ನವದೆಹಲಿ: ಉತ್ತರಪ್ರದೇಶದ ಐದು ನಗರಗಳಲ್ಲಿ ಲಾಕ್ ಡೌನ್ ಜಾರಿಗೊಳಿಸಬೇಕು ಎಂದು ಆದೇಶ ನೀಡಿದ್ದ ಅಲಹಾಬಾದ್ ಹೈಕೋರ್ಟ್ ನ ಆದೇಶಕ್ಕೆ ಸುಪ್ರೀಂಕೋರ್ಟ್ ಮಂಗಳವಾರ(ಏಪ್ರಿಲ್ 20) ತಡೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಪೇಟಿಎಂ ನೊಂದಿಗೆ ಎಲ್ ಐ ಸಿ ಒಪ್ಪಂದ..! ಮುಂದಿನ ಯೋಜನೆ ಏನು..?
ಕೋವಿಡ್ ಹೆಚ್ಚಳವಾಗಿರುವ ಐದು ನಗರಗಳಲ್ಲಿ ಲಾಕ್ ಡೌನ್ ಹೇರಬೇಕೆಂಬ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಉತ್ತರಪ್ರದೇಶ ಸರ್ಕಾರ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಲಕ್ನೋ, ಪ್ರಯಾಗ್ ರಾಜ್, ವಾರಣಾಸಿ, ಕಾನ್ಪುರ್ ಮತ್ತು ಗೋರಖ್ ಪುರ ಸೇರಿದಂತೆ ಐದು ನಗರಗಳಲ್ಲಿ ಏಪ್ರಿಲ್ 26ರವರೆಗೆ ಲಾಕ್ ಡೌನ್ ಜಾರಿಗೊಳಿಸುವಂತೆ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು. ಆದರೆ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ಲಾಕ್ ಡೌನ್ ಜಾರಿಗೆ ನಿರಾಕರಿಸಿತ್ತು.
ಐದು ನಗರಗಳಲ್ಲಿ ಲಾಕ್ ಡೌನ್ ಜಾರಿಗೊಳಿಸಬೇಕೆಂಬ ನ್ಯಾಯಾಲಯದ ಆದೇಶ ಸಮರ್ಪಕವಾದುದಲ್ಲ, ಅಲ್ಲದೇ ಅಲಹಾಬಾದ್ ಹೈಕೋರ್ಟ್ ಆದೇಶ ಉತ್ತರ ಪ್ರದೇಶ ಸರ್ಕಾರದ ಆಡಳಿತವನ್ನು ನಿರ್ಲಕ್ಷಿಸಿದಂತಾಗಿದೆ ಎಂದು ಉತ್ತರಪ್ರದೇಶ ಸರ್ಕಾರ ಸುಪ್ರೀಂನಲ್ಲಿ ವಾದ ಮಂಡಿಸಿದೆ.
ಕೋರ್ಟ್ ಆದೇಶದ ಬಗ್ಗೆ ಗೌರವವಿದೆ. ಆದರೆ ಕೋವಿಡ್ ನಿಯಂತ್ರಣಕ್ಕಾಗಿ ಈಗಾಗಲೇ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹೈಕೋರ್ಟ್ ನೀಡಿರುವ ಆದೇಶದಂತೆ ಈಗಾಗಲೇ ಕೆಲವು ಪ್ರದೇಶಗಳಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ ಎಂದು ಉತ್ತರಪ್ರದೇಶ ಸರ್ಕಾರ ವಾದಿಸಿದೆ.
ಕೋವಿಡ್ ನಂತಹ ವಿಷಮ ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರ್ಕಾರ ತನ್ನದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಇದರಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸಬಾರದು ಎಂದು ಸುಪ್ರೀಂಕೋರ್ಟ್ ಸಿಜೆಐ ಅರವಿಂದ್ ಬೋಬ್ಡೆ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.