ಕೋಸ್ಟಲ್‌ವುಡ್‌ನಲ್ಲಿ ಸಿನೆಮಾಗಳ ಸಂಖ್ಯೆ ಮತ್ತೆ ಏರಿಕೆ ಹಂತದಲ್ಲಿದೆ. ಗಿರಿಗಿಟ್ ಮಾಡಿದ ಕಮಾಲ್‌ನಿಂದಾಗಿ ಬಹಳಷ್ಟು ನಿರ್ಮಾಪಕ-ನಿರ್ದೇಶಕರು ತುಳು ಸಿನೆಮಾದಲ್ಲಿ ಭರವಸೆ ಇರಿಸಿದ್ದಾರೆ. ಉತ್ತಮ ಸಿನೆಮಾ ನೀಡಿದರೆ ತುಳುವಿನ ಪ್ರೇಕ್ಷಕರು ದೇಶ-ವಿದೇಶದಲ್ಲಿಯೂ ಕೈಹಿಡಿಯುತ್ತಾರೆ ಎಂಬ ಆಶಯಕ್ಕೆ ಬಂದಿರುವ ಅವರು ಹೊಸ ಸಿನೆಮಾಗಳ ಬಗ್ಗೆ ಉತ್ಸುಕರಾಗಿದ್ದಾರೆ. ಹೀಗಾಗಿ ಒಂದೊಂದೇ ಸಿನೆಮಾಗಳು ಇದೀಗ ಸೆಟ್ಟೇರುವ ತವಕದಲ್ಲಿವೆ.
ಅಂದಹಾಗೆ, ಕೆಲವೇ ದಿನದ ಹಿಂದೆ ಮುಹೂರ್ತ ಕಂಡಿರುವ “ದರ್ಬಾರ್’ ಸಿನೆಮಾ ಸದ್ಯ ಕುಡ್ಲದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಹೊಸ ಸಿನೆಮಾ ತಂಡ ರೆಡಿ ಮಾಡಲಿರುವ ಈ ಸಿನೆಮಾದಲ್ಲಿ ಅರವಿಂದ ಬೋಳಾರ್ ಹಾಗೂ ಭೋಜರಾಜ್ ವಾಮಂಜೂರು ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಮೂಲಕ ಕೋಸ್ಟಲ್‌ವುಡ್‌ನಲ್ಲಿ ಆಶಾಭಾವ ಮೂಡಿಸಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ಅವರ ಗರಡಿಯಲ್ಲಿ ಪಳಗಿದ ಅರ್ಜುನ್ ಬಿ. ಅವರು “ದರ್ಬಾರ್’ ಸಿನೆಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಬೆಂಗಳೂರಿನ ರಾಜು, ತಮ್ಮಣ್ಣ ಸಿನೆಮಾ ನಿರ್ಮಾಣದ ಜವಾಬ್ದಾರಿ ವಹಿಸಿದ್ದಾರೆ. ನವೀನ್ ಕುಡ್ಲ ಸಂಭಾಷಣೆಯ ಹೊಣೆ ಹೊತ್ತಿದ್ದಾರೆ. ಧಾರಾವಾಹಿಯಲ್ಲಿ ನಟಿಸಿದ್ದ ಕಲಾವಿದ ಪ್ರೀತಮ್ ಪುತ್ತೂರು ಮುಖ್ಯಭೂಮಿಕೆಯಲ್ಲಿದ್ದರೆ, ಹೀರೋಯಿನ್ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ವಿನುತ್ ಪುತ್ತೂರು, ಪ್ರಕಾಶ್ ಗಟ್ಟಿ, ವಾಸುದೇವ ಕೊಣಾಜೆ ಸೇರಿದಂತೆ ಕಲಾವಿದರು ಸಿನೆಮಾದಲ್ಲಿದ್ದಾರೆ. ಸಂಗೀತ ಆ್ಯಲೆನ್ ಕ್ರಾಸ್ತಾ ಪುತ್ತೂರು ನೀಡಲಿದ್ದು, ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮುಹೂರ್ತ ಕಂಡಿರುವ ಈ ಸಿನೆಮಾದ ಶೂಟಿಂಗ್ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಪಾಣೆಮಂಗಳೂರು ಸಮೀಪದ ಮೊಗರ್ನಾಡು ವ್ಯಾಪ್ತಿಯಲ್ಲಿಯೇ ಶೂಟಿಂಗ್ ನಡೆಯಲಿದೆ. ಹಾಡಿನ ಚಿತ್ರೀಕರಣಕ್ಕೆ ಮಡಿಕೇರಿ, ಚಿಕ್ಕಮಗಳೂರು ಪ್ಲ್ಯಾನ್ ಹಾಕಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಎರಡು ತಿಂಗಳೊಳಗೆ “ದರ್ಬಾರ್’ ರೆಡಿ ಆಗಲಿದೆ.
ಅಂದಹಾಗೆ ದರ್ಬಾರ್‌ನಲ್ಲಿ ಏನಿದೆ ಅಂದರೆ ಎಲ್ಲವೂ ಇದೆ ಎನ್ನುತ್ತದೆ ಚಿತ್ರತಂಡ. ಕಾಮಿಡಿ ಹಾಗೂ ಇಂದಿನ ಸಾಮಾಜಿಕ ಜನಜೀವನದ ಬದುಕಿನ ಚಿತ್ರಣ ದರ್ಬಾರ್‌ನಲ್ಲಿದೆ ಎನ್ನುತ್ತಾರೆ. ನೋಟ್ ಬಂದ್ ಆದ ಬಳಿಕದ ಸಂಗತಿಯೂ ಇಲ್ಲಿ ಕಾಣಿಸಲಿದೆ ಎಂಬ ಮಾತೂ ಇದೆ. ಅಂತೂ, ಕರಾವಳಿಯಲ್ಲಿ ಸೆಟ್ಟೇರಲಿರುವ ಹೊಸ ಸಿನೆಮಾ “ದರ್ಬಾರ್’ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದು ಸತ್ಯ.
-ದಿನೇಶ್ ಇರಾ