ಸಿರುಗುಪ್ಪ: ಗಡಿಗ್ರಾಮ ಇಟಿಗಿಹಾಳ್ ಗ್ರಾಮದಲ್ಲಿ ಮದ್ಯ ಮಾರಾಟಕ್ಕೆ ಎಂದಿಗೂ ಅನುಮತಿ ನೀಡುವುದಿಲ್ಲ. ಇಲ್ಲಿ ಮದ್ಯ ಮಾರಾಟ ಮಾಡಿದರೆ ಅಧಿಕಾರಿಗಳು ಪ್ರಕರಣ ದಾಖಲಿಸುತ್ತಾರೆ ಎಂದು ಶಾಸಕ ಎಂ.ಎಸ್. ಸೋಮಲಿಂಗಪ್ಪ ತಿಳಿಸಿದರು.
ತಾಲೂಕಿನ ಇಟಿಗಿಹಾಳು ಗ್ರಾಮದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಗ್ರಾಮವನ್ನು ಮದ್ಯಮುಕ್ತ ಮಾಡಲು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಗಡಿಭಾಗದ ಈ ಗ್ರಾಮದಲ್ಲಿ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲಾಗುವುದು. ಇಲ್ಲಿರುವ ಕನ್ನಡಿಗರ ಮನಸ್ಸಿನಲ್ಲಿ ಕನ್ನಡತನ ಉಳಿದಿರುವುದು ಸಂತಸದ ಸಂಗತಿಯಾಗಿದೆ. ಗ್ರಾಮದ ಅಭಿವೃದ್ಧಿಗೆ ಬೇಕಾದ ಅನುದಾನ ಬಿಡುಗಡೆ ಮಾಡಲಾಗುವುದು. ಸಿ.ಸಿ.ರಸ್ತೆ, ಚರಂಡಿ ನಿರ್ಮಾಣ, ಶಾಲಾ ಕೊಠಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ.
ನಾಡಂಗ ಗ್ರಾಮದಲ್ಲಿ ಹೊಸ ಆಸ್ಪತ್ರೆ ನಿರ್ಮಾಣ ಮಾಡಬೇಕೆಂದು ಬಿ.ಎಂ. ಸೂಗೂರು, ಗ್ರಾಪಂ ಅಧ್ಯಕ್ಷೆ ಹುಸೇನಮ್ಮ ಮನವಿ ನೀಡಿದ್ದಾರೆ. ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದರು. ತಹಶೀಲ್ದಾರ್ ಎನ್.ಆರ್. ಮಂಜುನಾಥಸ್ವಾಮಿ ಮಾತನಾಡಿ ಕಂದಾಯ ಇಲಾಖೆಗೆ 22 ಅರ್ಜಿಗಳು ಬಂದಿದ್ದು, ಇದರಲ್ಲಿ 9 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ. ಗ್ರಾಪಂಗೆ ಸಂಬಂಧಿಸಿದಂತೆ 23 ಅರ್ಜಿಗಳು, ಭೂಮಾಪನ ಇಲಾಖೆಗೆ ಒಂದು ಅರ್ಜಿ, ಶಿಕ್ಷಣ ಇಲಾಖೆಗೆ ಒಂದು ಅರ್ಜಿ ಬಂದಿದೆ ಎಂದು ಹೇಳಿದರು.
ತಹಶೀಲ್ದಾರ್ ಎನ್.ಆರ್. ಮಂಜುನಾಥಸ್ವಾಮಿ ಗ್ರಾಮದಲ್ಲಿ ಸಂಚರಿಸಿ ಸಾರ್ವಜನಿಕರನ್ನು ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಖುದ್ದಾಗಿ ಆಲಿಸಿದರು. ಅಲ್ಲದೆ ಗ್ರಾಮದಲ್ಲಿರುವ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿಕೊಂಡರು. ಸಿಡಿಪಿಒ ಇಲಾಖೆ ವತಿಯಿಂದ ಶಾಲಾ ಪೂರ್ವ ಶಿಕ್ಷಣ ಹಾಗೂ ಪೋಷಣ್ ಅಭಿಯಾನ ಯೋಜನೆಯಡಿ ಪೌಷ್ಠಿಕ ಆಹಾರ ಮೇಳ ನಡೆಯಿತು. ಮೇಳದಲ್ಲಿ ಪೌಷ್ಠಿಕ ಆಹಾರ, ದವಸ ಧಾನ್ಯ ಮತ್ತು ತರಕಾರಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ವಸತಿ ಯೋಜನೆ, ನಿವೇಶನ, ಸರ್ಕಾರಿ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ, ತೋಟಗಾರಿಕೆ, ಕಂದಾಯ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಕೌಂಟರ್‌ಗಳನ್ನು ತೆರೆಯಲಾಗಿತ್ತು.
ಗ್ರಾಪಂ ಅಧ್ಯಕ್ಷೆ ಹುಸೇನಮ್ಮ, ತಾಲೂಕು ಅಧಿಕಾರಿಗಳಾದ ನಜೀರ್ ಅಹಮ್ಮದ್, ಎಂ.ಸಿದ್ದಯ್ಯ, ಎ.ಗಾದಿಲಿಂಗಪ್ಪ, ಜಲಾಲಪ್ಪ, ಪರಮೇಶ್ವರ, ಕೀರ್ತನಾ, ಡಾ| ಈರಣ್ಣ, ಉಪತಹಶೀಲ್ದಾರ್ ಸಿದ್ದಲಿಂಗಯ್ಯಸ್ವಾಮಿ, ಕಂದಾಯ ಅಧಿಕಾರಿ ಬಸವರಾಜು, ಗ್ರಾಮಲೆಕ್ಕಾಧಿಕಾರಿ ಸಿದ್ದಪ್ಪ ಪೂಜಾರಿ, ವಿಶ್ವನಾಥ, ರಾಜಕುಮಾರ್, ಮುಖಂಡ ಮಲ್ಲಿಕಾರ್ಜುನರೆಡ್ಡಿ ಮತ್ತು ಗ್ರಾಮಸ್ಥರು ಇದ್ದರು.