ಬೆಂಗಳೂರು: ವರ್ತೂರು ಹೋಬಳಿಯ ಮುಳ್ಳೂರು ಗ್ರಾಮದ ಸರ್ಕಾರಿ ಜಮೀನನ್ನು ಖಾಸಗಿಯವರಿಗೆ ಕಾನೂನುಬಾಹಿರವಾಗಿ ಮಾರಾಟ ಮಾಡಲು ಸಹಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಉಪ ನೋಂದಣಾಧಿಕಾರಿ ಎಂ.ಕೆ.ಶಾಂತಮೂರ್ತಿ ಹಾಗೂ ಭೂದಾಖಲೆಗಳ ಜಂಟಿ ನಿರ್ದೇಶರಾದ ಪಿ.ಎಸ್. ಕುಸುಮಲತ ವಿರುದ್ಧ ಯಾವುದೇ ಆತುರದ ಕ್ರಮ ಜರುಗಿಸದಂತೆ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಗಳು ನ್ಯಾ.ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿದ್ದವು. ಆಗ ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ ಆರೋಪಿತ ಅಧಿಕಾರಿಗಳ ವಿರುದ್ಧ ಯಾವುದೇ ಆತುರದ ಕ್ರಮ ಜರುಗಿಸದಂತೆ ಮಧ್ಯಂತರ ಆದೇಶ ಹೊರಡಿಸಿತು. ಅಲ್ಲದೇ, ಪ್ರತಿವಾದಿಗಳಾದ ವಿಲ್ಸನ್ ಗಾರ್ಡನ್ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಈ ಪ್ರಕರಣಗಳಲ್ಲಿ ಅರ್ಜಿದಾರರನ್ನು ಅನಗತ್ಯವಾಗಿ ಸಿಲುಕಿಸಲಾಗಿದೆ. ಅವರಿಗೂ ಇದಕ್ಕೂ ಸಂಬಂಧವಿಲ್ಲ. ಅರ್ಜಿದಾರರು ತಹಸೀಲ್ದಾರ್ ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರು(ಎಡಿಎಲ್‌ಆರ್) ಮಾಡಿರುವ ಪೋಡಿಗೆ ಸಹಿ ಹಾಕಿದ್ದಾರಷ್ಟೇ, ಹಾಗಾಗಿ ಅವರ ವಿರುದ್ಧ ದಾಖಲಿಸಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ನ್ಯಾಯಪೀಠವನ್ನು ಕೋರಿದರು. ಅಷ್ಟಕ್ಕೂ, ಅರ್ಜಿದಾರರೇ ಅಕ್ರಮವಾಗಿ ಸರ್ಕಾರಿ ಭೂಮಿಯನ್ನು ಖಾಸಗಿಯವರಿಗೆ ವರ್ಗಾವಣೆ ಮಾಡಿದ್ದಾರೆನ್ನುವುದಕ್ಕೆ ಯಾವುದೇ ಆಧಾರವಿಲ್ಲ. ಪ್ರತಿವಾದಿಗೆ ದೂರು ದಾಖಲಿಸುವ ಅಧಿಕಾರವಿಲ್ಲ ಎಂದೂ ಸಹ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
ಪ್ರಕರಣದ ಹಿನ್ನೆಲೆ: ಮುಳ್ಳೂರು ಗ್ರಾಮದ ಕೆಲವು ಸರ್ವೆ ನಂಬರ್ 49, 47, 48, 49/6, 44, 45 ಮತ್ತು 91ರ ಜಮೀನುಗಳನ್ನು ನೋಂದಣಿ ಮಾಡಬಾರದೆಂದು ಎಲ್ಲ ಉಪ ನೋಂದಣಾಧಿಕಾರಿಗಳಿಗೆ ನಿರ್ದೇಶಿಸುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ವಿ.ತ್ರಿಲೋಕಚಂದ್ರ ಅವರಿಗೆ ಅ. 11ರಂದು ಪತ್ರ ಬರೆದಿದ್ದರು. ಅದರಂತೆ ತ್ರಿಲೋಕಚಂದ್ರ ಈ ಸರ್ವೇ ನಂಬರ್‌ಗಳ ಜಮೀನು ನೋಂದಣಿ ಮಾಡದಂತೆ ಸೂಚಿಸಿದ್ದರು. ಆದಾಗ್ಯೂ ಬಾಣಸವಾಡಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ದಯಾನಂದ ಭಂಡಾರಿ ವಿಚಾರಣೆ ನಡೆಸಿ, ವರದಿ ಸಲ್ಲಿಸಿದ್ದರು. ಅದನ್ನು ಆಧರಿಸಿ ಬಾಣಸವಾಡಿ ಹಿರಿಯ ಉಪ ನೋಂದಣಾಧಿಕಾರಿ ಎಂ.ಕೆ.ಶಾಂತಮೂರ್ತಿ ಹಾಗೂ ಎಡಿಎಲ್‌ಆರ್ ಪಿ.ಎಸ್. ಕುಸುಮಲತ ಮತ್ತಿತರರ ವಿರುದ್ಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿತ್ತು.