಗಿದ್ದು, ಮದ್ಯದ ಬಾಟಲಿ, ಕಸ ಎಸೆಯುವ ತಾಣವಾಗಿದೆ. ಇದೊಂದು ಬೆಲೆ ಬಾಳುವ ಜಾಗ. ಇದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಸ್ಥಳೀಯರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
ಹೌದು. ನಗರದ ಗಡಿಯಾರ ಕಂಬದ ಬಳಿ ಹಳೇ ಸರ್ಕಾರಿ ಜಾಗವಿದ್ದು, ಇದು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದ್ದಾಗಿದೆ. ಇಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸಿಪಿಎಸ್ ಶಾಲೆ ಆರಂಭಿಸಲಾಗಿತ್ತು. ಆದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಹಾಗೂ ಗಡಿಯಾರ ಕಂಬದಲ್ಲಿ ನಿತ್ಯ ಜನದಟ್ಟಣೆ ಕಾರಣದಿಂದ ಸಿಪಿಎಸ್ ಶಾಲೆಯನ್ನು ಬೇರೆಡೆ ಸ್ಥಳಾಂತರಿಸಿದೆ.
ಅನೈತಿಕಚಟುವಟಿಕೆ ತಾಣ: ಶಾಲೆಯ ಬಾಗಿಲುಗಳನ್ನು ಬಂದ್ ಮಾಡಲಾಗಿದ್ದರೂ ಇಲ್ಲಿ ರಾತ್ರಿ ಅನೈತಿಕ ಚಟುವಟಿಕೆಗಳು ನಡೆಯುತ್ತವೆ ಎಂದು ಸ್ಥಳೀಯರು ಆಪಾದಿಸುತ್ತಿದ್ದಾರೆ. ಅಲ್ಲದೇ, ರಾತ್ರಿಕುಡುಕರು ಮದ್ಯ ಸೇವಿಸಿ ಶಾಲೆಯ ಕಟ್ಟಡದ ಮೇಲೆ ಮದ್ಯದ ಖಾಲಿ ಬಾಟಲಿ ಎಸೆಯುತ್ತಿದ್ದಾರೆ. ಈ ಜಾಗದಲ್ಲಿ ದೊಡ್ಡ ದೊಡ್ಡ ಜಾಲಿ ಗಿಡಗಳು ಬೆಳೆದು ನಿಂತಿದ್ದು, ಸುತ್ತಲಿನ
ನಿವಾಸಿಗಳಿಗೆ ಹಾವು, ಚೇಳುಗಳ ಕಾಟ ಶುರುವಾಗಿದೆ. ತ್ಯಾಜ್ಯವು ಹೆಚ್ಚು ತುಂಬುತ್ತಿರುವುದರಿಂದ ದುರ್ನಾತ ಬೀರುತ್ತಿದೆ. ಇದರಿಂದ ಸುತ್ತಲಿನ ನಿವಾಸಿಗಳಿಗೆ ನೆಮ್ಮದಿಯೇ ಕಳೆದುಕೊಂಡಿದ್ದಾರೆ. ಅಲ್ಲದೇ, ಹಳೇ ಶಾಲೆ ಮುಖ್ಯದ್ವಾರದ ಬಳಿ ಸಾರ್ವಜನಿಕ ಮೂತ್ರಾಲಯ ಕಟ್ಟಿರುವುದು ನಿಜಕ್ಕೂ ಶೋಚನೀಯ ಸ್ಥಿತಿ. ಇದನ್ನು ಯಾರೂ ಸರಿಯಾಗಿ ಶುಚಿಗೊಳಿಸದ
ಕಾರಣ ದುರ್ನಾತ ಬೀರುತ್ತಿದೆ.
