ಒಳ್ಳೆಯ ಚಿತ್ರಕ್ಕೆ ಹಾಗು ಕಣ್ಮನ ಸೆಳೆಯುವ ನೋಟಕ್ಕೆ, ಮೆಲೋಡಿ ಹಾಡಿಗೆ ಜನರು “ಫಿದಾ ಆಗಿದ್ದೇನೆ…’ ಎನ್ನುವುದು ಸಹಜ. ಈಗ ಇದೇ “ಫಿದಾ’ ಎಂಬ ಹೆಸರಲ್ಲಿ ಹೊಸಬರ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ಅಂದಹಾಗೆ, “ಫಿದಾ’ ಚಿತ್ರಕ್ಕೆ “ನಿನ್ನನ್ನು ನೋಡಿ…’ ಎನ್ನುವ ಅಡಿಬರಹವಿದೆ. ಯಾರು, ಯಾರಿಗೆ “ಫಿದಾ’ ಆಗುತ್ತಾರೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು.
ಚಿರಂಜೀವಿ ನಾಯ್ಕ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದಾರೆ. ಇವರಿಗಿದು ಮೊದಲ ಪ್ರಯತ್ನ. ಈಗಾಗಲೇ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಆಡಿಯೋ ಸಿಡಿ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿದೆ. ಆದರೆ ಅಂದು ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ಬಗ್ಗೆ ಯಾವ ವಿಷಯಗಳನ್ನೂ ಹಂಚಿಕೊಂಡಿಲ್ಲ ಎನ್ನುವುದೇ ವಿಶೇಷ!
“ಫಿದಾ’ ಅಂದರೇನು, ಕಥೆ ಏನು, ಚಿತ್ರದಲ್ಲಿ ಏನು ಹೇಳಲು ಹೊರಟಿದ್ದೀರಿ, ಈ ಹಿಂದೆ ಚಿತ್ರ ಮಾಡಿದ ಅನುಭವವಿದೆಯಾ, ಸಿನಿಮಾ ಶುರುವಾಗಿದ್ದು ಯಾವಾಗ, ರಿಲೀಸ್ ಯಾವಾಗ ಮಾಡ್ತೀರಾ? ಹೀಗೆ ಸಾಲು ಸಾಲು ಪ್ರಶ್ನೆಗಳು ತೂರಿಬಂದರೂ ಯಾವೊಂದು ಪ್ರಶ್ನೆಗಳಿಗೂ ಚಿತ್ರತಂಡದ ಬಳಿ ಸ್ಪಷ್ಟ ಉತ್ತರವಿಲ್ಲ!
ಇನ್ನು ಆಡಿಯೋ ಬಿಡುಗಡೆ ವೇಳೆ ಅತಿಥಿಗಳಾಗಿ ಬಂದ ರಾಜಕಾರಣಿಗಳ ಭಾಷಣ, ಇಡೀ ಕಾರ್ಯಕ್ರಮದ ದಿಕ್ಕನ್ನೇ ತಪ್ಪಿಸಿತು. ಆಡಿಯೋ ಬಿಡುಗಡೆ ಸಮಾರಂಭ ಕೊನೆಗೆ, ಬಂದಿದ್ದ ಹಿರಿಯ ರಾಜಕಾರಣಿಗಳಿಗೆ ತಮ್ಮ ಸಾಧನೆ ಬಿಚ್ಚಿಡುವ ವೇದಿಕೆಯಾಯಿತು. ಇದರಿಂದ ಚಿತ್ರತಂಡಕ್ಕೆ ಅತ್ತ ಮಾತನಾಡಲೂ ಆಗದೆ, ಇತ್ತ ಸುಮ್ಮನಿರಲೂ ಆಗದೆ ಸುಮ್ಮನೆ ಕುಳಿತುಕೊಳ್ಳುವಂತಾಯಿತು. ಅಂದಹಾಗೆ, “ಫಿದಾ’ ಚಿತ್ರವನ್ನು ಸಕಲೇಶಪುರ, ಸಾಗರ, ತುಮಕೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಲಾಗಿದ್ದು, ಸದ್ಯ ಚಿತ್ರ ಸೆನ್ಸಾರ್ ಹಂತಕ್ಕೆ ಬಂದಿದೆಯಂತೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಚಿತ್ರವನ್ನು ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡದ್ದು.
ಚಿತ್ರದಲ್ಲಿ ರಾಜ್ ಕೌಶಿಕ್ ಹೀರೋ. ಇವರಿಗೆ ಇಶಾ ನಾಯಕಿ. ಇಬ್ಬರಿಗೂ ಹೊಸ ಅನುಭವ. ಉಳಿದಂತೆ ಚಿತ್ರದಲ್ಲಿ ಬೇರೆ ಯಾವ ಕಲಾವಿದರ ತಾರಾಗಣವಿದೆ, ಚಿತ್ರ ಯಾವಾಗ ತೆರೆಗೆ ಬರುತ್ತದೆ ಎಂಬ ಪ್ರಶ್ನೆಗೆ ಉತ್ತರ ಕೊಡದ ಕಾರಣ, “ಫಿದಾ’ ಬಗ್ಗೆ ಬೇರೆ ಯಾವ ಮಾಹಿತಿಯೂ ಇಲ್ಲ.
ಅದೇನೆಯಿರಲಿ, ಇಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ವ್ಯಾಪ್ತಿ ವಿಸ್ತಾರವಾಗುತ್ತಿದೆ. ಪ್ರತಿವಾರ ಕನಿಷ್ಟ ಎಂದರೂ 4-5 ಚಿತ್ರಗಳು ತೆರೆಗೆ ಬರುತ್ತಿವೆ. ಪ್ರತಿ ವಾರ ಹತ್ತಾರು ಚಿತ್ರಗಳ ಪ್ರಸ್‌ಮೀಟ್, ಆಡಿಯೋ ರಿಲೀಸ್, ಟೀಸರ್-ಟ್ರೇಲರ್ ಲಾಂಚ್ ಅಂತ ಚಟುವಟಿಕೆಗಳು ನಡೆಯುತ್ತಲೇ ಇರುತ್ತದೆ. ಇಂಥ ಪರಿಸ್ಥಿತಿಯಲ್ಲಿ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಪತ್ರಿಕೆಗಳು, ಮಾಧ್ಯಮಗಳ ಮೂಲಕ ತಮ್ಮ ಚಿತ್ರವನ್ನು ಇನ್ನಷ್ಟು ಜನರಿಗೆ ತಲುಪಿಸುವಂತೆ ಮಾಡುವುದು ಬುದ್ದಿವಂತಿಕೆ. ಹೀಗಾಗಿ, ಹೊಸ ತಂಡಗಳು ಮಾಧ್ಯಮ ಮುಂದೆ ಬರುವ ಮುನ್ನ ಒಂದಷ್ಟು ಯೋಚಿಸಿ, ಏನೆಲ್ಲಾ ಹೇಳಬೇಕು, ಹೇಗೆಲ್ಲಾ ಪ್ರಚಾರ ಪಡೆದುಕೊಳ್ಳಬೇಕೆಂಬುದನ್ನು ಅರಿತರೆ, ಸಿನಿಮಾ ಮಾಡಿದ್ದಕ್ಕೂ ಸಾರ್ಥಕ ಆಗಬಹುದೇನೋ?