Advertisement

ವಲಸೆ ಹಕ್ಕಿಗಳಿಂದ ಕೊರೊನಾ ಬಂದಿಲ್ಲ ; ಕೇಂದ್ರ ಸಚಿವ ಜಾವಡೇಕರ್‌ ಸ್ಪಷ್ಟನೆ

09:57 AM Feb 12, 2020 | Hari Prasad |

ಬೀಜಿಂಗ್‌/ನವದೆಹಲಿ: “ಕೊರೊನಾ ವೈರಸ್‌ ಬಗ್ಗೆ ವಿನಾಕಾರಣ ಭಯ ಸೃಷ್ಟಿಸಲಾಗುತ್ತಿದೆ. ವಲಸೆ ಹಕ್ಕಿಗಳಿಗೂ ಕೊರೊನಾಗೂ ಸಂಬಂಧವಿಲ್ಲ. ವಲಸೆ ಹಕ್ಕಿಗಳಿಂದಾಗಿಯೂ ವೈರಸ್‌ ಹಬ್ಬುತ್ತಿದೆ ಎಂಬ ವಾದ ಸರಿಯಲ್ಲ’ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಸ್ಪಷ್ಟಪಡಿಸಿದ್ದಾರೆ.

Advertisement

ಇನ್ನು ಸಂಸತ್‌ನಲ್ಲಿ ಈ ಕುರಿತು ಹೇಳಿಕೆ ನೀಡಿರುವ ಆರೋಗ್ಯ ಸಚಿವ ಹರ್ಷವರ್ಧನ್‌, “ಕೊರೊನಾವೈರಸ್‌ ಅನ್ನು ಎದುರಿಸಲು ಭಾರತ ಶಕ್ತವಾಗಿದೆ ಮತ್ತು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾರೂ ಭಯಪಡಬೇಕಾದ ಅಗತ್ಯವಿಲ್ಲ’ ಎಂದಿದ್ದಾರೆ.

ಈ ನಡುವೆ, ವೈರಸ್‌ ಅನ್ನು ಎದುರಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಪತ್ರ ಬರೆದ ಪ್ರಧಾನಿ ಮೋದಿ ಬಗ್ಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೋದಿಯವರ ಭರವಸೆ ತುಂಬಿದ ಪತ್ರವು ಬೀಜಿಂಗ್‌ ಜತೆ ನವದೆಹಲಿಗೆ ಇರುವ ಸಂಬಂಧವನ್ನು ಗಟ್ಟಿಗೊಳಿಸಿದೆ ಎಂದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಕೊರೊನಾ ವ್ಯಾಪಿಸುತ್ತಿರುವ ಕುರಿತು ವರದಿ ಮಾಡುತ್ತಿದ್ದ ವುಹಾನ್‌ನ ಸಿಟಿಜನ್‌ ಜರ್ನಲಿಸ್ಟ್‌ (ನಾಗರಿಕ ಪತ್ರಕರ್ತ) ಗುರುವಾರದಿಂದ ನಾಪತ್ತೆಯಾಗಿದ್ದಾರೆ.

ಪತ್ತೆಗೆ ಆ್ಯಪ್‌
ಕೊರೊನಾಗೆ ತತ್ತರಿಸಿರುವ ಚೀನಾ ಈಗ ಹೊಸ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಿದೆ. “ಕ್ಲೋಸ್‌ ಕಾಂಟ್ಯಾಕ್ಟ್ ಡಿಟೆಕ್ಟರ್‌’ ಎಂಬ ಹೆಸರಿನ ಮೊಬೈಲ್‌ ಆ್ಯಪ್‌, ನೀವು ಕೊರೊನಾ ಸೋಂಕು ತಗಲುವ ರಿಸ್ಕ್ ಹೊಂದಿದ್ದೀರಾ ಎಂಬ ಬಗ್ಗೆ ಮಾಹಿತಿ ನೀಡುತ್ತದೆ. ಬಳಕೆದಾರರು ಅಲಿಪೇ, ವೀಚಾಟ್‌ ಅಥವಾ ಕ್ಯೂಕ್ಯೂ ಮುಂತಾದ ಮೊಬೈಲ್‌ ಆ್ಯಪ್‌ ಮೂಲಕ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಬೇಕು.

ಪೋನ್‌ ನಂಬರ್‌ ನೋಂದಣಿ ಮಾಡಿಕೊಂಡ ನಂತರ, ತಮ್ಮ ಹೆಸರು ಮತ್ತು ಐಡಿ ಸಂಖ್ಯೆ ನಮೂದಿಸಬೇಕು. ಆಗ, ಯಾರಾ ದರೂ ಸೋಂಕಿತರೊಂದಿಗೆ ನಿಮ್ಮ ಸಂಪರ್ಕ ಆಗಿದೆಯೇ, ನಿಮಗೂ ವೈರಸ್‌ ತಗುಲುವ ರಿಸ್ಕ್ ಇದೆಯೇ ಎಂಬ ಮಾಹಿತಿ ಸಿಗುತ್ತದೆ ಎಂದು ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next