Advertisement
ಇಂಟರ್‌ನೆಟ್ ಸೌಲಭ್ಯ ಇಲ್ಲದ ಪಡಿತರ ಅಂಗಡಿಗಳಲ್ಲಿ ಮ್ಯಾನುವಲ್ ನಿಯಮದಡಿ ಪಡಿತರ ಸಾಮಗ್ರಿ ವಿತರಿಸುತ್ತೇವೆ ಎಂದಿದ್ದರೂ ವಾಸ್ತವ ಸ್ಥಿತಿ ಹಾಗಿಲ್ಲ. ದ.ಕ. ಜಿಲ್ಲೆಯ ಸುಳ್ಯ, ಪುತ್ತೂರು ಸಹಿತ ಕೆಲವು ತಾಲೂಕುಗಳಲ್ಲಿ ಬಯೋಮೆಟ್ರಿಕ್ ಆಧಾರಿತ ಪಾಯಿಂಟ್ ಆಫ್ ಸೇಲ್ ಯಂತ್ರ ಅಳವಡಿಸಿಲ್ಲದ ಕಾರಣದಿಂದ ಫಲಾನುಭವಿಗಳು ಕೂಪನ್‌ಗಾಗಿ ಪಂಚಾಯತ್ ಸುತ್ತುತ್ತಿದ್ದಾರೆ. ಹಾಗಾಗಿ ಫಲಾನುಭವಿಯು ಪಡಿತರ ವಸ್ತುಗಳಿಗೆ ತೆರುವ ಹಣಕ್ಕಿಂತ ದುಪ್ಪಟ್ಟು ಹಣವನ್ನು ಸುತ್ತಾಟಕ್ಕೆ ವ್ಯಯಿಸಬೇಕಿದೆ.
ಪಡಿತರ ಸಾಮಗ್ರಿ ಪಡೆಯುವ ಅರ್ಹ ಕುಟುಂಬಕ್ಕೆ ಸಮರ್ಪಕವಾಗಿ ಸೌಲಭ್ಯ ದೊರೆಯ ಬೇಕು ಎಂಬ ಉದ್ದೇಶದಿಂದ ಸರಕಾರ ಈ ಹಿಂದೆ ಕೂಪನ್ ವ್ಯವಸ್ಥೆ ಜಾರಿಗೊಳಿಸಿತ್ತು. ಅನಂತರ ಅದನ್ನು ರದ್ದುಗೊಳಿಸಿ ಪಾಯಿಂಟ್ ಆಫ್ ಸೇಲ್ ಯಂತ್ರವನ್ನು ಪ್ರತಿ ನ್ಯಾಯಬೆಲೆ ಅಂಗಡಿ ಯಲ್ಲಿ ಅಳವಡಿಸಲು ಆದೇಶಿಸಿತ್ತು. ಫಲಾನು ಭವಿ ಪಡಿತರ ಸಾಮಗ್ರಿ ಪಡೆಯುವ ಮೊದಲು ಇಂಟರ್‌ನೆಟ್ ವ್ಯವಸ್ಥೆ ಆಧಾರಿತ ಬಯೋ ಮೆಟ್ರಿಕ್ ಆಧಾರಿತ ಯಂತ್ರದಲ್ಲಿ ಬೆರಳಚ್ಚು ದಾಖ ಲಿಸಬೇಕು. ರೇಷನ್ ಕಾರ್ಡ್ ಸಂಖ್ಯೆ ದಾಖಲಿಸಿದ ಸಂದರ್ಭ, ಆ ಕುಟುಂಬದ ಪೂರ್ತಿ ವಿವರ ಆನ್‌ಲೈನ್ ಮೂಲಕ ಪ್ರಕಟಗೊಳ್ಳುತ್ತದೆ. ಅನಂತರ ಫಲಾನುಭವಿಗೆ ಸಾಮಗ್ರಿ ದೊರೆಯುತ್ತದೆ. ಕೈ ಕೊಡುವ ಇಂಟರ್‌ನೆಟ್!
ಪಾಯಿಂಟ್ ಆಫ್ ಸೇಲ್ ಯಂತ್ರಕ್ಕೆ ಇಂಟರ್‌ನೆಟ್, ಕಂಪ್ಯೂಟರ್ ಸೌಲಭ್ಯ ಅಗತ್ಯವಿದೆ. ಆದರೆ ಗ್ರಾಮಾಂತರ ಪ್ರದೇಶದ ಪಡಿತರ ವಿತರಣ ಕೇಂದ್ರಗಳಲ್ಲಿ ಸೌಲಭ್ಯದ ಕೊರತೆ ಇದೆ. ಇರುವೆಡೆ ಸರ್ವರ್ ಕೈ ಕೊಡುತ್ತಿದೆ. ಈ ಹಿಂದೆ ಮ್ಯಾನುವಲ್ ನಿಯಮ ಇದ್ದ ಸಂದರ್ಭ ಫಲಾನು ಭವಿ ಕಾಯುವ ಸ್ಥಿತಿ ಇರಲಿಲ್ಲ. ಈ ಡಿಜಿಟಲ್ ವ್ಯವಸ್ಥೆಯಲ್ಲಿ ತಾಸುಗಟ್ಟಲೆ ಅಂಗಡಿ ಮುಂದೆ ಕೂರಬೇಕಿದೆ. ಇಂಟರ್‌ನೆಟ್ ಕೈ ಕೊಟ್ಟರೆ ಅತ್ತ ಸಿಬಂದಿಗೂ ತಲೆನೋವು.