ಅತ್ಯಂತ ಬೆಲೆ ಬಾಳುವ ಜಾಗ: ಗಡಿಯಾರ ಕಂಬದ ಪಕ್ಕದಲ್ಲೇ ಈ ಜಾಗವಿದೆ. ಇಲ್ಲಿ ಹಲವು ಕಟ್ಟಡಗಳಿವೆ. ಕೆಲವೊಂದು ಬಿದ್ದಿದ್ದರೆ ಕೆಲವು ಕಟ್ಟಡವು ಇನ್ನೂ ಸುಸ್ಥಿತಿಯಲ್ಲಿವೆ. ನಗರದ ಮಧ್ಯೆ ಈ ಜಾಗ ಇರುವುದರಿಂದ ಅತ್ಯಂತ ಬೆಲೆ ಬಾಳುವ ಜಾಗ ಇದಾಗಿದೆ. ಈ ಜಾಗದಲ್ಲಿ ಜಿಲ್ಲಾಡಳಿತ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಯಾವುದಾದರೂ ಕಟ್ಟಡಕ್ಕೆ ಬಳಕೆ ಮಾಡಿಕೊಳ್ಳಬಹುದು. ಇಲ್ಲವೇ ಸಾರ್ವಜನಿಕ ಉದ್ದೇಶಕ್ಕಾಗಿ ಸರ್ಕಾರಿ ತಂಗುದಾಣ ಮಾಡಬಹುದು. ಇಲ್ಲವೇ ನಗರ ಠಾಣೆ, ಸಣ್ಣ ಪೊಲೀಸ್ ಠಾಣೆಯನ್ನೂ ಇಲ್ಲಿ ಮಾಡಲು ಯೋಗ್ಯ ಸ್ಥಳವಾಗಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹತ್ತಾರು ವರ್ಷಗಳಿಂದ ಈ ಜಾಗವು ಪಾಳು ಬಿದ್ದಿದೆ. ಯಾರೊಬ್ಬರೂ ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ಮೊರಾರ್ಜಿ ಕಾಲೇಜಿಗೆ ಹಸ್ತಾಂತರ: ಈ ಶಾಲೆಯ ಜಾಗದ ಕಟ್ಟಡ ಬಳಕೆಯನ್ನು ಕೆಲ ವರ್ಷಗಳ ಹಿಂದೆ ಶಿಕ್ಷಣ ಇಲಾಖೆ ಮೊರಾರ್ಜಿ ವಿಜ್ಞಾನ ಕಾಲೇಜಿಗೆ ಹಸ್ತಾಂತರ ಮಾಡಲಾಗಿತ್ತು. ಆದರೆ ಕಾಲೇಜನ್ನು ಹಿರೇಸಿಂದೋಗಿಗೆ ಸ್ಥಳಾಂತರವಾದ ಹಿನ್ನೆಲೆಯಲ್ಲಿ ಈ ಜಾಗವು ಆಗಿನಿಂದಲೂ ಪಾಳು ಬಿದ್ದಿದೆ. ವಿಜ್ಞಾನ ಕಾಲೇಜಿನ ಪ್ರಾಚಾರ್ಯರು ಪುನಃ ಈ ಜಾಗವನ್ನು ಶಿಕ್ಷಣ ಇಲಾಖೆಗೆ ಹಸ್ತಾಂತರ ಮಾಡದೇ ತೆರಳಿದ್ದಾರೆ. ಇತ್ತ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಶಾಲೆ-ಕಾಲೇಜು, ಗ್ರಂಥಾಲಯ, ಬಸ್‌ನಿಲ್ದಾಣ ಇಲ್ಲವೇ ಸಾರ್ವಜನಿಕ ಉದ್ದೇಶಕ್ಕಾದರೂ ಬಳಸಿ ಸುಮ್ಮನೆ ಪಾಳು ಕೆಡವಬೇಡಿ. ಅಲ್ಲದೇ, ಕೇಂದ್ರಿಯ ಬಸ್ ನಿಲ್ದಾಣದ ಬಳಿ ಸುಸ್ಥಿತಿಯಲ್ಲಿದ್ದ ಕಟ್ಟಡವನ್ನು ಕೆಡವಿ ಬಡವರ ಹೊಟ್ಟೆ ಮೇಲೆ ಹೊಡೆಯಲಾಗಿದೆ. ಆದರೆ ಇಂತಹ ಜಾಗವನ್ನು ಬಳಕೆ ಮಾಡಿಕೊಳ್ಳುತ್ತಿಲ್ಲ. ಇನ್ನಾದರೂ ಇದನ್ನು ಬಳಸಿಕೊಳ್ಳಿ ಎಂದೆನ್ನುತ್ತಿದ್ದಾರೆ ಸ್ಥಳೀಯರು.
– ದತ್ತು ಕಮ್ಮಾರ