Advertisement

ಈ ಊರಿಗೆ 2 ಸಂಸದರು, 2 ಶಾಸಕರು : ಆಸ್ಪತ್ರೆಗೆ ಹೋಗಬೇಕಾದರೆ 25 ಕಿ.ಮೀ. ಸಂಚರಿಸಬೇಕು!

01:53 AM Apr 20, 2021 | Team Udayavani |

ಕುಂದಾಪುರ: ಈ ಪಂಚಾಯತ್‌ ಎರಡು ಲೋಕಸಭಾ ಕ್ಷೇತ್ರ, ಎರಡು ವಿಧಾನಸಭಾ ಕ್ಷೇತ್ರ, ಇಬ್ಬರು ಸಂಸದರು, ಇಬ್ಬರು ಶಾಸಕರ ವ್ಯಾಪ್ತಿಯಲ್ಲಿ ಬರುತ್ತದೆ. ಆದ್ದರಿಂದ ಊರು ಸರ್ವ ಸೌಲಭ್ಯಗಳನ್ನೂ ಹೊಂದಿರಬೇಕಿತ್ತು. ಆದರೆ ಇಲ್ಲಿನ ಜನರಿಗೆ ಏನಾದರೂ ಅನಾರೋಗ್ಯ ತಲೆದೋರಿದರೆ ತುರ್ತು ಚಿಕಿತ್ಸೆಗೆ 20-25 ಕಿ.ಮೀ. ದೂರ ಬರಬೇಕು; ಅದೂ ಸಣ್ಣ ಆಸ್ಪತ್ರೆಗೆ. ದೊಡ್ಡ ಆಸ್ಪತ್ರೆ ಆಗಬೇಕೆಂದರೆ 45 ಕಿ.ಮೀ. ದೂರ ಹೋಗಬೇಕು.

Advertisement

ಇದು ಉಡುಪಿ – ಚಿಕ್ಕಮಗಳೂರು, ಶಿವಮೊಗ್ಗ ಲೋಕಸಭಾ ಕ್ಷೇತ್ರ, ಕುಂದಾಪುರ, ಬೈಂದೂರು ವಿಧಾನಸಭಾ ಕ್ಷೇತ್ರಗಳೆರಡರ ವ್ಯಾಪ್ತಿಯಲ್ಲಿ ಬರುವ ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ಕೆಳಸುಂಕ, ಜಡ್ಡಿನಗದ್ದೆ, ಕೆಲಾ, ನಡಂಬೂರು, ಶ್ಯಾಮೆಹಕ್ಲು, ತೊಂಬಟ್ಟು ಭಾಗದ ಜನರ ಸಂಕಷ್ಟ.

2011ರ ಜಣಗಣತಿ ಪ್ರಕಾರ ಅಮಾಸೆಬೈಲು ಗ್ರಾಮದಲ್ಲಿ 3,593 ಪುರುಷರು, 4,000 ಮಹಿಳೆಯರು ಸೇರಿ 7,593 ಮತದಾರರಿದ್ದಾರೆ. ಇನ್ನು ಒಟ್ಟಾರೆ ಅಮಾಸೆಬೈಲು, ಮಚ್ಚಟ್ಟು, ರಟ್ಟಾಡಿ ಈ 3 ಗ್ರಾಮಗಳು ಸೇರಿ 10 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. ಈಗ ಇನ್ನಷ್ಟು ಹೆಚ್ಚಿದೆ. ಇಷ್ಟೊಂದು ಪ್ರಮಾಣದ ಜನಸಂಖ್ಯೆಯಿದ್ದರೂ ಇಲ್ಲಿ ಆರೋಗ್ಯ ಕೇಂದ್ರವನ್ನು ತೆರೆಯುವ ಮನಸ್ಸನ್ನು ಇಲ್ಲಿನ ಯಾವ ಜನಪ್ರತಿನಿಧಿಗಳೂ ಮಾಡಿಲ್ಲ ಎಂಬುದು ಗ್ರಾಮಸ್ಥರ ಬೇಸರ.

