ಹಾವೇರಿ: ರಾಜ್ಯದ ಸಮ್ಮಿಶ್ರ ಸರ್ಕಾರ ರೈತರಿಗಾಗಿ ಘೋಷಿಸಿದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಎರಡು ಲಕ್ಷ ರೂ. ವರೆಗಿನ ಸಾಲಮನ್ನಾ ಯೋಜನೆಯ ಲಾಭ ಜಿಲ್ಲೆಯ ಎಲ್ಲ ರೈತರಿಗೆ ಸಿಗದೆ ಸಾಲಮನ್ನಾ ಇನ್ನೂ ಮರೀಚಿಕೆಯಾಗಿದೆ.
ಜಿಲ್ಲೆಯಲ್ಲಿ ಒಟ್ಟು 1.12 ಲಕ್ಷ ರೈತರು ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದಾರೆ. ಸರ್ಕಾರದ ಎರಡು ಲಕ್ಷ ರೂ. ಸಾಲಮನ್ನಾ ಯೋಜನೆಯಡಿ ಜಿಲ್ಲೆಯಲ್ಲಿ ರೈತರ 2025 ಕೋಟಿ ರೂ. ಸಾಲಮನ್ನಾ ಆಗಬೇಕಿತ್ತು. ಆದರೆ, ಈ ವರೆಗೆ ಕೇವಲ 425 ಕೋಟಿ ರೂ.ಗಳಷ್ಟು ಮಾತ್ರ ಆಗಿದೆ.
ಹಿರೇಕೆರೂರು ತಾಲೂಕಿನಲ್ಲಿ 21454, ಹಾವೇರಿ ತಾಲೂಕಿನಲ್ಲಿ 20692, ಹಾನಗಲ್ಲ ತಾಲೂಕಿನಲ್ಲಿ 19924, ರಾಣಿಬೆನ್ನೂರಿನಲ್ಲಿ 17,949, ಶಿಗ್ಗಾವಿ ತಾಲೂಕಿನಲ್ಲಿ 13,419, ಸವಣೂರು ತಾಲೂಕಿನಲ್ಲಿ 10,676, ಬ್ಯಾಡಗಿ ತಾಲೂಕಿನಲ್ಲಿ 7609 ರೈತರು ರಾಷ್ಟ್ರಿಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದಾರೆ.
ರೈತರಿಂದ ಘೋಷಣಾ ಪತ್ರ, ಆಧಾರ್ ಕಾರ್ಡ್, ಪಡಿತರಚೀಟಿ, ಹಿಡುವಳಿಯ ಸರ್ವೇ ಕ್ರಮಾಂಕ ಸೇರಿದಂತೆ ಇನ್ನಿತರ ಅಗತ್ಯ ದಾಖಲೆಗಳನ್ನು ರೈತರು ಹಗಲು-ರಾತ್ರಿ ಸರದಿಯಲ್ಲಿ ನಿಂತು ಬ್ಯಾಂಕ್‌ಗಳಿಗೆ ನೀಡಿದ್ದಾರೆ. ಇನ್ನು ಜಿಲ್ಲಾಡಳಿತವೂ ಸಹ ಆಂದೋಲನ ರೀತಿಯಲ್ಲಿ ದಾಖಲೆ ಸಂಗ್ರಹ ಮಾಡಿ ಯೋಜನೆಯ ಲಾಭ ದೊರಕಿಸುವ ವ್ಯವಸ್ಥೆಯೂ ಮಾಡಿದೆ. ಸಾಲಮನ್ನಾಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದರೂ ಎಲ್ಲ ರೈತರ ಖಾತೆಗೆ ಸಾಲಮನ್ನಾದ ಹಣ ಈವರೆಗೂ ಜಮೆಯಾಗದೆ ಇರುವುದು ಅನ್ನದಾತರದಲ್ಲಿ ಬೇಸರ ಮೂಡಿಸಿದೆ.
ಸಹಕಾರಿಯಲ್ಲೂ ಸಮಸ್ಯೆ: ಸಹಕಾರಿ ಸಂಘಗಳ 21621 ರೈತರಿಗೆ 70.58ಕೋಟಿ ರೂ. ಸಾಲ ಮನ್ನಾ ಹಣ ಬರಬೇಕಿತ್ತು. ಅದರಲ್ಲೂ 25ಕೋಟಿಯಷ್ಟು ಹಣ ಬಾಕಿ ಉಳಿದುಕೊಂಡಿದೆ. ರೈತರು ಬ್ಯಾಂಕ್‌ಗೆ ಹೋಗಿ ವಿಚಾರಿಸಿದರೆ ‘ಸರ್ಕಾರದಿಂದ ಇನ್ನೂ ಹಣ ಬಂದಿಲ್ಲ’ ಎಂಬ ಉತ್ತರ ಬ್ಯಾಂಕ್ ಅಧಿಕಾರಿಗಳಿಂದ ಬರುತ್ತಿದೆ. ರೈತರ ಸಾಲಮನ್ನಾವೂ ಆಗದೇ ಹೊಸ ಸಾಲವೂ ಸಿಗದೇ ಬರದಲ್ಲಿ ಬಳಲಿರುವ ರೈತರು ಇನ್ನಷ್ಟು ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ.
ಕಳೆದ ಬೇಸಿಗೆಯಲ್ಲಿ ನಡೆದ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಹೆಸರಲ್ಲಿ ಸಾಲಮನ್ನಾ ಹಣ ಹಾಕಲು ವಿಳಂಬ ಮಾಡಿದ ಅಧಿಕಾರಿಗಳು, ಕೆಲವರ ಖಾತೆಗೆ ಹಣ ಹಾಕಿ ಮತ್ತೆ ವಾಪಸ್ ಪಡೆದಿದ್ದಾರೆ. ಕೆಲವರ ಖಾತೆಗೆ 20ಸಾವಿರ,, 50 ಸಾವಿರ ರೂ. ಹೀಗೆ ಒಂದೊಂದು ರೀತಿಯ ಮೊತ್ತ ಹಾಕಿದ್ದಾರೆ. ಯಾವ ರೈತರಿಗೆ ಎಷ್ಟು ಹಾಕಲಾಗಿದೆ. ಇನ್ನು ಹಲವರಿಗೆ ಒಂದು ಪೈಸೆಯೂ ಕೊಟ್ಟಿಲ್ಲ. ಏಕೆ ಕೊಟ್ಟಿಲ್ಲ ಎಂಬುದು ಸೇರಿದಂತೆ ಯಾವ ಮಾಹಿತಿಯೂ ರೈತರಿಗೆ ಇಲ್ಲದಂತಾಗಿದೆ. ಒಟ್ಟಾರೆ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಸಾಲಮನ್ನಾ ರೈತರ ಪಾಲಿಗೆ ಇನ್ನೂ ಕನ್ನಡಿಯೊಳಗಿನ ಗಂಟಾಗಿ ಪರಿಣಮಿಸಿದೆ.
•ಎಚ್.ಕೆ. ನಟರಾಜ