ಹೊಸದಿಲ್ಲಿ : ದೇಶದ ಉನ್ನತ ಶಿಕ್ಷಣ ರಂಗದಲ್ಲಿ ಮಹತ್ತರ ಸುಧಾರಣೆಗಳು ಆಗಿವೆ; ಆದರೂ ವಿಶ್ವದ 100 ಅಗ್ರ ವಿಶ್ವವಿದ್ಯಾಲಯಗಳಲ್ಲಿ ಭಾರತದ ಒಂದೇ ಒಂದು ವಿಶ್ವವಿದ್ಯಾಲಯ ಸ್ಥಾನ ಪಡೆದಿಲ್ಲ.
ಜಾಗತಿಕ ಉನ್ನತ ಶಿಕ್ಷಣ ಕನ್‌ಸೆಲ್ಟೆನ್ಸಿ ಸಂಸ್ಥೆಯಾಗಿರುವ Quacquarelli Symonds (QS) ಸಿದ್ಧಪಡಿಸಿರುವ ವಿಶ್ವದ ಅಗ್ರ ನೂರು ವಿವಿಗಳಲ್ಲಿ ಭಾರತದ ಒಂದೇ ಒಂದು ವಿವಿ ಇಲ್ಲದಿರುವುದು ಇದೀಗ ಬಹಿರಂಗವಾಗಿದೆ.
ಭಾರತದ ಉನ್ನತ ಶೈಕ್ಷಣಿಕ ಸಂಸ್ಥೆಗಳಾಗಿರುವ ಐಐಟಿ ಬಾಂಬೆ, ಐಐಟಿ ದಿಲ್ಲಿ ಮತ್ತು ಐಐಎಸ್‌ಸಿ ಬೆಂಗಳೂರು ವಿಶ್ವದ ಮೊದಲ 200 ವಿವಿಗಳಲ್ಲಿ ಸ್ಥಾನ ಪಡೆದಿದೆ. ಆ ಪ್ರಕಾರ ಐಐಟಿ ಬಾಂಬೆ 152ನೇ ಸ್ಥಾನ ಮತ್ತು ಐಐಟಿ ದಿಲ್ಲಿ 182ನೇ ಸ್ಥಾನ ಪಡೆದಿವೆ.
ಕಳೆದ ವರ್ಷಕ್ಕೆ ಹೋಲಿಸಿದಾಗ, Quacquarelli Symonds (QS) ಸಿದ್ಧಪಡಿಸಿರುವ 16ನೇ ಆವೃತ್ತಿಯ ವಿಶ್ವ ವಿವಿ ರಾಂಕಿಂಗ್ ಪಟ್ಟಿಯಲ್ಲಿ ಭಾರತದ 23 ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ನಾಲ್ಕು ಸಂಸ್ಥೆಗಳು ತಮ್ಮ ಕ್ರಮಾಂಕವನ್ನು ಸುಧಾರಿಸಿವೆ; ಆದರೆ ಅದೇ ವೇಳೆ ಏಳು ಶಿಕ್ಷಣ ಸಂಸ್ಥೆಗಳು ಪಟ್ಟಿಯಿಂದ ಹೊರಬಿದ್ದಿವೆ.
ಶಿಕ್ಷಕ ವೃಂದದ ಗಾತ್ರಕ್ಕೆ ಅನುಗುಣವಾಗಿ ಸಂಶೋಧನ ರಂಗದಲ್ಲಿ ಬೆಂಗಳೂರಿನ ಐಐಎಸ್‌ಸಿ ನೂರರಲ್ಲಿ ನೂರು ಅಂಕ ಗಳಿಸುವ ಮೂಲಕ ವಿಶ್ವದ ಎರಡನೇ ಶ್ರೇಷ್ಠತಾ ಸಂಸ್ಥೆ ಎಂಬ ಸ್ಥಾನವನ್ನು ಪಡೆದಿದೆ.