ಹೊಸದಿಲ್ಲಿ : ಅತ್ಯಂತ ಕಠೊರವಾಗಿರುವ, ಸರಕಾರಿ ನೌಕರರ ವಿರುದ್ಧದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ (ಎಸ್‌ಸಿ, ಎಸ್‌ಟಿ) ದವರ ಮೇಲಿನ ದೌರ್ಜನ್ಯ ತಡೆ ಕಾಯಿದೆಯ ವ್ಯಾಪಕ ದುರುಪಯೋಗ ನಡೆಯುತ್ತಿರುವುದನ್ನು ಗಮನಕ್ಕೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ಈ ಕಾಯಿದೆಯಡಿ ಯಾವುದೇ ದೂರು ದಾಖಲಾದೊಡನೆಯೇ ಸರಕಾರಿ ನೌಕರರನ್ನುಬಂಧಿಸಕೂಡದು ಎಂದು ಇಂದು ಮಂಗಳವಾರ ಅತ್ಯಂತ ಮಹತ್ವದ ತೀರ್ಪು ನೀಡಿದೆ.
ಎಸ್‌ಸಿ ಎಸ್‌ಟಿ ಕಾಯಿದೆಯಡಿ ಯಾವುದೇ ಸರಕಾರಿ ನೌಕರನನ್ನು ಬಂಧಿಸುವ ಮುನ್ನ ಡೆಪ್ಯುಟಿ ಪೊಲೀಸ್ ಸುಪರಿಂಟೆಂಡೆಂಟ್ ಮಟ್ಟದಲ್ಲಿ ತನಿಖೆ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಆದರ್ಶ್ ಗೋಯಲ್ ಮತ್ತು ಯು ಯು ಲಲಿತ್ ಅವರನ್ನು ಒಳಗೊಂಡ ಪೀಠವು “ಈ ಕಠಿನ ಕಾಯಿದೆಯಡಿ ಸರಕಾರಿ ನೌಕರರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವುದಕ್ಕೆ ಯಾವುದೇ ಸಾರಾಸಗಟು ನಿರ್ಬಂಧವಿಲ್ಲ’ ಎಂದು ಹೇಳಿತು.
ಅರ್ಹ ಅಧಿಕಾರಿಯಿಂದ ಪೂರ್ವಾನುಮತಿ ಪಡೆದ ಬಳಿಕವೇ ಎಸ್‌ಸಿ/ಎಸ್‌ಟಿ ಕಾಯಿದೆಯಡಿ ಸರಕಾರಿ ನೌಕರನೋರ್ವನನ್ನು ಬಂಧಿಸಬಹುದಾಗಿದೆ ಎಂದು ಹೇಳಿರುವ ಪೀಠ, ಈ ದಿಶೆಯಲ್ಲಿ ಇನ್ನೂ ಹಲವಾರು ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ.