ಬೆಂಗಳೂರು: ಹದಿನೈದು ಬಾರಿ ಬಜೆಟ್ ಮಂಡಿಸಿದ ಅನುಭವ ಹೊಂದಿದ್ದರೂ “ಸಿದ್ದು ನಾಮಿಕ್ಸ್’ ನಿಂದ ರಾಜ್ಯದ ಮೇಲೆ
ಕೇವಲ 9 ತಿಂಗಳಲ್ಲಿ 1.90 ಲಕ್ಷ ಕೋಟಿ ರೂ. ಸಾಲದ ಹೊರೆ ಬಿದ್ದಿದೆ. ಲೋಕಸಭಾ ಚುನಾವಣೆ ಮುಗಿದ ಬಳಿಕ ಗ್ಯಾರಂಟಿ ಯೋಜನೆಗಳ ಅಸ್ತಿತ್ವಕ್ಕೆ ಗ್ಯಾರಂಟಿ ಇಲ್ಲ ಎಂದು ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ ಆರೋಪಿಸಿದ್ದಾರೆ.
ಬಜೆಟ್ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳನ್ನು ರದ್ದುಗೊಳಿಸುತ್ತದೆ. ಅಂಗನವಾಡಿ, ಆಶಾ ಕಾರ್ಯಕರ್ತರು, ಹೊರ ಗುತ್ತಿಗೆ ಹಾಗೂ ಗುತ್ತಿಗೆ ಕಾರ್ಮಿಕರು, ಅತಿಥಿ ಶಿಕ್ಷಕರು, ಗ್ರಾಮ ಸಹಾಯಕರು ಮೊದಲಾದವರನ್ನು ಗ್ಯಾರಂಟಿ ಯೋಜನೆಯಿಂದ ಹೊರಗಿಡುವಂತೆ ಹಣಕಾಸು ಇಲಾಖೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಆರೋಪಿಸಿದರು.
ಕಳೆದ ಮಧ್ಯಾಂತರ ಬಜೆಟ್‌ನಲ್ಲಿ ಸಿದ್ದರಾಮಯ್ಯ 85 ಸಾವಿರ ಕೋಟಿ ರೂ. ಸಾಲ ಮಾಡಿದ್ದರು. ಮುಂದಿನ ಮಾರ್ಚ್ ಗೆ ಅನ್ವಯವಾಗುವಂತೆ.1.5 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಒಟ್ಟಾರೆ 9 ತಿಂಗಳ ಅವಧಿಯಲ್ಲಿ 1.90 ಲಕ್ಷ ರೂ. ಸಾಲ ಮಾಡಿದ್ದಷ್ಟೇ ಈ ಸರಕಾರದ ಸಾಧನೆ. ಯಾವ ಇಲಾಖೆಗೂ ಬಜೆಟ್ ಪ್ರಸ್ತಾವಿತ ಅನುದಾನ ಬಿಡುಗಡೆ ಮಾಡಿಲ್ಲ. ಹೀಗಾಗಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಂಠಿತಗೊಂಡಿವೆ. ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕೆಂಬಂತೆ ಸಿದ್ದರಾಮಯ್ಯ ಆಡಳಿತ ನಡೆಸುತ್ತಿದ್ದಾರೆ ಎಂದರು.
ತಾವು ಅಹಿಂದ ವರ್ಗದ ಹಿತ ರಕ್ಷಕ ಎಂದು ಬಿಂಬಿಸಿಕೊಂಡಿರುವ ಸಿದ್ದರಾಮಯ್ಯನವರ ಆಡಳಿತದಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಕ್ಕೆ ಹೆಚ್ಚು ಅನ್ಯಾಯವಾಗಿದೆ. ಈ ವರ್ಗದ ಏಳ್ಗೆಗಾಗಿ ಇರುವ ಅನುದಾನವನ್ನು ಕಡಿತ ಮಾಡಿ ಅಲ್ಪಸಂಖ್ಯಾಕರಿಗೆ ನೀಡಿದ್ದಾರೆ ಎಂದು ಆರೋಪಿಸಿದ ಬೆಲ್ಲದ್, ವಿವಿಧ ನಿಗಮಗಳಿಗೆ ಬಿಜೆಪಿ ಹಾಗೂ ಕಾಂಗ್ರೆಸ್ ಅವಧಿಯಲ್ಲಿ ಬಿಡುಗಡೆ ಮಾಡಿದ ಅನುದಾನದ ಪಟ್ಟಿಯನ್ನು ಪ್ರಸ್ತುತಪಡಿಸಿದರು.
ವೀರಶೈವ -ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಬೊಮ್ಮಾಯಿ ಸರಕಾರದ ಅವಧಿಯಲ್ಲಿ 100 ಕೋ. ರೂ. ನೀಡಿದ್ದರೆ ನೀವು ಅದನ್ನು 60 ಕೋಟಿ ರೂ.ಗೆ ಇಳಿಸಿದ್ದೀರಿ. ಕಾಂಗ್ರೆಸ್‌ನ ಲಿಂಗಾಯತ ಶಾಸಕರಿಗೆ ಮುಖ ಎತ್ತಿಕೊಂಡು ಓಡಾಡದ ಸ್ಥಿತಿ ನಿರ್ಮಾಣ ಮಾಡಿದ್ದೀರಿ ಎಂದು ಆರೋಪಿಸಿದರು.
ಅಬಕಾರಿ ಸುಂಕ ದೇಶದಲ್ಲೇ ಹೆಚ್ಚು
ಅಬಕಾರಿ ಸುಂಕ ವಸೂಲಿ ಮಾಡುವುದರಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. 38,476 ಕೋ. ರೂ. ಗುರಿಯನ್ನು ಈ ವರ್ಷ ನೀಡಲಾಗಿದೆ. ಮದ್ಯಕ್ಕೆ ಸುಮಾರು 15 ಸ್ಲ್ಯಾಬ್ ಗಳಲ್ಲಿ ತೆರಿಗೆ ವಿಧಿಸಲಾಗುತ್ತದೆ. ಒಟ್ಟು ಸಂಗ್ರಹದ ಶೇ.85ರಷ್ಟು ಹಣ ಕಡಿಮೆ ದರ್ಜೆಯ ಮದ್ಯ ಮಾರಾಟದಿಂದ ಬರುತ್ತಿದ್ದು, ಇದು ಕೂಡ ಪರೋಕ್ಷವಾಗಿ ಬಡವರ ಶೋಷಣೆ ಎಂದರು.