ಚೆನ್ನೈ: ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಬಹುಭಾಷಾ ನಟ ಕಮಲ್ ಹಾಸನ್ ಮಂಗಳವಾರ ತಿಳಿಸಿದ್ದು, ಕೂಡಲೇ ತಾವು ರಾಜಕೀಯ ಜೀವನ ಪ್ರವೇಶಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ತಮ್ಮ ಹುಟ್ಟುಹಬ್ಬದ ದಿನದಂದೇ(ಇಂದು) ನೂತನ ಪಕ್ಷವನ್ನು ಘೋಷಿಸಲಿದ್ದಾರೆ ಎಂಬ ದಟ್ಟ ವದಂತಿ ಹಬ್ಬಿತ್ತು. ಆದರೆ ಯಾವುದೇ ಘೋಷಣೆ ಮಾಡುವ ಮುನ್ನ ಸಾಕಷ್ಟು ಶ್ರಮದ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ತಮ್ಮ ರಾಜಕೀಯ ಪ್ರವೇಶ ಕಾಲ ಸನ್ನಿಹಿತವಾಗಿದ್ದು, ಇದರ ಪ್ರಥಮ ಹೆಜ್ಜೆಯಾಗಿ ಹುಟ್ಟುಹಬ್ಬದಂದು ಚೆನ್ನೈನ ಖಾಸಗಿ ಹೋಟೆಲ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೊಸ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ್ದಾರೆ.
ನಾನು ಇಂದು ಹೊಸ ರಾಜಕೀಯ ಪಕ್ಷವನ್ನು ಘೋಷಿಸುತ್ತೇನೆ ಎಂದು ಹಲವು ವದಂತಿ ಹರಡಿತ್ತು. ಆದರೆ ಅದಕ್ಕೂ ಮುನ್ನ ನಾನು ಕೂಡಾ ಸಾಕಷ್ಟು ಕೆಲಸ ಮಾಡಲಿಕ್ಕಿದೆ. ನಿಮ್ಮ ಜತೆ ಕುಳಿತುಕೊಂಡು ವಿಶ್ಲೇಷಣೆ ನಡೆಸಿದ ನಂತರವೇ ರಾಜಕೀಯ ಪಕ್ಷವನ್ನು ಘೋಷಿಸುವುದಾಗಿ ತಿಳಿಸಿದರು.
ಆ ನಿಟ್ಟಿನಲ್ಲಿ ತಮ್ಮ ಅಭಿಮಾನಿಗಳು, ಜನರ ಜತೆ ನೇರ ಸಂಪರ್ಕದಲ್ಲಿ ಇರಲು ಹೊಸ ಆಪ್ ಅನ್ನು ಬಿಡುಗಡೆ ಮಾಡಿರುವುದಾಗಿ ಹೇಳಿದರು. ಈ ಆಪ್ ಮಾಹಿತಿದಾರರಿಗೊಂದು ವೇದಿಕೆಯಾಗಿದೆ. ಎಲ್ಲಿ ಯಾವುದೇ ತಪ್ಪುಗಳು ನಡೆದರು ಕೂಡಾ ಈ ಆಪ್ ಅನ್ನು ಉಪಯೋಗಿಸಿಕೊಂಡು ಮಾಹಿತಿ ನೀಡಬಹುದಾಗಿದೆ. ಈ ಮೂಲಕ ನ್ಯಾಯ ಒದಗಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಹಿಂದುಗಳ ಮನ ನೋಯಿಸುವುದು ನನ್ನ ಉದ್ದೇಶವಲ್ಲ:
ಇತ್ತೀಚೆಗಷ್ಟೇ ಬಲಪಂಥೀಯ ಉಗ್ರಗಾಮಿಗಳ ಬಗ್ಗೆಯೂ ಎಚ್ಚರದಿಂದ ಇರಬೇಕು ಎಂದು ಹೇಳಿಕೆ ನೀಡುವ ಮೂಲಕ ನಟ ಕಮಲ್ ಹಾಸನ್ ತೀವ್ರ ವಿವಾದಕ್ಕೊಳಗಾಗಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಉಪಯೋಗಿಸಿದ ಶಬ್ದ ತುಂಬಾ ಕಠಿಣವಾದದ್ದು. ನಾನು ನಿಜಕ್ಕೂ ಹಿಂದುಗಳ ಮನಸ್ಸನ್ನು ನೋಯಿಸಬೇಕೆಂದು ಈ ಹೇಳಿಕೆ ನೀಡಿಲ್ಲ. ನಾನು ಕೂಡಾ ಹಿಂದೂ ಕುಟುಂಬದಿಂದ ಬಂದವನು, ಆದರೆ ನಾವು ಅದನ್ನು(ಹಿಂದುತ್ವ) ಮತ್ತೊಂದು ದಿಕ್ಕಿನತ್ತ ಕೊಂಡೊಯ್ಯಬೇಕಾದ ಅಗತ್ಯತೆ ಇದೆ ಎಂದು ವಿಶ್ಲೇಷಿಸಿದರು