Related Articles
ಪಡಿತರ ಸೌಲಭ್ಯ ವಿತರಣೆಗೆ ಸಂಬಂಧಿಸಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಎರಡು ಅವಕಾಶ ನೀಡಿದೆ ಅನ್ನುತ್ತಾರೆ ಅಧಿ ಕಾರಿ ಗಳು. ಒಂದೋ ಬಯೋಮೆಟ್ರಿಕ್‌ವ್ಯವಸ್ಥೆ ಅಳ ವಡಿಸುವುದು. ಇಲ್ಲದಿದ್ದರೆ ಆಗುವ ತನಕ ಕೂಪನ್ ಮೂಲಕ ಸಾಮಗ್ರಿ ವಿತರಿಸುವುದಾಗಿದೆ.
Advertisement
ಇಂಟರ್‌ನೆಟ್, ಕಂಪ್ಯೂಟರ್ ಸೌಲಭ್ಯ ಇಲ್ಲದ ಪಡಿತರ ಅಂಗಡಿಗಳಲ್ಲಿ ಪಾಯಿಂಟ್ ಆಫ್ ಸೇಲ್ ಯಂತ್ರ ಅಳವಡಿಸುವಂತಿಲ್ಲ. ಈ ವ್ಯಾಪ್ತಿಯ ಫಲಾನುಭವಿಗಳು ಸ್ಥಳೀಯ ಗ್ರಾಮ ಪಂಚಾಯತ್‌ನಿಂದ ಕೂಪನ್ ಪಡೆದುಕೊಳ್ಳಬೇಕಿದೆ. ಇದು ಫಲಾನುಭವಿಗೆ ನುಂಗಲಾರದ ತುತ್ತಾಗಿದೆ.
ಪಂಚಾಯತ್ ಗೋಳುಒಂದೆಡೆ ಪಡಿತರ ಅಂಗಡಿಗಳಲ್ಲಿ ಇಂಟರ್ ನೆಟ್, ಕಂಪ್ಯೂಟರ್ ಸಮಸ್ಯೆ ಇದ್ದರೆ, ಇನ್ನೊಂದೆಡೆ ಗ್ರಾ.ಪಂ.ನಲ್ಲಿ ವ್ಯವಸ್ಥೆ ಇದ್ದರೂ ಅದು ಸಮರ್ಪಕ ವಾಗಿರದ ಸ್ಥಿತಿಯಿದೆ. ಸರಕಾರ ಪ್ರತಿ ಪಂಚಾ ಯತ್ ನಲ್ಲಿ ಬಾಪೂಜಿ ಕೇಂದ್ರ ಸ್ಥಾಪಿಸಿ ನೂರು ಸೌಲಭ್ಯ ನೀಡುವ ಯೋಜನೆ ರೂಪಿ ಸಿದ್ದರೂ ಪೂರಕ ಸಿಬಂದಿ, ವ್ಯವಸ್ಥೆ ಇಲ್ಲದೆ ಹೆಣಗಾಡು ತ್ತಿದೆ. ಇಲ್ಲಿ ಪದೇ ಪದೇ ಕೈಕೊಡುವ ಸರ್ವರ್, ಸಿಬಂದಿ ಕೊರತೆಗೆ ಮುಕ್ತಿ ಸಿಕ್ಕಿಲ್ಲ. ಹಾಗಾಗಿ ಕೂಪನ್ ವಿತರಣೆಯೇ ಪಂಚಾಯತ್‌ಗೆ ಹೊರೆ ಆಗಿ ಪರಿಣಮಿಸಿದೆ ಅನ್ನುತ್ತದೆ ಸದ್ಯದ ಚಿತ್ರಣ. ಖರ್ಚು ದುಪ್ಪಟ್ಟು
ಪಂಚಾಯತ್‌ಗೆ ತೆರಳಿ, ಅಲ್ಲಿ ಕೂಪನ್‌ಗೆ ಕಾಯಬೇಕು. ನಾವು ಕೂಪನ್‌ಗೆ ಹೋದಾಗ ಇಂಟರ್‌ನೆಟ್ ಕೈಕೊಟ್ಟರೆ ಮರುದಿನ ಹೋಗ ಬೇಕು. ಕೂಪನ್ ಬಗ್ಗೆ ಮಾಹಿತಿ ಇಲ್ಲದ ಫಲಾನುಭವಿ ನೇರವಾಗಿ ಪಡಿತರ ಅಂಗಡಿಗೆ ಹೋದರೆ ಬರಿಗೈಯಲ್ಲೇ ಬರಬೇಕಿದೆ. ಕೂಪನ್ ಎಲ್ಲಿ ಸಿಗುತ್ತದೆ, ಯಾರು ಕೊಡುತ್ತಾರೆ ಎಂಬ ಸಂಪೂರ್ಣ ಮಾಹಿತಿ ಕೂಡ ಸಿಗುತ್ತಿಲ್ಲ. ಕೆಲವು ಪಂಚಾಯತ್‌ಗಳಿಗೆ ಸರಿಯಾದ ಸಂಚಾರ ವ್ಯವಸ್ಥೆಯೂ ಇಲ್ಲ. ಬಾಡಿಗೆ ವಾಹನದಲ್ಲಿ ಕೂಪನ್‌ಗಾಗಿ ಗ್ರಾ.ಪಂ.ಗೆ ತೆರಳಬೇಕಿದೆ. ನೆಟ್‌ವರ್ಕ್ ಕೈ ಕೊಟ್ಟರೆ ಮೂರು ನಾಲ್ಕು ಬಾರಿ ಪಂಚಾಯತ್‌ಗೆ ಅಲೆದಾಡಬೇಕು. ಇಲ್ಲಿ ಪಡಿತರ ಸಾಮಗ್ರಿ ಕೊಳ್ಳಲು ಪಾವತಿಸುವ ಮೊತ್ತಕ್ಕಿಂತ ಎರಡು ಮೂರು ಪಟ್ಟು ಹೆಚ್ಚು ಹಣ ಸುತ್ತಾಟಕ್ಕೆ ಖರ್ಚಾಗುತ್ತದೆ ಎಂದು ಪಡಿತರ ಚೀಟಿದಾರರು ದೂರುತ್ತಿದ್ದಾರೆ. ಮೂರು ಲಕ್ಷ ಪಡಿತರ ಚೀಟಿದಾರರು
ಉಭಯ ಜಿಲ್ಲೆಗಳಲ್ಲಿ ಒಟ್ಟು 768 ಪಡಿತರ ಅಂಗಡಿಗಳಿವೆ. 3 ಲಕ್ಷಕ್ಕೂ ಮಿಕ್ಕಿ ಪಡಿತರ ಚೀಟಿದಾರರು ಇದ್ದಾರೆ. ದ.ಕ. ಜಿಲ್ಲೆಯಲ್ಲಿ 107 ಪಡಿತರ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಆಧಾರಿತ ವ್ಯವಸ್ಥೆ ಇಲ್ಲ. ಸುಳ್ಯದಲ್ಲಿ 28, ಬೆಳ್ತಂಗಡಿ-27, ಪುತ್ತೂರು 39, ಬಂಟ್ವಾಳ-9, ಮಂಗಳೂರು 7 ಕಡೆಗಳಲ್ಲಿ ಅಳವಡಿಕೆ ಆಗಬೇಕಿದೆ. ಉಡುಪಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ 295 ಕೇಂದ್ರಗಳಲ್ಲಿ 120ರಲ್ಲಿ ಅಳವಡಿಕೆಗೆ ಬಾಕಿ ಇದೆ. ಕಾರ್ಕಳದಲ್ಲಿ 40, ಕುಂದಾಪುರದಲ್ಲಿ 82, ಉಡುಪಿಯಲ್ಲಿ 54 ಪಡಿತರ ಅಂಗಡಿಗಳಲ್ಲಿ ಬಯೋಮೆಟ್ರಕ್ ಅಳವಡಿಸಿಲ್ಲ. ಈ ಜಿಲ್ಲೆಯ ಅಧಿಕಾರಿ ನೀಡಿದ ಮಾಹಿತಿ ಅನ್ವಯ, ಉಡುಪಿ ಜಿಲ್ಲೆಯಲ್ಲಿ ಹಳೆ ದರ ಪಟ್ಟಿ ಅನ್ವಯ ಆಹಾರ ಸಾಮಗ್ರಿ ವಿತರಿಸಲಾಗುತ್ತಿದ್ದು, ಕೂಪನ್ ವ್ಯವಸ್ಥೆ ಜಾರಿ ಮಾಡಿಲ್ಲ ಎಂದಿದ್ದಾರೆ. - ಕಿರಣ್ ಪ್ರಸಾದ್ ಕುಂಡಡ್ಕ