Advertisement

ಮಳೆಯಿಂದ ಹಾನಿಯಾದವರಿಗೆ ಪರಿಹಾರ ವಿತರಣೆಯಲ್ಲಿ ಲೋಪ ಸಲ್ಲದು: ಸಿಎಂ ಬೊಮ್ಮಾಯಿ ಸೂಚನೆ

12:34 PM Oct 13, 2022 | Team Udayavani |

ಹೊಸಪೇಟೆ: ರಾಜ್ಯದಲ್ಲಿ ಹಿಂದೆಂದಿಗಿಂತ ಹೆಚ್ಚಿನ ಮಳೆಯಾಗುತ್ತಿದ್ದು, ಜಿಲ್ಲಾಧಿಕಾರಿಗಳು ಕಟ್ಟೆಚ್ಚರಿಕೆ ವಹಿಸಬೇಕು. ಮಳೆ ಹಾನಿ ಸಂಭವಿಸಿದ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಹಾರ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ದೇಶನ ನೀಡಿದರು.

Advertisement

ಹೊಸಪೇಟೆಯಿಂದ ಮಳೆಹಾನಿ ಸಂಭವಿಸಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಪರಿಹಾರ ಕ್ರಮಗಳ ಪರಿಶೀಲನೆ ನಡೆಸಿದರು. ಮನೆಗಳಿಗೆ ಸಂಬಂಧಿಸಿದ ಹಾನಿಯನ್ನು ದಾಖಲಿಸುವ ಹಂತದಲ್ಲಿಯೇ ಕೆಲವೆಡೆ ಲೋಪಗಳಾಗುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಲೋಪವಾಗದಂತೆ ಜಿಲ್ಲಾಧಿಕಾರಿಗಳು ಖುದ್ದು ಮೇಲ್ವಿಚಾರಣೆ ವಹಿಸಬೇಕು. ವಸ್ತುಸ್ಥಿತಿ ಆಧರಿಸಿ, ಪರಿಹಾರ ಕೋರಿ ಬಂದ ಮನವಿಗಳನ್ನು ದಾಖಲಿಸಬೇಕು. ಕರ್ತವ್ಯ ಲೋಪ ಎಸಗಿದ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಮನೆ ಹಾನಿಗೆ ಸಂಬಂಧಿಸಿದಂತೆ ಎನ್ ಡಿಆರ್ ಎಫ್ ಮಾರ್ಗಸೂಚಿಗಿಂತ ಹೆಚ್ಚುವರಿ ಪರಿಹಾರ ವಿತರಣೆಗೆ ಸುತ್ತೋಲೆ ಹೊರಡಿಸುವಂತೆ ವಿಪತ್ತು ನಿರ್ವಹಣೆ ಆಯುಕ್ತರಿಗೆ ಸೂಚನೆ ನೀಡಿದರು.

ಮಳೆಹಾನಿಯಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ, ಪರಿಹಾರ ವಿತರಣೆ, ಮಾಹಿತಿ ದಾಖಲಿಸುವಲ್ಲಿ ಲೋಪಗಳಾಗದಂತೆ ತಹಸೀಲ್ದಾರರಿಗೆ ಮಾರ್ಗಸೂಚಿ ನೀಡಬೇಕು. ಬೆಳೆಹಾನಿ ಪರಿಹಾರ ವಿತರಣೆಯನ್ನೂ ತ್ವರಿತವಾಗಿ ವಿತರಿಸಬೇಕು. ಅಕ್ಟೋಬರ್ ತಿಂಗಳಿನಲ್ಲಿ ಸಂಭವಿಸಿದ ಬೆಳೆಹಾನಿಯನ್ನು ಸಹ ಕೂಡಲೇ ಜಂಟಿ ಸಮೀಕ್ಷೆ ನಡೆಸಿ, ಈ ತಿಂಗಳೊಳಗೆ ಪರಿಹಾರ ವಿತರಿಸಲು ಸೂಚನೆ ನೀಡಲಾಯಿತು.

ಮೂಲಸೌಲಭ್ಯ ಹಾನಿ ವರ್ಗೀಕರಣ: ಮೂಲಸೌಲಭ್ಯ ಹಾನಿಗೆ ಸಂಬಂಧಿಸಿದಂತೆ ಹಾನಿಯ ತೀವ್ರತೆಯನ್ನು ಆಧರಿಸಿ, ಸಿ ವರ್ಗ- ಎನ್ ಡಿಆರ್ ಎಫ್ ಮಾರ್ಗಸೂಚಿಯನ್ವಯ ದುರಸ್ತಿ, ಬಿ ವರ್ಗ- ಸರ್ಕಾರದಿಂದ ಹೆಚ್ಚುವರಿ ನೆರವು ಅಗತ್ಯವಿರುವ ಕಾಮಗಾರಿಗಳು, ಎ- ಸಂಪೂರ್ಣ ಪುನರ್ ನಿರ್ಮಾಣ ಅಗತ್ಯವಿರುವ ಕಾಮಗಾರಿಗಳು- ಎಂದು ಗುರುತಿಸಿ, ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಲಾಯಿತು. ಕೆರೆಗಳು ಒಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಸಹ ಸೂಚನೆ ನೀಡಿದರು. ಕೆರೆಗಳು ದುರ್ಬಲವಾಗಿರುವುದು, ನೀರಿನ ಒತ್ತಡ ಹೆಚ್ಚಿರುವ ಸೂಕ್ಷ್ಮ ಪರಿಸ್ಥಿತಿಯನ್ನು ಅವಲೋಕಿಸಿ, ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು. ಸೇತುವೆಗಳ ನಿರ್ಮಾಣದ ವಿಷಯದಲ್ಲಿಯೂ ಆದ್ಯತೆಯನ್ನು ಗುರುತಿಸಿ, ಅದರಂತೆ ದುರಸ್ತಿ, ಮರುನಿರ್ಮಾಣ ಮಾಡಬೇಕು ಎಂದರು.

Advertisement

ದಿಢೀರ್ ಪ್ರವಾಹ ಉಂಟಾಗುವ ಹೊಳೆ, ಹಳ್ಳಗಳ ವ್ಯಾಪ್ತಿಯಲ್ಲಿ ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ಮಳೆಯಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದರು.

ಅನುದಾನ ಕೊರತೆ ಇಲ್ಲ: ಬೆಳೆಹಾನಿ ಹಾಗೂ ಮನೆಹಾನಿಗೆ ಪರಿಹಾರ ನೀಡಲು ಅನುದಾನದ ಕೊರತೆ ಇಲ್ಲ. ಮೂಲಸೌಕರ್ಯ ಹಾನಿಗೆ ಬಿಡುಗಡೆ ಮಾಡಲಾದ ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸಿ, ಅನುಷ್ಠಾನಗೊಳಿಸುವಂತೆ ಸೂಚಿಸಲಾಯಿತು. ಮೂಲಸೌಕರ್ಯ ಹಾನಿಗೆ ಸಂಬಂಧಿಸಿದಂತೆ ಮೂರು ದಿನಗಳ ನಂತರ ಮತ್ತೊಮ್ಮೆ ಸಭೆ ನಡೆಸಿ ಚರ್ಚಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಮುಖ್ಯಮಂತ್ರಿಯವರೊಂದಿಗೆ ಉಪಸ್ಥಿತರಿದ್ದರು. ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರು, ಸರ್ಕಾರದ ಹಿರಿಯ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next