ಯಾದಗಿರಿ: ಏಪ್ರಿಲ್‌ನಲ್ಲಿ ಹಸಿರು ವಲಯದಲ್ಲಿದ್ದ ಯಾದಗಿರಿ ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡಿದ್ದು, ಸಾಕಷ್ಟು ಆತಂಕ ಮೂಡಿಸಿದೆ. ಆದರೆ ಸಾವಿನ ಪ್ರಮಾಣ ಕಡಿಮೆ ಇರುವುದು ಸಮಾಧಾನ ಮೂಡಿಸಿದೆ. ಆದರೆ, ಪುನಃ ಲಾಕ್‌ಡೌನ್ ಮಾಡುವ ಕುರಿತು ಜಿಲ್ಲಾಡಳಿತ ಇನ್ನೂ ನಿರ್ಧರಿಸಿಲ್ಲ.
ಏ.19ರವರೆಗೆ ಒಟ್ಟು 479 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿತ್ತು. ಒಬ್ಬರಲ್ಲಿಯೂ ಸೋಂಕು ಪತ್ತೆಯಾಗಿರಲಿಲ್ಲ. ಅಲ್ಲದೆ ದುಬೈನಿಂದ ಹಿಂತಿರುಗಿದ್ದ 71 ಜನರನ್ನು ಪ್ರತ್ಯೇಕವಾಗಿರಿಸಿ ನಿಗಾ ವಹಿಸಲಾಗಿತ್ತು ಅವರಲ್ಲಿಯೂ ಸೋಂಕು ಕಂಡುಬರಲಿಲ್ಲ. ಮೇ, ಜೂನ್ ತಿಂಗಳಲ್ಲಿ ಮಹಾರಾಷ್ಟ್ರದದಿಂದ ಜಿಲ್ಲೆಗೆ ಹಿಂತಿರುಗಿದವರಲ್ಲಿ ಸೋಂಕು ಪತ್ತೆಯಾಗಲಾರಂಭಿಸಿತು. ಜುಲೈನಲ್ಲಿ ಜಿಲ್ಲೆಯಲ್ಲಿ ಸಕಾರಾತ್ಮಕ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗುತ್ತಿದ್ದು ಇದೀಗ ಜಿಲ್ಲೆಯಲ್ಲಿ 1,288 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಸೋಂಕು ವ್ಯಾಪಕವಾಗಿ ಸಮುದಾಯಕ್ಕೆ ಹರಡುತ್ತಿರುವುದು ಕಂಡು ಬರುತ್ತಿದೆ. ಸೋಂಕಿತರ ಸಂಪರ್ಕದಲ್ಲಿದ್ದವರು, ಸಂಪರ್ಕವೇ ಪತ್ತೆಯಾಗದವರು ಹಾಗೂ ಗುಣಲಕ್ಷಣ ಇರದ ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಈವರೆಗೆ ಜಿಲ್ಲಾಡಳಿತ 29,383 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ತಪಾಸಣೆ ಮಾಡಿದ್ದು, 27 ಸಾವಿರಕ್ಕೂ ಹೆಚ್ಚು ಜನರ ವರದಿ ನೆಗೆಟಿವ್ ಬಂದಿದೆ.
ಜಿಲ್ಲಾ ಕೇಂದ್ರದಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ 250 ಬೆಡ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಜಿಲ್ಲೆಯ ಶಹಾಪುರ, ಸುರಪುರ ತಲಾ 50 ಬೆಡ್ ಹಾಗೂ ಬಂದಳ್ಳಿಯ ಏಕಲವ್ಯ ವಸತಿ ಶಾಲೆಯಲ್ಲಿ 200 ಬೆಡ್ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲಾಗಿದ್ದು ಒಟ್ಟು 400 ಸೋಂಕಿತರನ್ನು ದಾಖಲಿಸಲಾಗಿದೆ.
ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಾಕಷ್ಟು ಸೂಕ್ತ ಕ್ರಮಗಳನ್ನು ವಹಿಸಿದೆ. ಆದರೂ ಸದ್ಯ ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪುತ್ತಿದೆಯೇ ಎನ್ನುವ ಅನುಮಾನ ಕಾಡತೊಡಗಿದೆ. ಸರ್ಕಾರ ಲಾಕ್‌ಡೌನ್ ಕೈಗೊಳ್ಳುವ ನಿರ್ಧಾರವನ್ನು ಪರಿಸ್ಥಿತಿಗನುಗುಣವಾಗಿ ಕ್ರಮ ವಹಿಸಲು ಜಿಲ್ಲಾಡಳಿತಕ್ಕೆ ಹೊಣೆ ಬಿಟ್ಟಿದೆ. ಹೀಗಾಗಿ ಯಾದಗಿರಿಯಲ್ಲಿ ಲಾಕ್‌ಡೌನ್ ಮಾಡುವ ಕುರಿತು ಇನ್ನೂ ನಿರ್ಧರಿಸಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ ತಿಳಿಸಿದ್ದಾರೆ.