2 ಸಣ್ಣ ಕ್ಲಿನಿಕ್‌
10 ಸಾವಿರಕ್ಕೂ ಅಧಿಕ ಜನಸಂಖ್ಯೆಯಿರುವ 3 ಗ್ರಾಮಗಳನ್ನೊಂಡ ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಪ್ರಸ್ತುತ ಅಮಾಸೆಬೈಲು ಪೇಟೆಯಲ್ಲಿ ಎರಡು ಸಣ್ಣ ಕ್ಲಿನಿಕ್‌ಗಳಿವೆ. ಅದು ಸಹ ಬೆಳಗ್ಗಿನಿಂದ ಸಂಜೆಯವರೆಗೆ ಮಾತ್ರ. ಸಮೀಪದ ಆರೋಗ್ಯ ಕೇಂದ್ರವೆಂದರೆ ಹಾಲಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ. ಅಲ್ಲಿ ರಾತ್ರಿ ಹೊತ್ತಲ್ಲಿ ವೈದ್ಯರಿರುವುದಿಲ್ಲವಾದ್ದರಿಂದ ಆ ಸಂದರ್ಭದಲ್ಲಿ ಯಾರಿಗಾದರೂ ಅನಾರೋಗ್ಯವಾದರೆ 40-45 ಕಿ.ಮೀ. ದೂರದ ಕುಂದಾಪುರಕ್ಕೇ ಬರಬೇಕು. ಅರಣ್ಯ ಪ್ರದೇಶದಲ್ಲಿ ಹಾದುಹೋಗುವ ಏರು-ತಗ್ಗಿನ ಮಣ್ಣಿನ ರಸ್ತೆಯಲ್ಲಿ ಸಂಚರಿಸುವುದೇ ಒಂದು ಸಾಹಸ. ಇನ್ನು ಆ್ಯಂಬುಲೆನ್ಸ್‌ ಅಥವಾ ಬೇರೆ ವಾಹನ ಇಲ್ಲವೇ ಯಾರನ್ನಾದರೂ ಸಹಾಯಕ್ಕಾಗಿ ಕರೆಯೋಣವೆಂದರೆ ನೆಟ್ ವರ್ಕ್ ಕೂಡ ಇಲ್ಲ!

20ಕ್ಕೂ ಹೆಚ್ಚು ಸಾವು
ನಮ್ಮೂರಿಗೊಂದು ಆಸ್ಪತ್ರೆ ಮಂಜೂರು ಮಾಡಿಸಿ ಎಂದು ಸಾಕಷ್ಟು ಬಾರಿ ಸಂಬಂಧಪಟ್ಟ ಎಲ್ಲ ಜನ ಪ್ರತಿನಿಧಿಗಳಿಗೆ, ಇಲಾಖೆಗಳಿಗೆ ಮನವಿ ಸಲ್ಲಿಸಿದ್ದೇವೆ. ಈವರೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹದಗೆಟ್ಟ ರಸ್ತೆ, ಹತ್ತಿರದಲ್ಲಿ ಆಸ್ಪತ್ರೆ ಇಲ್ಲದ್ದರಿಂದ ದಾರಿಯಲ್ಲೇ ಅನೇಕ ಮಂದಿ ಸಾವನ್ನಪ್ಪಿರುವ ನಿದರ್ಶನ ನಮ್ಮ ಕಣ್ಣ ಮುಂದೆಯೇ ಇದೆ. 2 ವರ್ಷಗಳ ಅವಧಿಯಲ್ಲಿಯೇ 20ಕ್ಕೂ ಹೆಚ್ಚು ಮಂದಿ ಈ ಕಾರಣದಿಂದ ಸಾವನ್ನಪ್ಪಿರಬಹುದು ಎನ್ನುತ್ತಾರೆ ಇಲ್ಲಿನ ಗ್ರಾ. ಪಂ. ಸದಸ್ಯ
ಕೃಷ್ಣ ಪೂಜಾರಿ ಅವರು.

Advertisement

ಬೈಂದೂರು ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗಗಳಿಗೆ ಸೂಕ್ತ ಆರೋಗ್ಯ ಸೇವೆ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ. ಅಮಾಸೆಬೈಲಿನ ಬಗ್ಗೆಯೂ ಗಮನಹರಿಸಲಾಗುವುದು. ಮುಖ್ಯಮಂತ್ರಿಗಳ ಬಳಿಯೂ ಮಾತನಾಡಿ ಪ್ರಯತ್ನಿಸಲಾಗುವುದು.
– ಬಿ.ವೈ. ರಾಘವೇಂದ್ರ, ಸಂಸದರು

– ಪ್ರಶಾಂತ್ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next