Advertisement

ಅಮಾಯಕರ ಬಂಧನ ಬೇಡ

05:20 PM Dec 21, 2017 | Team Udayavani |

ಶಿರಸಿ: “ರಾತ್ರಿ ವೇಳೆ ಬಂದು ಬೂಟು ಕಾಲಿನಲ್ಲಿ ಬಾಗಿಲು ಒದೆಯುತ್ತಾರೆ. ಅಮಾಯಕರ ಬಂಧನ ಮಾಡುತ್ತಿದ್ದಾರೆ. ರಸ್ತೆಯಲ್ಲಿ ನಡೆದು ಹೋದವರನ್ನೂ ಸಿಸಿಟಿವಿಯಲ್ಲಿ ಬಂದಿದೆ ಎಂದು ಬಂಧನ ಮಾಡುತ್ತಿದ್ದಾರೆ. ಅಮಾಯಕರ ಬಂಧನ ಮಾಡಿದರೆ ನಿಮಗೆ ಚಲೋ ಆಗೋದಿಲ್ಲ’ ನಗರದಲ್ಲಿ ಬುಧವಾರ ಹಿಂದೂಪರ ಸಂಘಟನೆಗಳು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಂಧಿತ ಆರೋಪಿತರ  ತಾಯಂದಿರು ಗದ್ಗದಿತರಾಗಿ ಮಾತನಾಡಿದರು.

Advertisement

ನಗರದಲ್ಲಿ ಅಮಾಯಕರ ಬಂಧನ ಮುಂದುವರಿದಿದೆ. ರಾತ್ರಿ ವೇಳೆಯಲ್ಲಿ ಹೋಗಿ ಪೊಲೀಸರು ಹೆದರಿಸಿ ಬಂಧಿಸುತ್ತಿದ್ದಾರೆ. ಮನ ನೋಯುವ ಶಬ್ದಗಳನ್ನೂ ಆಡುತ್ತಿದ್ದಾರೆ. ನಮ್ಮ ಮನೆಯ ಬಾಗಿಲೂ ಬಿರಕು ಬಂದಿದೆ. ನಾವು ಸುಳ್ಳು ಹೇಳುವುದಾದರೆ ಅಕ್ಕ ಪಕ್ಕದ ಮನೆಯವರನ್ನು ಕೇಳಿ. ಅನ್ನ ಸಾರು ಊಟ ಮಾಡುವವರನ್ನೂ ಬಂಧಿಸುತ್ತಿದ್ದೀರಿ. ಯಾಕೆ ಹೊನ್ನಾವರದಲ್ಲಿ ಕೊಲೆ ಮಾಡಿದ ಆರೋಪಿತರನ್ನು ಬಂಧಿಸುವುದಿಲ್ಲ? ಶಿರಸಿಯಲ್ಲೂ ನಿಜವಾದ ಆರೋಪಿತರನ್ನು ಬಂಧಿಸಿ. ಆದರೆ, ಅಮಾಯಕರಿಗೆ ತೊಂದರೆ ಕೊಟ್ಟರೆ ಸರಿಯೇ ಎಂದು ಕೇಳಿದ ತಾಯಂದಿರು, ಇದೇ ಪರಿಸ್ಥಿತಿ ನಿಮ್ಮ ಕುಟುಂಬದಲ್ಲೂ ಆದರೆ ಏನು ಮಾಡುತ್ತೀರಿ ಎಂದೂ
ಪ್ರಶ್ನಿಸಿದರು.

ನಾವು ಯಾವ ರಾಜಕೀಯ ಪಕ್ಷದವರಲ್ಲ. ಆದರೆ, ಸುಮ್ಮನಿದ್ದವರನ್ನೂ ನೀವು ಬಂಧಿಸಿದ್ದೀರಿ. ನಿಮಗೆ ಅಧಿಕಾರ ಇರಬಹುದು. ಆದರೆ, ನಾವು ಆರಿಸಿ ಕಳಿಸಿದರೆ ಮಾತ್ರ ಸರಕಾರ. ನೀವು ಪ್ರಚಾರ ಮಾಡಿದರೆ ಆಗದು ಎಂದೂ ಭಾವೋದ್ವೇಗದಿಂದ ಮಾತನಾಡಿ ಕಣ್ಣೀರಿಟ್ಟರು. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ನಿಮ್ಮ ಇಲಾಖೆಯ ಗಣಪತಿ, ಬಂಡೆ ಅವರ ಪ್ರಕರಣಕ್ಕೇ ನ್ಯಾಯ ಸಿಕ್ಕಿಲ್ಲ. ಇಲ್ಲಿ ಅಮಾಯಕರನ್ನು ಬಂಧಿಸುತ್ತಿದ್ದೀರಿ. ನಾಳೆ ನಿಮ್ಮ ರಕ್ಷಣೆಗೂ ನಾವೇ ಬೇಕಾದೀತು. ಮಾನವೀಯತೆಯಿದ ವರ್ತಿಸಿ ಎಂದು ಮನವಿ ಮಾಡಿದರು. ಕಾಂಗ್ರೆಸ್‌ ಸರಕಾರದ ಒತ್ತಡದಿಂದ ಹಗಲಲ್ಲಿ, ರಾತ್ರಿಯಲ್ಲಿ ಯಾವಾಗ ಬೇಕಾದರೂ ಬಂಧಿ ಸುತ್ತಿದ್ದೀರಿ. ಮುಗª ಜನರ ಮೇಲೆ 307 ಪ್ರಕರಣ ದಾಖಲಿಸುತ್ತಿದ್ದೀರಿ ಎಂದೂ ವಾಗ್ಧಾಳಿ ನಡೆಸಿದರು. 

ಸಂಘಟನೆ ಪ್ರಮುಖರಾದ ಸೀತಾರಾಮ ಭಟ್ಟ ಕೆರೇಕೈ, ಚಂದ್ರು ಎಸಳೆ, ಗಣಪತಿ ನಾಯ್ಕ, ಆರ್‌.ವಿ. ಹೆಗಡೆ ಚಿಪಗಿ, ಶೋಭಾ ನಾಯ್ಕ, ಉಷಾ ಹೆಗಡೆ, ಗಣೇಶ ಸಣ್ಣಲಿಂಗಣ್ಣವರ್‌, ಮಂಜುನಾಥ ಹೆಗಡೆ ಇತರರು ಇದ್ದರು. ಬಳಿಕ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next