ಹಾಸನ: ಜಿಲ್ಲೆ ಹಸಿರುವಲಯ ದಲ್ಲಿದ್ದರೂ ಲಾಕ್‌ಡೌನ್ ಸಂಪೂರ್ಣ ಸಡಿಲಿಕೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಮತ್ತು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಆರ್.ಶ್ರೀನಿವಾಸಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ಜಿಲ್ಲೆಯಲ್ಲಿ ವಾರದಲ್ಲಿ 3 ದಿನ ಅಂದರೆ ಮಂಗಳವಾರ, ಗುರುವಾರ, ಶನಿವಾರ ಮಾತ್ರ ಅಂಗಡಿಗಳು ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ವ್ಯಾಪಾರ ವಹಿವಾಟು ನಡೆಸ ಬೇಕು. ಮೇ 4ರಂದು ಮಾತ್ರ ಅಂಗಡಿಗಳನ್ನು ತೆರೆದು ಸಿದ್ಧತೆ ಮಾಡಿಕೊಳ್ಳಬಹುದು. ಮುಂದಿನ ವಾರದಿಂದ ಮೂರು ದಿನ ಮಾತ್ರ ವಹಿವಾಟು ನಡೆಸಬೇಕು ಎಂದು ಸೂಚಿಸಿದರು.
ವಾರದ ಎಲ್ಲಾ ದಿನ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ. ವಾಹನ ಸಂಚಾರ ಪ್ರತಿದಿನವೂ ಇರುತ್ತದೆ. ಮುಂಜಾಗ್ರತಾ ಕ್ರಮವಾಗಿ ಮೇ 17ರ ವರೆಗೂ ನಿಷೇಧಾಜ್ಞೆ ಮುಂದುವರಿಯಲಿದೆ ಎಂದರು.
ಸಿಟಿಬಸ್, ಆಟೋ ಸಂಚಾರ: ಸೋಮವಾರ ( ಮೇ4) ದಿಂದ ಹಾಸನ ನಗರದಲ್ಲಿ ಪ್ರತಿದಿನವೂ ಸಿಟಿ ಬಸ್ ಸಂಚಾರ, ಆಟೋ ಸಂಚಾರಕ್ಕೆ ಅವಕಾಶವಿದೆ. ಪ್ರಯಾಣಿಕರ ಒತ್ತಡ ಆಧರಿಸಿ ಕೆಎಸ್‌ಆರ್‌ಟಿಸಿ ಬಸ್‌ಗಳ ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಕ್ಕೆ, ತಾಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ಸಂಚರಿಸಲಿವೆ. ಬಸ್‌ಗಳಲ್ಲಿ ನಿಗದಿತ ಸಂಖ್ಯೆ ಶೇ.50 ರಷ್ಟು ಪ್ರಯಾಣಿಕರು ಮಾತ್ರ ಸಂಚರಿ ಸುವುದು ಕಡ್ಡಾಯ ಎಂದರು.
ಅಂತರ ಕಾಯ್ದುಕೊಳ್ಳದಿದ್ದರೆ ಕ್ರಮ: ಜವಳಿ ಅಂಗಡಿ, ಚಿನ್ನ-ಬೆಳ್ಳಿ ಅಂಗಡಿ, ಸಲೂನ್ ಸೇರಿ ದಂತೆ ಎಲ್ಲಾ ವಹಿವಾಟುಗಳೂ ವಾರದಲ್ಲಿ 3 ದಿನ ಮಾತ್ರ ಇರುತ್ತವೆ. ಮದ್ಯದಂಗಡಿಗಳೂ ವಾರದಲ್ಲಿ ಮೂರು ದಿನ ಬೆಳಗ್ಗೆ 9 ರಿಂದ ಸಂಜೆ 7 ಗಂಟೆವರೆಗೆ ವಹಿವಾಟು ನಡೆಸಬೇಕು. ಎಲ್ಲ ವರ್ತಕರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಎಲ್ಲಾ ಅಂಗಡಿಗಳ ವ್ಯಾಪಾರಿಗಳೂ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಮದುವೆ ಸಮಾರಂಭದಲ್ಲಿ 50 ಜನರಿಗಿಂತ ಹೆಚ್ಚು ಜನರು ಸೇರುವಂತಿಲ್ಲ. ಮದುವೆ ನಡೆಸುವ ಸ್ಥಳ ಸೇರಿದಂತೆ ಕಾರ್ಯಕ್ರಮಕ್ಕೆ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಅಂತ್ಯಕ್ರಿಯೆಯಲ್ಲಿ 20 ಜನರು ಭಾಗವಹಿಸಲು ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ 5 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯಿಂದ ಹೊರ ಹೋಗುವವರು ಮೊದಲೇ ನೋಂದಾಯಿಸಿಕೊಳ್ಳುವುದು ಕಡ್ಡಾಯ. ಸ್ವಂತ ವಾಹನದಲ್ಲಿ ಹೊರ ಜಿಲ್ಲೆಗೆ ಹೋಗುವವರು ವಾಹನದ ನೋಂದಣಿ ಸಂಖ್ಯೆ ನಮೂದಿಸಿ ಪಾಸ್ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಗಿರೀಶ್ ಸ್ಪಷ್ಟಪಡಿಸಿದರು.